ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಜಾತಿಗಳ ವಕೀಲರ ಸಂಘದ ರಾಯಚೂರು ಜಿಲ್ಲಾ ಘಟಕದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಆಗಸ್ಟ್ 1ರಂದು ಸುಪ್ರೀಂಕೋರ್ಟಿನ ಏಳು ನ್ಯಾಯಾಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ತೀರ್ಪು ನೀಡಿದರೂ ಇದುವರೆಗೆ ಒಳಮೀಸಲಾತಿ ಜಾರಿ ಮಾಡಿಲ್ಲ ಎಂದು ದೂರಿದರು.

ಒಳ ಮಿಸಲಾತಿಗೆ 30 ವರ್ಷದಿಂದ ವಿವಿಧ ಹಂತಗಳ ಹೋರಾಟ ಮಾಡುತ್ತಾ ಬಂದಿದ್ದೇವೆ, ರಾಜ್ಯ ಸರ್ಕಾರಗಳು ತಾಯ್ತನ ಮತ್ತು ವಿವೇಕಯುಕ್ತ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಿ ಒಳಮೀಸಲಾತಿ ಜಾರಿಗೊಳಿಸಬೇಕು. ಕಳೆದ ಜನವರಿ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂವಿಧಾನದ ಪರಿಚ್ಛೇದ 341(3) ಕೆ ತಿದ್ದುಪಡಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರವೂ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸಲು ದತ್ತಾಂಶ ಸಂಗ್ರಹಿಸಿಯೇ ಶಿಫಾರಸು ಮಾಡಿದೆ. ಆದರೂ ರಾಜ್ಯದ ಕೆಲ ಸಚಿವರು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.
2002ರಲ್ಲಿ 10 ಸಾವಿರ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವಾಗ ಮಾದಿಗ ಸಮುದಾಯಕ್ಕೆ 1 ಸಾವಿರಕ್ಕಿಂತ ಕಡಿಮೆ ಮತ್ತು ಅಲೆಮಾರಿ ಸಮುದಾಯಗಳಿಗೆ ಯಾವುದೇ ಹುದ್ದೆ ಸಿಗದೇ ಅನ್ಯಾಯ ಮಾಡಲಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂತ ಹಂತವಾಗಿ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಯಾಗುವವರೆಗೆ ಎಲ್ಲಾ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ವಿಜಯಪುರ | ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ: ಕೆಆರ್‌ಎಸ್ ಪಕ್ಷ
ವಕೀಲರಾದ ಆರ್ ಸುದರ್ಶನ ರೆಡ್ಡಿ, ಕರುಣಾಕರ ಕಟ್ಟಿಮನಿ, ಎಚ್ ದೊಡ್ಡಪ್ಪ, ಪಿ.ನರಸಪ್ಪ, ಪಶುರಾಮ ಮಾಡಗಿರಿ, ಎಸ್ ಮಾರೆಪ್ಪ, ಚನ್ನಪ್ಪ, ನಿಂಗಪ್ಪ, ರವಿಂದ್ರವಲಿ, ರಾಮಸ್ವಾಮಿ, ಅನಿಲ್ ವಂದಲಿ, ಶಿವಕುಮಾರ ಮ್ಯಾಗಳಮನಿ, ತಾಯಪ್ಪ ಭಂಡಾರಿ, ಸುದರ್ಶನ, ಸುನಿಲ್ ಕುಮಾರ, ಲೋಕೇಶ ಅಸ್ಕಿಹಾಳ ಉಪಸ್ಥಿತರಿದ್ದರು.
