ಅತ್ಯಾಚಾರಿಗಳಿಗೆ, ಕೊಲೆಪಾತರಿಗೆ ಸನ್ಮಾನ ಮಾಡುವುದನ್ನು ಗುಜರಾತ್, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಸನ್ಮಾನಿಸಿ, ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡಲಾಗಿದೆ. ಇದನ್ನು ಖಂಡಿಸಿ ಚಿಕ್ಕಮಗಳೂರು ನಗರದ ಅಜಾದ್ ಪಾರ್ಕ್ ಬಳಿ ಎದ್ದೇಳು ಕರ್ನಾಟಕ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಮ್ಮದೇ ರಾಜ್ಯದಲ್ಲಿ ಕರ್ನಾಟಕದ ಹೆಮ್ಮೆಯ ದನಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದನ್ನು ಕಂಡು ನಾವು ದಂಗಾಗಿದ್ದೇವೆ. ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ, ಆದ ದೊಡ್ಡ ಕಳಂಕವಾಗಿದೆ.ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವಾಗುತ್ತಿದೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಲೆ ಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆ ಹಾಗೂ ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಾಕಾರಿ ನಡೆಯನ್ನು ತೀವ್ರವಾಗಿ ಖಂಡಿಸಬೇಕು ಎಂದು ಎದ್ದೇಳು ಕರ್ನಾಟಕ,ಪ್ರಗತಿಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಭಾರೀ ಮಳೆ; ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ
ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ಪ್ರಚೋದನೆಯಡಿ ಕೇಸು ದಾಖಲಿಸಬೇಕು. ವ್ಯಕ್ತಿಗಳ ಮೇಲೆ ಕೊಲೆ ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು. ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹಕ್ಕೊತ್ತಾಯಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತದ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
