ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಎಸ್‌ಟಿ ಮೀಸಲು ಕ್ಷೇತ್ರ ಲೋಹಾರದಂಗದಿಂದ ಹಣಕಾಸು ಸಚಿವ ರಾಮೇಶ್ವರ ಓರಾನ್ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ತ್ರಿಪುರಾ, ಒಡಿಶಾ ಹಾಗೂ ನಾಗಾಲ್ಯಾಂಡ್‌ನಲ್ಲಿ ಪಕ್ಷದ ಉಸ್ತುವಾರಿಯಾಗಿರುವ ಅಜಯ್ ಕುಮಾರ್ ಅವರು ಜೆಮ್‌ಶೆಡ್‌ಪುರ್ ಪೂರ್ವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಅಜಯ್ ಕುಮಾರ್ ಅವರು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಈ ಹಿಂದೆ ಜೆಮ್‌ಶೆಡ್‌ಪುರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಓರಾನ್ ಸಹ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಜಾರ್ಖಂಡ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷರೂ ಹೌದು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್-ನೆತನ್ಯಾಹು ಮೇಲೇಕೆ ಭಾರತೀಯರಿಗೆ ಪ್ರೀತಿ?
ಉಳಿದಂತೆ, ಶಿಪ್ಲಿ ನೇಹಾ ಟಿರ್ಕಿ ಅವರನ್ನು ಮಂದಾರ(ಎಸ್‌ಟಿ ಮೀಸಲು) ಕ್ಷೇತ್ರದಿಂದ ಕಣಕ್ಕಿಳಿಸಿದೆ. ನೇಹಾ ಇದೇ ಕ್ಷೇತ್ರದ ಶಾಸಕರೂ ಹೌದು. ನೇಹಾ ಅವರ ತಂದೆ ಬಂಧು ಟಿರ್ಕಿ ಜಾರ್ಖಂಡ್‌ನ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದಾರೆ.
ಇದಕ್ಕೂ ಮುನ್ನ, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಅಭ್ಯರ್ಥಿಗಳ ಕುರಿತಂತೆ ಚರ್ಚೆ ನಡೆಸಲಾಗಿತ್ತು.
ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಪಕ್ಷವು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರವನ್ನು ಹಂಚಿಕೊಂಡಿವೆ.
ಜಾರ್ಖಂಡ್‌ನ 81 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ್ತು ಫಲಿತಾಂಶಗಳು ನವೆಂಬರ್ 23 ರಂದು ಬರುತ್ತವೆ. ಮೊದಲ ಹಂತದಲ್ಲಿ ನವೆಂಬರ್ 13 ರಂದು 43 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ ನವೆಂಬರ್ 20 ರಂದು 38 ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣಾ ಆಯೋಗದ ಪ್ರಕಾರ ಜಾರ್ಖಂಡ್‌ನಲ್ಲಿ ಒಟ್ಟು 2 ಕೋಟಿ 55 ಲಕ್ಷ 18 ಸಾವಿರದ 642 ಮತದಾರರಿದ್ದಾರೆ. ಇವರಲ್ಲಿ 1 ಕೋಟಿ 29 ಲಕ್ಷ 97 ಸಾವಿರದ 325 ಪುರುಷ ಹಾಗೂ 1 ಕೋಟಿ 25 ಲಕ್ಷ 20 ಸಾವಿರದ 910 ಮಹಿಳಾ ಮತದಾರರಿದ್ದಾರೆ.
