ಬೆಂಗಳೂರಿನಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಮಳೆಯಿಂದಾಗಿ ಹಲವಾರು ಸಮಸ್ಯೆಗಳು ತಲೆದೋರಿವೆ. ಮಳೆಯಿಂದಾಗಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದಿದ್ದು, ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಹೆಣ್ಣೂರು ಬಳಿಯ ಬಾಬುಸಾ ಪಾಳ್ಯದಲ್ಲಿ ದುರ್ಘಟನೆ ಸಂಭವಿಸಿದೆ. ಕಟ್ಟದ ಅವಶೇಷಗಳ ಅಡಿಯಲ್ಲಿ 16 ಮಂದಿ ಕಾರ್ಮಿಕರು ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ಮಿಕರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂವರನ್ನು ರಕ್ಷಿಸಲಾಗಿದೆ. ಮೂವರು ಕಾರ್ಮಿಕರ ಮೃತದೇಹಗಳನ್ನೂ ಹೊರತೆಗೆದಿದ್ದಾರೆ.
ಕಟ್ಟಡ ಕುಸಿದು ಬೀಳುತ್ತಿದ್ದಂತೆಯೇ ಕಾರ್ಮಿಕರೊಬ್ಬರು ಬಚಾವಾಗಲು ಯತ್ನಿಸಿದ್ದಾರೆ. ಅದರೆ, ಅವರ ಮೇಲೂ ಕಟ್ಟಡ ಭಾಗಗಳು ಬಿದ್ದಿದ್ದು, ಗಂಭೀರ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.