ಚಾಮರಾಜನಗರದಲ್ಲಿ ಕನ್ನಡರಾಜ್ಯೋತ್ಸವವನ್ನು ಅತ್ಯಂತ ಅರ್ಥಪೂರ್ಣ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಂಘ ಸಂಸ್ಥೆಗಳು, ಅಧಿಕಾರಿಗಳು ಸೇರಿದಂತೆ ಇತರರು ಭಾಗವಹಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ
ಸಂಘಟನೆಗಳ ಮುಖಂಡರು ಮಾತನಾಡಿ, “ಜಿಲ್ಲೆಯಲ್ಲಿ ಕನ್ನಡರಾಜ್ಯೋತ್ಸವ ವ್ಯಾಪಕವಾಗಿ ಆಚರಿಸುವಂತಾಗಬೇಕು. ಎಲ್ಲ ಗ್ರಾಮ ಪಂಚಾಯಿತಿ, ಬ್ಯಾಂಕುಗಳು ಇತರೆ ಕಚೇರಿಗಳಲ್ಲಿ ಆಚರಣೆ ಮಾಡಬೇಕು. ವಿವಿಧ ಕ್ಷೇತ್ರಗಳಲ್ಲಿ ದುಡಿದ ಜಿಲ್ಲೆಯ ಕನ್ನಡಿಗರನ್ನು ಗೌರವಿಸಬೇಕು. ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಗಡಿ ಭಾಗಗಳಲ್ಲಿ ವಿಶೇಷವಾಗಿ ಕನ್ನಡರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಬೇಕು” ಎಂದರು.
“ಬ್ಯಾಂಕುಗಳಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು. ಜಿಲ್ಲೆಯಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿ ನಾಮಫಲಕಗಳು ಇರಬೇಕು. ಈ ಬಗ್ಗೆ ಸಾಕಷ್ಟು ಗಮನಸೆಳೆಯಲಾಗಿದೆ. ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಹಾಕುವಂತೆ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯ ಜಿಲ್ಲೆಯ ಕನ್ನಡಿಗರಿಗೆ ಉದ್ಯೋಗ ದೊರಕಬೇಕು. ಕನ್ನಡ ಜಾಗೃತಿ ಅಭಿಯಾನವನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೈಗೊಳ್ಳಬೇಕು. ಗಡಿ ಜಿಲ್ಲೆಯಲ್ಲಿ ಕನ್ನಡ ಪರ ಹೆಚ್ಚಿನ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳನ್ನು ನಡೆಬೇಕು” ಎಂಬುದು ಸೇರಿದಂತೆ ಇನ್ನಿತರ ಸಲಹೆಗಳನ್ನು ಮುಂದಿಟ್ಟರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, “ಕಳೆದ ಬಾರಿ ಎಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದೇವೆ. ಅರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿತ್ತು. ಈ ಬಾರಿಯೂ ಸಹ ಅದ್ದೂರಿಯಾಗಿ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಚಟುವಟಿಕೆಗಳ ಮೂಲಕ ಇನ್ನಷ್ಟು ಆಕರ್ಷಣೀಯವಾಗಿ ಕನ್ನಡರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಲಾಗುವುದು. ಸಭೆಯಲ್ಲಿ ನೀಡಿರುವ ಸಲಹೆಗಳನ್ನು ಪರಿಗಣಿಸಿ ಕಾರ್ಯಕ್ರಮ ರೂಪಿಸಲಾಗುವುದು” ಎಂದರು.
“ಕನ್ನಡ ಭಾಷೆಯಲ್ಲಿಯೇ ಪ್ರಧಾನವಾಗಿ ನಾಮಫಲಕಗಳನ್ನು ಅಳವಡಿಸಲು ಹಾಗೂ ಕನ್ನಡ ಅನುಷ್ಠಾನದಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ವಹಿಸಬೇಕು. ನಾಮಫಲಕ ಸಂಬಂಧ ನೀಡುವ ಆದೇಶ ಪಾಲನೆ ಮಾಡದ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದು ಮಾಡಬೇಕು. ಬ್ಯಾಂಕುಗಳಲ್ಲಿ ಕನ್ನಡ ಬಳಕೆಯಾಗಬೇಕು. ಬ್ಯಾಂಕುಗಳಲ್ಲಿ ಗ್ರಾಹಕರ ವ್ಯವಹಾರಕ್ಕೆ ಅನುಕೂಲವಾಗುವಂತೆ ಸಹಾಯವಾಣಿ ಡೆಸ್ಕ್‌ನಲ್ಲಿ ಕನ್ನಡ ಭಾಷೆ ಬಲ್ಲವರನ್ನು ನಿಯೋಜಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಗಳು, ಬ್ಯಾಂಕುಗಳಲ್ಲಿ ಕನ್ನಡರಾಜ್ಯೋತ್ಸವ ಆಚರಿಸಿ ವರದಿ ನೀಡಬೇಕು” ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಣ್ಣುಮಕ್ಕಳ ಸುರಕ್ಷತೆ, ಹಕ್ಕು, ಆಶಯಗಳಿಗೆ ‘ಅಪ್ತಗೆಳತಿ’ ಪೂರಕ: ಶಾಸಕ ಎ ಆರ್ ಕೃಷ್ಣಮೂರ್ತಿ
“ನವೆಂಬರ್ 30ರಂದು ಗಡಿಭಾಗದ ಪುಣಜನೂರಿನಲ್ಲಿ ಕನ್ನಡರಾಜ್ಯೋತ್ಸವವನ್ನು ಆಚರಿಸಲಾಗುವುದು. ಜಿಲ್ಲೆಯನ್ನು ಸಂಪರ್ಕಿಸುವ ಭಾಗಗಳಲ್ಲಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸವುಳ್ಳ ಸ್ವಾಗತ ಕಮಾನುಗಳನ್ನು ಅಳವಡಿಸಲು ಕ್ರಮ ವಹಿಸಲಿದ್ದೇವೆ. ಕನ್ನಡ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು” ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿ ಟಿ ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಗಿರಿಜಾ, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರಾದ ಚಾ ರಂ ಶ್ರೀನಿವಾಸಗೌಡ, ಸುರೇಶ್ ವಾಜಪೇಯಿ, ಚಾ ಗು ನಾಗರಾಜು, ಸಿ ಕೆ ಮಂಜುನಾಥ್, ಸಿ ಎಂ ಕೃಷ್ಣಮೂರ್ತಿ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಸೋಮನಾಯಕ, ಜಿ ಬಂಗಾರು, ಚಾ ರಾ ಕುಮಾರ್, ಕಹಳೆ ರವಿಚಂದ್ರ ಪ್ರಸಾದ್, ಪ್ರಶಾಂತ್, ನಾಗೇಶ್, ನಟರಾಜು, ಶಿವಣ್ಣ, ಮಹೇಶ್, ಶಿವು, ಲಿಂಗರಾಜು ಸೇರಿದಂತೆ ಮೊದಲಾದವರು ಇದ್ದರು.