ಮನೆ ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಉಲ್ಲಂಘನೆ ಮಾಡಿದ್ದು, ವೃದ್ಧ ದಂಪತಿಗೆ ವಂಚನೆ ಮಾಡಿದ್ದಾರೆ ಎಂದು ವಕೀಲ ವೆಂಕಟೇಶ್ ಆರೋಪ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ತಮ್ಮ ಕಚೇರಿಯಲ್ಲಿ ಮಾತನಾಡಿ, “ತಾಲೂಕಿನ ಮಿರ್ಚಿಬೋರನಕೊಪ್ಪಲು ಗ್ರಾಮದಲ್ಲಿ ಮರಿಸ್ವಾಮಾಚಾರ ಮತ್ತು ಸರೋಜಮ್ಮ ದಂಪತಿ ವಾಸವಾಗಿದ್ದರು. ಸತೀಶ್, ಮರಿಸ್ವಾಮಾಚಾರ ತಮ್ಮನ ಮಗ ದಂಪತಿ ಗಮನಕ್ಕೆ ಬಾರದಂತೆ ಪ್ರಮಾಣಪತ್ರ ಮಾಡಿಸುವ ನೆಪದಲ್ಲಿ ನೋಂದಣಿ ಮಾಡಿಸಿಕೊಂಡು ಅವರ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಈ ಮೋಸ ದಂಪತಿಗೆ ಗೊತ್ತಾಗಿ ಹಿರಿಯ ನಾಗರಿಕರ ಪ್ರಕರಣದಡಿ ಪಾಂಡವಪುರ ವಿಭಾಗಾಧಿಕಾರಿಗಳ ಕೋರ್ಟಿನಲ್ಲಿ ಕೇಸು ದಾಖಲು ಮಾಡಿದ್ದರು. ಬಳಿಕ ಹಿರಿಯರ ಪರ ತೀರ್ಪು ಬಂದಿದೆ” ಎಂದು ವಕೀಲ ವೆಂಕಟೇಶ್ ಮಾಹಿತಿ ನೀಡಿದರು.
“ಉಪವಿಭಾಗಾಧಿಕಾರಿಗಳ ತೀರ್ಪಿನ ಮೇಲೆ ಸತೀಶ ಹೈಕೋರ್ಟಿಗೆ ಹೋಗಿ ತಡೆ ತಂದಿದ್ದಾರೆ. ಇದನ್ನು ಎಸಿ ಕೂಡ ತಹಶೀಲ್ದಾರರಿಗೆ ಹೈಕೋರ್ಟಿನ ಪ್ರೊಸೀಡಿಂಗನ್ನು ಫಾಲೋ ಮಾಡಲು ತಿಳಿಸಿದ್ದಾರೆ. ಆದರೆ ಶ್ರೀರಂಗಪಟ್ಟಣ ತಹಶೀಲ್ದಾರರು ವ್ಯತಿರಿಕ್ತವಾಗಿ ಒಂದು ನೋಟಿಸ್ ಮಾಡಿ ಪೊಲೀಸರ ರಕ್ಷಣೆಯೊಂದಿಗೆ ಸತೀಶನನ್ನು ವೃದ್ಧದಂಪತಿ ಮನೆಗೆ ಸೇರಿಸಲು ಕಳಿಸಿದ್ದಾರೆ. ಇದು ಕಾನೂನು ಬಾಹಿರ” ಎಂದು ತಿಳಿಸಿದರು.
“ಎಸಿ ಆದೇಶದ ಮೇಲೆ ಒಬ್ಬರನ್ನು ಮನೆ ಖಾಲಿಮಾಡಿಸಿದ ಮೇಲೆ ಪುನಃ ಮನೆಗೆ ಸೇರಿಸಲು ಬರುವುದಿಲ್ಲ. ಹೈಕೋರ್ಟಿನಲ್ಲಿ ಇಂಜೆಕ್ಷನ್ ಆರ್ಡರ್ ಮನೆಗೆ ಹೋಗಲು ಅವಕಾಶ ಮಾಡಿಕೊಟ್ಟಿದೆಯೆಂದು ಆದೇಶ ಇದ್ದಲ್ಲಿ ಮಾತ್ರ ಸೇರಿಸಬೇಕು. ಶ್ರೀರಂಗಪಟ್ಟಣ ತಹಶೀಲ್ದಾರರು ಹೆಚ್ಚುವರಿ ಮುತುವರ್ಜಿ ತೆಗೆದುಕೊಂಡು ಹೈಕೋರ್ಟ್ ಆದೇಶದಲ್ಲಿ ಇಲ್ಲದಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿ ಇದ್ದಾಗ ಪೊಲೀಸರ ರಕ್ಷಣೆಗೆ ಆದೇಶ ಮಾಡಿ, ಸತೀಶ್ ಮತ್ತು ಕುಟುಂಬವನ್ನು ಸರೋಜಮ್ಮ ದಂಪತಿ ಮನೆಯಲ್ಲಿ ಒಟ್ಟಿಗೆ ಸೇರಿಸಲು ಆದೇಶಿಸುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಹೆಣ್ಣುಮಕ್ಕಳ ಸುರಕ್ಷತೆ, ಹಕ್ಕು, ಆಶಯಗಳಿಗೆ ‘ಅಪ್ತಗೆಳತಿ’ ಪೂರಕ: ಶಾಸಕ ಎ ಆರ್ ಕೃಷ್ಣಮೂರ್ತಿ
“ಹಾವು ಮುಂಗುಸಿಯಂತೆ ಕಿತ್ತಾಡುತ್ತಿರುವ ಇಬ್ಬರು ಎದುರುದಾರರನ್ನು ಒಟ್ಟಿಗೆ ಒಂದೇ ಮನೆಗೆ ಸೇರಿಸುತ್ತಿರುವುದು ಎಷ್ಟು ಸರಿ? ನೀವು ಆದೇಶ ಮಾಡಿರುವುದು ಸರಿಯೇ? ಈ ಪ್ರಕರಣಕ್ಕೆ ಸತೀಶ್ ತಡೆ ಆದೇಶ ತಂದಿದ್ದಾರೆಯೇ? ಇದರ ಬಗ್ಗೆ ಕಾನೂನು ತಿಳುವಳಿಕೆ ಇದ್ದರೂ ಕೂಡ ಶ್ರೀರಂಗಪಟ್ಟಣದ ತಹಶೀಲ್ದಾರರಾದ ನೀವು ಕಾನೂನುಬಾಹಿರವಾಗಿ ಎದುರುದಾರರನ್ನು ಒಟ್ಟಿಗೆ ಸೇರಿಸಿ ಇನ್ನೂ ಅಶಾಂತಿ ಉಂಟು ಮಾಡುತ್ತಿದ್ದೀರೆಂದು ನಿಮಗೆ ಅನ್ನಿಸುವುದಿಲ್ಲವೇ? ಹಿರಿಯ ನಾಗರಿಕರಿಗೆ ಸಂರಕ್ಷಣೆ ಏಕೆ ಕೊಡುತ್ತಿಲ್ಲ? ಹೈಕೋರ್ಟ್ ಆದೇಶ ಇಲ್ಲದಿದ್ದರೂ ನೀವೇ ಒಂದು ಆದೇಶ ಮಾಡಿರುವುದು ಕಾನೂನು ಬಾಹಿರ. ಈ ಕೂಡಲೇ ತಹಶೀಲ್ದಾರರಾದ ತಾವು ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಬೇಕು. ಹೈಕೋರ್ಟಿನ ಆದೇಶಕ್ಕೆ ಮಾನ್ಯತೆ ಕೊಡಬೇಕು” ಎಂದು ವಕೀಲ ವೆಂಕಟೇಶ್ ಒತ್ತಾಯಿಸಿದರು.