ನಕಲಿ ಮದ್ಯ ಸೇವಿಸಿ ತಮಿಳುನಾಡಿನ ವಿಲ್ಲಪ್ಪುರಂ ಜಿಲ್ಲೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಒಟ್ಟು ಐವರು ಮೃತಪಟ್ಟಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ ಮರಕಾನಂ ಪ್ರದೇಶದಲ್ಲಿ ಶನಿವಾರ (ಮೇ 13) ತಡರಾತ್ರಿ ಮೀನುಗಾರರು ಕಾರ್ಯಕ್ರಮವೊಂದರಲ್ಲಿ ಸ್ಥಳೀಯವಾಗಿ ತಯಾರಿಸಿದ ನಕಲಿ ಮದ್ಯ ಸೇವಿಸಿ ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಈ ಪ್ರದೇಶದಲ್ಲಿ ಎಕ್ಕಿಯಾರ್ಕುಪ್ಪಂನ ಮೀನುಗಾರರು ವಾಸಿಸುತ್ತಿದ್ದರು.
ಪುದುಚೆರಿ ಬಳಿಯ ಜಿಪ್ಮೆರ್‌ನ ಜವಹರ್ ಲಾಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಮೂವರು ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಹದಿನೈದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಕಲಿ ಮದ್ಯದ ದುರಂತಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಈ ಸಂಬಂಧ ಒರ್ವ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಪೊಲೀಸರು ದೂರು ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವಿಲ್ಲುಪುರಂನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಎನ್ ಶ್ರೀನಾಥ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧ ಪ್ರಕರಣ; ಪಶ್ಚಿಮ ಬಂಗಾಳ, ತಮಿಳುನಾಡಿಗೆ ಸುಪ್ರೀಂ ನೋಟಿಸ್
ನಕಲಿ ಮದ್ಯದ ದುರಂತಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.