ಸ್ವಾತಂತ್ರ್ಯ ಚಳವಳಿ 1910ರ ನಂತರ ಕ್ರಮೇಣವಾಗಿ ತೀವ್ರತೆಯನ್ನು ಪಡೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ಆದರೆ ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು, ಬ್ರಿಟಿಷರೊಂದಿಗೆ ಕೈಜೋಡಿಸಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಯತ್ನಿಸಿದವರು ಗಾಂಧೀಜಿ ಸ್ವದೇಶಾಗಮನಕ್ಕೂ ಮುಂಚೆ ಚಳವಳಿಗೆ ಸಾಮೂಹಿಕ ಸ್ವರೂಪ ದೊರಕಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದರು.
ಬುದ್ದ ಮತ್ತು ಮೌರ್ಯರ ಆಡಳಿತ ಕಾಲದ ನಂತರದ ವರ್ಷಗಳಲ್ಲಿ ಆರ್ಯ ವೈದಿಕರು ಸಂಸ್ಕೃತದಲ್ಲಿ ವಿಫುಲವಾದ ಸಾಹಿತ್ಯ ರಚನೆಯಲ್ಲಿ ತೊಡಗಿರಬಹುದು ಎನ್ನುವ ಸಂಶಯ ಅನೇಕ ಪ್ರಾಜ್ಞರು ವ್ಯಕ್ತಪಡಿಸುತ್ತಾರೆ. ಹಾಗೆ ರಚಿಸಲ್ಪಟ್ಟ ಆರ್ಯ ವೈದಿಕ ಮತದ ಸಾಹಿತ್ಯಗಳಾದ ಮಹಾಕಾವ್ಯಗಳು, ವೇದ, ಉಪನಿಷತ್ತು, ಆಗಮ-ಶಾಸ್ತ್ರಗಳು ಮತ್ತು ಪುರಾಣಗಳು ಇವು ಯಾವುದರಲ್ಲೂ ‘ಹಿಂದೂ’ ಎಂಬಪದ ಬಳಕೆಯಾದಂತಿಲ್ಲ. ಹಿಂದೂ ಪದದ ಬಳಕೆಯು ತೀರಾ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ ಎನ್ನಲು ಅನೇಕ ದಾಖಲೆಗಳ ಲಭ್ಯತೆಯಿದೆ. ಹಿಂದೂ ಪದದ ಪ್ರಯೋಗ ಮತ್ತು ಹಿಂದುತ್ವ ಸಿದ್ಧಾಂತದ ಪರಿಕಲ್ಪನೆ ಹುಟ್ಟಿದ್ದಾದರೂ ಹೇಗೆ, ಏತಕ್ಕಾಗಿ ಮತ್ತು ಯಾವ ಕಾಲದಲ್ಲಿ ಎನ್ನುವ ಪ್ರಶ್ನೆಗೆ ಉತ್ತರಗಳು ಸ್ಪಷ್ಟವಾಗಿ ಸಿಗುತ್ತ ಹೋಗುತ್ತವೆ. ಹದಿಮೂರನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ಅಫಘಾನಿಯರು, ಅರಬರು ಮತ್ತು ಪರ್ಷಿಯನ್ನರು ಸಿಂಧೂ ನದಿಯ ಈಚೆಗೆ ಬದುಕುವ ಜನರು ಮತ್ತು ಸಮುದಾಯವನ್ನು ಹಿಂದೂಗಳೆಂದು ಕರೆದರು ಎನ್ನುವುದು ಸಾಮಾನ್ಯವಾದ ಸಾರ್ವತ್ರಿಕ ಅಭಿಪ್ರಾಯ. ಹಿಂದೂ ಪದವು ಒಂದು ಭೌಗೋಳಿಕ ಅಥವಾ ಪ್ರದೇಶವಾಚಕ ಪದವಾಗಿ ಬಳಕೆಯಾಗಿದೆಯೇ ಹೊರತು ಒಂದು ಧರ್ಮವಾಚಕ ಪದವಲ್ಲವೆನ್ನಬಹುದು.
ದಯಾನಂದ ಸರಸ್ವತಿ ಎಂಬುವವರು ಏಪ್ರಿಲ್ 10, 1875 ರಂದು ಮಹಾರಾಷ್ಟ್ರದ ಇಂದಿನ ರಾಜಧಾನಿ ಮುಂಬೈನಲ್ಲಿ ಆರ್ಯ ಸಮಾಜವೆನ್ನುವ ಸಂಸ್ಥೆಯೊಂದನ್ನು ಸ್ಥಾಪಿಸುತ್ತಾರೆ. ಹಿಂದೂ ಎನ್ನುವ ಪದವು ಪ್ರಾಚೀನ ಕಾಲದಿಂದ ಬಳಕೆಯಲ್ಲಿದ್ದಿದ್ದರೆ ಅಥವಾ ಧರ್ಮವನ್ನು ಸಂಕೇತಿಸುತ್ತಿದ್ದರೆ ದಯಾನಂದ ಸರಸ್ವತಿಯವರು ಖಂಡಿತ ಆರ್ಯ ಸಮಾಜ ಎನ್ನುವ ಹೆಸರಿನ ಬದಲಿಗೆ ಹಿಂದೂ ಸಮಾಜ ಎಂದು ತಮ್ಮ ಸಂಸ್ಥೆಗೆ ಹೆಸರಿಡುತ್ತಿದ್ದರು. ಏಕೆಂದರೆ ಆ ಪದವು ಪ್ರದೇಶವಾಚಕವೇ ಹೊರತು ಧರ್ಮವಾಚಕವಲ್ಲ. ದಯಾನಂದ ಸರಸ್ವತಿಯವರಿಗೆ ಹಿಂದೂ ಪದವು ಭಾರತೀಯ ಭಾಷೆಯಿಂದ ಹುಟ್ಟುಪಡೆಯದೇ ಅದು ಪರ್ಷಿಯನ್ ಭಾಷೆಯದು ಹಾಗೂ ಆ ಪದಕ್ಕೆ ಪರ್ಶಿಯನ್ ಭಾಷೆಯಲ್ಲಿ ಮೌಲ್ಯಯುತ ಅರ್ಥವಿಲ್ಲ ಎಂಬ ಸಂಗತಿ ಕೂಡ ಬಹುಶಃ ದಯಾನಂದ ಸರಸ್ವತಿಯವರಿಗೆ ಗೊತ್ತಿತ್ತೇನೊ! ಆ ಕಾರಣದಿಂದ ಅವರು ಮೂಲ ಋಗ್ವೇದದ ಆಧಾರದಲ್ಲಿ ಆರ್ಯ ಸಮಾಜವನ್ನು ಧರ್ಮವಾಚಕ ಹಿನ್ನೆಲೆಯಲ್ಲಿ ಪ್ರಯೋಗಿಸಿ ಹಿಂದೂ ಎಂಬ ಪದವನ್ನು ಸ್ಪಷ್ಟವಾಗಿ ನಿರಾಕರಿಸುತ್ತಾರೆ. ಆರ್ಯ ಸಮಾಜ ಸ್ಥಾಪನೆಯಾಗಿ ಅಂದಾಜು 50 ವರ್ಷಗಳ ನಂತರ ಗಾಂಧೀಜಿ ನೇತೃತ್ವದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯು ಸಾಮೂಹಿಕ ಸ್ವರೂಪ ಪಡೆಯುತ್ತದೆ. ಸ್ವಾತಂತ್ರ್ಯ ಚಳವಳಿಯು ತೀವ್ರತೆ ಪಡೆಯುತ್ತಿದ್ದಂತೆ ‘ಹಿಂದೂ’ ಶಬ್ಧ ಕೂಡ ಚಳವಳಿಗೆ ಭಾರೀ ಪೈಪೋಟಿ ನೀಡುತ್ತ ಮುನ್ನೆಲೆಗೆ ಬರುತ್ತದೆ.
ಹಿಂದೂ ಪದದ ಸಾಂದರ್ಭಿಕ ಪ್ರಯೋಗವು ರಾಜಕೀಯ ಕಾರಣಗಳಿಂದ ಹುಟ್ಟಿಕೊಂಡದ್ದು ಎಂದರೆ ತಪ್ಪೇನಿಲ್ಲ. ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ಮರಳಿದ ಗಾಂಧೀಜಿ ಸ್ವಾತಂತ್ರ್ಯ ಚಳವಳಿಗೆ ಸಾಮೂಹಿಕ ಸ್ವರೂಪ ನೀಡುವ ಮೊದಲು ಇಡೀ ಭಾರತದ ಪ್ರವಾಸ ಮಾಡುತ್ತಾರೆ. ವಸಹಾತುಶಾಹಿ ಆಡಳಿತದ ಆ ಕಾಲದಲ್ಲಿ ಈ ನೆಲದ ಜನರ ನೈಜ ಸಮಸ್ಯೆಗಳನ್ನುˌ ಅವರ ಸರ್ವಾಂಗೀಣ ಸ್ಥಿತಿಗತಿಗಳನ್ನು ತಿಳಿದುಕೊಳ್ಳುತ್ತಾರೆ. ಗಾಂಧೀಜಿ ಭಾರತಕ್ಕೆ ಮರಳಿ ಬರುವ ತನಕ ಸ್ವಾತಂತ್ರ್ಯ ಚಳವಳಿಗೆ ಒಂದು ಸಮರ್ಥ ನಾಯಕತ್ವವಾಗಲಿ ಅಥವಾ ಸಾಮೂಹಿಕ ಸ್ವರೂಪವಾಗಲಿ ಸಿಕ್ಕಿರಲಿಲ್ಲ. ಆ ಮೊದಲು ಅಲ್ಲಲ್ಲಿ ಅನೇಕ ಸಂಸ್ಥಾನಿಕ ರಾಜರುಗಳು ತಮ್ಮ ಶಕ್ತಿಯನ್ನು ಮೀರಿ ಬ್ರಿಟಿಷರ ವಿರುದ್ಧ ಪ್ರತಿರೋಧಗಳನ್ನು ತೋರಿದ ಘಟನೆಗಳು ನಡೆದುಹೋಗುತ್ತವೆ. 1767, 1780, 1790 ಮತ್ತು 1798ರಲ್ಲಿ ನಾಲ್ಕು ಬಾರಿ ಮೈಸೂರಿನ ಸುಲ್ತಾನರಾದ ಹೈದರಾಲಿ ಮತ್ತು ಆತನ ಮಗ ಟಿಪ್ಪು ಬ್ರಿಟಿಷರ ಜೊತೆಗೆ ಘೋರ ಯುದ್ಧಗಳನ್ನು ನಡೆಸುತ್ತಾರೆ. ಆ ಯುದ್ಧಗಳು ಆಂಗ್ಲೋ-ಮೈಸೂರು ಯುದ್ಧಗಳೆಂದೇ ಇತಿಹಾಸದಲ್ಲಿ ಹೆಸರು ಪಡೆದಿವೆ. ಕನ್ನಡದ ನೆಲದಲ್ಲಿ 1824ರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಆಕೆಯ ಬಂಟ ರಾಯಣ್ಣ, ಸರ್ದಾರ್ ಗುರುಸಿದ್ದಪ್ಪ, ಅಮಟೂರು ಬಾಳಪ್ಪ ಮುಂತಾದವರು ಥಾಕರೆಯನ್ನು ಹತ್ಯೆಗೈದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸುತ್ತಾರೆ.

ಉತ್ತರ ಭಾರತದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕೂಡ ಬ್ರಿಟಿಷರ ವಿರುದ್ಧ ಹೋರಾಡುತ್ತಾಳೆ. ಬ್ರಿಟಿಷರ ವಿರುದ್ಧ ನಡೆದ ಈ ಎಲ್ಲಾ ಮಹತ್ವದ ಪ್ರತಿರೋಧಗಳು ನಮ್ಮ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ಕಡೆಗಣಿಸುತ್ತಾರೆ. ಈ ಯುದ್ದಗಳನ್ನು ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮಗಳೆಂದು ಇತಿಹಾಸಕಾರರು ಪರಿಗಣಿಸದೇ ಇರುವುದು ಐತಿಹಾಸಿಕ ದೋಷವೆಂದು ಕಾಣುತ್ತದೆ. ಬ್ರಿಟಿಷರಿಗೆ ಟಿಪ್ಪು ಒಡ್ಡಿದ ಪ್ರತಿರೋಧದ ತೀವ್ರತೆಯು ಬ್ರಿಟಿಷರಿಗೆ ಮಾತ್ರ ತಿಳಿದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮತಾಂಧರು ಟಿಪ್ಪುನ ದೇಶಭಕ್ತಿಯನ್ನು ಮತ-ಧರ್ಮದ ಆಧಾರದಲ್ಲಿ ನಿರಾಕರಿಸುತ್ತ ಸ್ವಾತಂತ್ರ್ಯ ಚಳವಳಿಯಲ್ಲಿನ ಆತನ ಪಾತ್ರವನ್ನು ಗೌಣಗೊಳಿಸುತ್ತಿದ್ದಾರೆ. ಬ್ರಿಟಿಷರ ಸೈನ್ಯದಲ್ಲಿ ಸಾಮಾನ್ಯ ಸಿಪಾಯಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಜಾತಿ ಶ್ರೇಷ್ಠತೆಯ ಭ್ರಮೆಯಲ್ಲಿ ಶಸ್ತ್ರಕ್ಕೆ ಹಚ್ಚಲಾಗಿದ್ದ ದನದ ಮಾಂಸದ ಕೊಬ್ಬನ್ನು ಬಾಯಿಯಿಂದ ಕಚ್ಚಲು ನಿರಾಕರಿಸುತ್ತಾನೆ. ಇದು 1858 ರಲ್ಲಿ ನಡೆದ ಒಂದು ಚಿಕ್ಕ ಘಟನೆ. ಈ ಘಟನೆಯನ್ನು ‘ಸಿಪಾಯಿ ದಂಗೆ’ ಎಂತಲು ಹಾಗೂ ಅದು ದೇಶದ ಮೊದಲ ಸ್ವಾತಂತ್ರ್ಯ ಚಳವಳಿ ಎಂದು ವ್ಯವಸ್ಥಿತವಾಗಿ ಬಿಂಬಿಸಲಾಗುತ್ತದೆ. ಆ ಸಿಪಾಯಿ ತನ್ನಿಡೀ ಬದುಕಿನಲ್ಲಿ ಆ ಸಂದರ್ಭ ಬಿಟ್ಟರೆ ಇನ್ಯಾವತ್ತೂ ಆತ ಬ್ರಿಟಿಷರ ದುರಾಡಳಿತದ ವಿರುದ್ಧ ಬಂಡೆದ್ದ ಉದಾಹರಣೆ ಸಿಗುವುದಿಲ್ಲ.
ಬ್ರಿಟಿಷರ ವಿರುದ್ಧದ ಈ ಚಿಕ್ಕಪುಟ್ಟ ಆದರೂ ಮಹತ್ವದ ಪ್ರತಿರೋಧಗಳ ಹೊರತಾಗಿ ಸ್ವಾತಂತ್ರ್ಯ ಚಳವಳಿಗೆ ಒಂದು ಸಮಗ್ರ ಸಾಮೂಹಿಕ ಸ್ವರೂಪ ದೊರೆಯಲು ಗಾಂಧೀಜಿಯವರ ಸ್ವದೇಶಾಗಮನದವರೆಗೆ ಕಾಯಬೇಕಾಗುತ್ತದೆ. ಸ್ವಾತಂತ್ರ್ಯ ಚಳವಳಿ 1910ರ ನಂತರ ಕ್ರಮೇಣವಾಗಿ ತೀವ್ರತೆಯನ್ನು ಪಡೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ಆದರೆ ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು ಹಾಗೂ ಮುಂದಿನ ದಿನಮಾನಗಳಲ್ಲಿ ಬ್ರಿಟಿಷರೊಂದಿಗೆ ಕೈಜೋಡಿಸಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಲು ಯತ್ನಿಸಿದವರು ಗಾಂಧೀಜಿ ಸ್ವದೇಶಾಗಮನಕ್ಕೆ ಮುಂಚೆ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸುವಲ್ಲಿ ಹಾಗೂ ಚಳವಳಿಗೆ ಸಾಮೂಹಿಕ ಸ್ವರೂಪ ದೊರಕಿಸಿ ಕೊಡುವಲ್ಲಿ ಸಂಪೂರ್ಣ ವಿಫಲರಾಗಿರುತ್ತಾರೆ. ಗಾಂಧೀಜಿ ನಾಯಕತ್ವ ಯಶಸ್ಸಿನತ್ತ ಸಾಗುತ್ತಿದ್ದಂತೆ ಸ್ವಾತಂತ್ರ್ಯ ಚಳವಳಿ ಕೂಡ ತೀವ್ರತೆಯನ್ನು ಪಡೆಯುತ್ತದೆ. ತೋರಿಕೆಗೆ ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಗಾಂಧಿ ದ್ವೇಷಿಗಳು ಆಗ ಅಕ್ಷರಶಃ ಆತಂಕ ಹಾಗೂ ಅಭದ್ರತೆಗೆ ಒಳಗಾಗುತ್ತಾರೆ. ಹೋರಾಟದ ತೀವ್ರತೆಯ ಬಿಸಿ ವಸಹಾತುಶಾಹಿ ಸರಕಾರಕ್ಕೆ ಮುಟ್ಟುತ್ತಿದ್ದಂತೆ ಒಂದುಕಡೆ ಬ್ರಿಟಿಷರಿಗೆ ಅಧಿಕಾರ ಹಸ್ತಾಂತರದ ಆತಂಕ, ಮತ್ತೊಂದು ಕಡೆ ಹಿಂದುತ್ವವಾದಿಗಳಿಗೆ ದೇಶ ಸ್ವಾತಂತ್ರ್ಯ ಪಡೆದು ರಾಜಸತ್ತೆಯ ಬದಲಾಗಿ ಪ್ರಜಾಸತ್ತೆಗೆ ಮರಳುತ್ತದೆ ಎನ್ನುವ ಆತಂಕ.
ಈ ಆತಂಕವು ಹಿಂದುತ್ವವಾದಿಗಳನ್ನು ಮತ್ತು ವಸಹಾತುಶಾಹಿ ಸರಕಾರವನ್ನು ಪರಸ್ಪರ ಇನ್ನಷ್ಟು ಹತ್ತಿರಕ್ಕೆ ತರುತ್ತದೆ. ಹಿಂದುತ್ವವಾದಿಗಳನ್ನು ದಾಳವಾಗಿ ಬಳಸಿಕೊಂಡು ಹಿಂದೂ-ಮುಸ್ಲಿಮ್ ಸಮಾಜಗಳ ನಡುವೆ ಬಿರುಕನ್ನು ಹೆಚ್ಚಿಸಿ ಸ್ವಾತಂತ್ರ್ಯ ಚಳವಳಿಯನ್ನು ಹಣಿದು ದೇಶವನ್ನು ಇನ್ನಷ್ಟು ದಿನ ಆಳಬೇಕೆನ್ನುವ ಬ್ರಿಟಿಷರ ಹುನ್ನಾರ. ಬ್ರಿಟಿಷರೊಂದಿಗೆ ಸೇರಿ ಸ್ವಾತಂತ್ರ್ಯ ಚಳವಳಿಯನ್ನು ಅಸ್ಥಿರಗೊಳಿಸಿ ದೇಶವನ್ನು ಜಾತ್ಯತೀತ ರಾಷ್ಟ್ರದ ಬದಲಿಗೆ ಹಿಂದೂ ರಾಷ್ಟ್ರ ಮಾಡಬೇಕೆನ್ನುವುದು ಹಿಂದುತ್ವವಾದಿಗಳ ಹುನ್ನಾರ. ಬ್ರಿಟಿಷರು ಹಾಗೂ ಹಿಂದುತ್ವವಾದಿಗಳ ಮೈತ್ರಿಯು ಸಾಂಘಿಕವಾಗಿ ಗಾಂಧಿ-ನೆಹರು-ಪಟೇಲ್ ನೇತೃತ್ವದ ಸತ್ಯಾಗ್ರಹ ಆಧಾರಿತ ಹಾಗೂ ನೇತಾಜಿ ನೇತೃತ್ವದ ಉಗ್ರ ಸ್ವರೂಪದ ಈ ಎರಡೂ ಬಗೆಯ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ. ಹಾಗೊಂದು ವೇಳೆ ಗಾಂಧಿ ನೇತೃತ್ವವು ಸ್ವಾತಂತ್ರ್ಯ ಪಡೆಯಲು ಯಶಸ್ವಿಯಾಗಿ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಾಗಿ, ಜಾತ್ಯತೀತ ಹಾಗೂ ಸಮಾಜವಾದಿ ಸಿದ್ದಾಂತವುಳ್ಳ ಸಂವಿಧಾನ ಅಂಗೀಕಾರಗೊಂಡರೆ ಅದನ್ನು ಮುಂದಿನ ದಿನಗಳಲ್ಲಿ ವಿಫಲಗೊಳಿಸುವ ದೂರಾಲೋಚನೆಯ ಹಾಗೂ ಅಷ್ಟೇ ದುರಾಲೋಚನೆಯ ಉದ್ದೇಶದಿಂದ ಆಗ ಹುಟ್ಟಿಕೊಂಡಿದ್ದೆ ಹಿಂದುತ್ವ ಸಿದ್ಧಾಂತದ ಅಪಾಯಕಾರಿ ಪರಿಕಲ್ಪನೆ.

ಹಿಂದುತ್ವ ಸಿದ್ಧಾಂತದ ಪರಿಕಲ್ಪನೆಯನ್ನು ಮೊಟ್ಟ ಮೊದಲು ತೇಲಿ ಬಿಟ್ಟವರು ವಿನಾಯಕ್ ದಾಮೋದರ್ ಸಾವರ್ಕರ್ ಅವರು. ಮೂಲತಃ ರಾಜಕೀಯ ಪರಿಕಲ್ಪನೆಯಾಗಿರುವ ಹಿಂದುತ್ವ ಸಿದ್ಧಾಂತವನ್ನು ನೀರೆರೆದು ಪೋಷಿಸಲು 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಲಾಗುತ್ತದೆ. ಈ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಪ್ರದೇಶವಾಚಕ ಹಿಂದೂ ಎನ್ನುವ ಜೀವನ ಪದ್ದತಿಗೂ ಹಾಗೂ ಮತಾಂಧರು ರಾಜಕೀಯ ಕಾರಣಕ್ಕಾಗಿ ಹುಟ್ಟುಹಾಕಿದ ಹಿಂದುತ್ವ ಸಿದ್ಧಾಂತಕ್ಕೂ ಯಾವುದೇ ನೇರವಾದ ಸಂಬಂಧವಿಲ್ಲ. ಸಂಘ ಸ್ಥಾಪನೆಯಾಗುವ ಮೊದಲು ಇದೇ ಜನರು ಸ್ಥಾಪಿಸಿದ ಹಿಂದೂ ಮಹಾಸಭಾ ಎನ್ನುವ ರಾಜಕೀಯ ಪಕ್ಷವೊಂದು ಮೊಹಮದ್ ಅಲಿ ಜಿನ್ನಾರ ನಾಯಕತ್ವದ ಮುಸ್ಲಿಂ ಲೀಗ್ ಪಕ್ಷದೊಂದಿಗೆ ರಾಜಕೀಯ ಸಂಬಂಧವನ್ನು ಹೊಂದಿತ್ತು. ತನ್ನ ಮಿತ್ರಪಕ್ಷವಾಗಿದ್ದ ಮುಸ್ಲಿಂ ಲೀಗ್ ಜೊತೆಗೆ ಸೇರಿ ಹಿಂದೂ ಮಹಾಸಭಾ ಪಕ್ಷವು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಅಂದರೆ ದೇಶ ವಿಭಜನೆಯ ಪ್ರಸ್ತಾವನೆಯನ್ನು ಮೊಟ್ಟ ಮೊದಲು ತೇಲಿ ಬಿಟ್ಟವರು ವಿನಾಯಕ್ ದಾಮೋದರ್ ಸಾವರ್ಕರ್ ಹಾಗೂ ಶಾಮ್ಪ್ರಸಾದ್ ಮುಖರ್ಜಿ. ಮುಖರ್ಜಿಯವರಂತೂ ಬಂಗಾಳ ವಿಭಜನೆಗೆ ಬಿಗಿ ಪಟ್ಟನ್ನೇ ಹಿಡಿಯುತ್ತಾರೆ.
ಇದನ್ನು ಗಮನಿಸಿದ ವಸಹಾತುಶಾಹಿ ಆಡಳಿತ ಕೇವಲ 30 ಪ್ಲಸ್ ವಯಸ್ಸಿನ ಮುಖರ್ಜಿಯನ್ನು ಕಲ್ಕತ್ತಾ ವಿವಿಯ ಉಪಕುಲಪತಿನ್ನಾಗಿ ನೇಮಿಸುತ್ತದೆ ಹಾಗೂ ಸಾವರ್ಕರ್ ಮೇಲಿನ ಸ್ವತಃ ತಾನೇ ಹೇರಿದ್ದ ರಾಜಕೀಯ ನಿಷೇಧವನ್ನು ತೆರವುಗೊಳಿಸುತ್ತದೆ. ಬಂಗಾಳ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಮುಸ್ಲಿಮ್ ಲೀಗ್ ನೊಂದಿಗೆ ಸೇರಿ ಹಿಂದೂ ಮಹಾಸಭಾ ಪ್ರಾದೇಶಿಕ ಸರಕಾರದಲ್ಲಿ ಅಧಿಕಾರ ಹಂಚಿಕೊಳ್ಳುತ್ತದೆ. ಅದೇ ಸಮಯದಲ್ಲಿ ಅಂದರೆ 1937-38ರಲ್ಲಿ ಮುಸ್ಲಿಮ್ ಲೀಗ್ ಪಕ್ಷವು ತನ್ನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ದೇಶವನ್ನು ವಿಭಜಿಸಿ ಪಾಕಿಸ್ತಾನ ರಚನೆಗೆ ಒತ್ತಾಯಿಸಿ ನಿರ್ಣಯವನ್ನು ಅಧಿಕೃತವಾಗಿ ಅಂಗೀಕರಿಸುತ್ತದೆ. ಆದಾಗ್ಯೂ ಹಿಂದೂ ಮಹಾಸಭಾದ ಈ ಸ್ವಯಂಘೋಷಿತ ದೇಶಭಕ್ತ ನಾಯಕರು ಮುಸ್ಲಿಂ ಲೀಗ್ ಜೊತೆಗಿನ ತಮ್ಮ ರಾಜಕೀಯ ಮೈತ್ರಿಗೆ ಕೊನೆ ಹಾಡಲಿಲ್ಲ. 1942ರಲ್ಲಿ ಗಾಂಧೀಜಿ ನೇತೃತ್ವದಲ್ಲಿ ತೀವ್ರತೆ ಪಡೆದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಹಿಂದುತ್ವವಾದಿಗಳು ಬೆಂಬಲಿಸಲಿಲ್ಲ ಹಾಗೂ ಅದರಲ್ಲಿ ಭಾಗವಹಿಸಲೂ ಇಲ್ಲ. ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸಹಕಾರದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರ ಮೇಲೆ ಯುದ್ದ ಘೋಷಿಸುತ್ತಾರೆ. ಆದರೆ, ಸಾವರ್ಕರ್ ಅವರು ಹಿಂದೂಗಳು ನೇತಾಜಿ ಸೈನ್ಯಕ್ಕೆ ಸೇರಬಾರದೆಂದು ಬಹಿರಂಗ ಕರೆ ಕೊಡುತ್ತಾರೆ.

ಅಷ್ಟೆ ಅಲ್ಲದೆ ಹಿಂದೂಗಳನ್ನು ಬ್ರಿಟಿಷರ ಸೈನ್ಯಕ್ಕೆ ಸೇರಿಸಲು ಈಶಾನ್ಯ ಭಾರತದಲ್ಲಿ ಶಿಬಿರಗಳನ್ನು ಆಯೋಜಿಸಿ ಆರು ತಿಂಗಳಲ್ಲಿ ಗರಿಷ್ಠ ಒಂದು ಲಕ್ಷ ಜನರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸುತ್ತಾರೆ. ಗಾಂಧೀಜಿಯವರು ಈ ದೇಶವನ್ನು ವಿಭಜಿಸಿದರು. ಆ ಕಾರಣದಿಂದ ಗಾಂಧೀಜಿಯ ಹತ್ಯೆ ಮಾಡಲಾಯಿತೆಂದು ಅಂದಿನಿಂದ ಇಂದಿನವರೆಗೆ ಹಿಂದುತ್ವವಾದಿಗಳು ದೇಶದ ಜನರಿಗೆ ಸುಳ್ಳು ಹೇಳುತ್ತ ಬರುತ್ತಿದ್ದಾರೆ. ಆದರೆ ಗಾಂಧೀಜಿಯವರ ಕೊಲೆಯ ಪ್ರಯತ್ನಗಳು 1930ರಿಂದಲೇ ಆರಂಭವಾಗುತ್ತವೆ. ಒಟ್ಟು ಐದು ಬಾರಿ ಹತ್ಯೆಯ ವಿಫಲ ಯತ್ನಗಳು ನಡೆದು ಕೊನೆಗೆ ಆರನೇ ಬಾರಿ 1948ರಲ್ಲಿ ಹಿಂದುತ್ವವಾದಿಗಳ ಗುಂಪು ಯಶಸ್ವಿಯಾಗುತ್ತದೆ. ಹಿಂದುತ್ವವಾದಿಗಳು ಮೊದಲು ತಾವೇ ದ್ವಿರಾಷ್ಟ್ರ ಸಿದ್ದಾಂತ ಪ್ರತಿಪಾದಿಸುತ್ತಾರೆ. ದೇಶ ವಿಭಜನೆಯ ಮುಖ್ಯ ರೂವಾರಿ ಮುಸ್ಲಿಮ್ ಲೀಗ್ ಜೊತೆಗೆ ಆತ್ಮೀಯ ರಾಜಕೀಯ ಒಡನಾಟವಿಟ್ಟುಕೊಳ್ಳುತ್ತಾರೆ. ಇನ್ನೊಂದು ಕಡೆ ದೇಶ ವಿಭಜನೆಯನ್ನು ಬಲವಾಗಿ ವಿರೋಧಿಸಿದ ಗಾಂಧೀಜಿಯವರನ್ನು ಹತ್ಯೆ ಮಾಡುತ್ತಾರೆ. “ಗಾಂಧೀಜಿ ದೇಶವನ್ನು ವಿಭಜಿಸಿದ ಕಾರಣಕ್ಕೆ ಕೊಲೆ ಮಾಡಲಾಯಿತು” ಎಂದು ಸುಳ್ಳು ಸುದ್ದಿಯನ್ನು ಹರಡುತ್ತಾರೆ. ಇದರರ್ಥ, “ಗಾಂಧಿ ಹತ್ಯೆಯು ದೇಶ ವಿಭಜನೆಯ ಕಾರಣಕ್ಕೆ ನಡೆಯಲಿಲ್ಲ” ಎನ್ನುವುದು ಮೇಲ್ನೋಟಕ್ಕೆ ಅರ್ಥವಾಗುತ್ತದೆ.
ಗಾಂಧಿ ಹತ್ಯೆಗೆ ಬೇರೆ ಕಾರಣಗಳು ಇದ್ದಿರುವುದಂತೂ ಸತ್ಯ. ಸ್ವಾತಂತ್ರ್ಯ ಚಳವಳಿ ಸಾಮೂಹಿಕ ಸ್ವರೂಪ ಪಡೆಯುವಲ್ಲಿ ಗಾಂಧಿ ನಾಯಕತ್ವದ ಯಶಸ್ಸು ಬ್ರಿಟಿಷರ ಹಿತಚಿಂತಕರಾಗಿದ್ದ ಹಿಂದುತ್ವವಾದಿಗಳನ್ನು ತೀವ್ರವಾಗಿ ಕಾಡುತ್ತದೆ. ಸ್ವಾತಂತ್ರದ ನಂತರ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಹಿಂದುತ್ವವಾದಿಗಳಿಗೆ ಗಾಂಧೀಜಿಯವರು ಕಾಲ್ತೊಡಕಾಗಿರುತ್ತಾರೆ. ಈ ದೇಶವು ಸ್ವತಂತ್ರ ಸಂವಿಧಾನವುಳ್ಳ ಜಾತ್ಯತೀತ ರಾಷ್ಟ್ರ ಆಗುವುದು ಹಿಂದುತ್ವವಾದಿಗಳಿಗೆ ಸುತಾರಾಂ ಬೇಕಾಗಿರಲಿಲ್ಲ. ಜಾತಿ ವ್ಯವಸ್ಥೆಯ ಜನಕರಿಗೆ ಜಾತ್ಯತೀತ ಶಬ್ದ ಕೇಳಿದರೆ ಸಹಜವಾಗಿ ಅಲರ್ಜಿಯಾಗುತ್ತದೆ. ದೇಶ ಜನತಂತ್ರವಾದರೆ ಸಂವಿಧಾನದತ್ತ ಸೌಲಭ್ಯಗಳನ್ನು ಪಡೆದು ಈ ದೇಶದ ಬಹುಜನರು ಮುಂದುವರೆದರೆ ಸಮಾಜದ ಮೇಲಿನ ತಮ್ಮ ನಿಯಂತ್ರಣ ಎಲ್ಲಿ ಕೈತಪ್ಪಿ ಹೋಗುತ್ತದೆ ಎಂಬ ಆತಂಕ ಹಾಗೂ ಭಯ ಹಿಂದುತ್ವವಾದಿಗಳಿಗೆ ಕಾಡುತ್ತದೆ. ಬ್ರಿಟಿಷ್ ಪೂರ್ವ ಮತ್ತು ಬ್ರಿಟಿಷರ ಕಾಲದಲ್ಲಿ ರಾಜಸತ್ತೆಗಳನ್ನು ನಿಯಂತ್ರಿಸುತ್ತ ಆಯಾಸರಹಿತ ಬದುಕನ್ನು ಅನುಭವಿಸಿದ ಹಿಂದುತ್ವವಾದಿಗಳು ಜನತಂತ್ರಕ್ಕೆ ಹೆದರಿ ಕಂಗಾಲಾಗುತ್ತಾರೆ. ಗಾಂಧೀಜಿಯವರ ಜನಪ್ರಿಯತೆ ವೃದ್ಧಿಸಿದ ಕ್ಷಣದಿಂದಲೇ ಅವರ ಹತ್ಯೆಯ ಪ್ರಯತ್ನಗಳೂ ಆರಂಭಗೊಳ್ಳುತ್ತವೆ.
ಇದನ್ನೂ ಓದಿ ಮಾಧ್ವರ ತಪ್ತ ಮುದ್ರಾಧಾರಣೆ ಮತ್ತು ಜಾತಿ ಜನಗಣತಿ
ಮೊಘಲರು, ಬ್ರಿಟಿಷರು ಹಾಗೂ ಎಲ್ಲಾ ಆಳರಸರ ದಿವಾನಗಿರಿ, ಜವಾನಗಿರಿ, ಚಮಚಾಗಿರಿ ಹಾಗೂ ಗುಲಾಮಗಿರಿ ಮಾಡಿದ ಹಿಂದುತ್ವವಾದಿಗಳಿಗೆ ಜನತಂತ್ರ ಹಾಗೂ ಜಾತ್ಯತೀತ ರಾಷ್ಟ್ರ ಮಾಡಬೇಕೆಂಬ ಗಾಂಧೀಜಿಯವರ ಅಭಿಪ್ರಾಯವು ಗಾಂಧಿ ಹತ್ಯೆಯ ಪ್ರಯತ್ನಗಳಿಗೆ ಇಂಬು ನೀಡುತ್ತದೆ. ಆ ಪ್ರಯತ್ನಗಳು 1930ರಿಂದಲೇ ಆರಂಭಗೊಳ್ಳುತ್ತವೆ. ಆದರೆ ಗಾಂಧೀಜಿ ಹತ್ಯೆಗೆ ಅಸಲಿ ಕಾರಣವನ್ನು ಹಿಂದುತ್ವವಾದಿಗಳು ಬಹಿರಂಗವಾಗಿ ಹೇಳುವಂತಿರಲಿಲ್ಲ. ಆದ್ದರಿಂದ ತಮ್ಮನ್ನು ತಾವು ದೇಶಭಕ್ತರೆನ್ನಿಸಿಕೊಳ್ಳಲು, ಗಾಂಧೀಜಿ ದೇಶವನ್ನು ವಿಭಜಿಸಿದರು. ಅದಕ್ಕಾಗಿ ಅವರ ಹತ್ಯೆ ನಡೆಯಿತು ಎನ್ನುವ ಸುಳ್ಳನ್ನು ಹಿಂದುತ್ವವಾದಿಗಳು ಹಬ್ಬಿಸುತ್ತಾರೆ. ಹಿಂದುತ್ವವಾದಿಗಳು ಜನತಂತ್ರ ಹಾಗೂ ಸಂವಿಧಾನದ ಬದ್ಧ ವೈರಿಗಳು. ಇತಿಹಾಸದುದ್ದಕ್ಕೂ ಈ ದೇಶಕ್ಕೆ ಯಾವತ್ತೂ ನಿಷ್ಠೆ ತೋರದ ಹಾಗೂ ಸದಾ ಪರೋಕ್ಷವಾಗಿ ದೇಶದ್ರೋಹದ ಕೃತ್ಯಗಳನ್ನು ಮಾಡಿರುವ ಹಿಂದುತ್ವವಾದಿಗಳು ಇವತ್ತೂ ಕೂಡ ಹಿಂದುತ್ವದ ಅಜೆಂಡಾ ಅನುಷ್ಠಾನಗೊಳಿಸುವ ಮೂಲಕ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ರಾಷ್ಟ್ರದ ಸಮಗ್ರತೆ, ಸಾರ್ವಭೌಮತ್ವ, ಬಹುತ್ವ, ಸಂವಿಧಾನ ಹಾಗೂ ಜನತಂತ್ರ ವ್ಯವಸ್ಥೆಗಳಿಗೆ ಬಹುದೊಡ್ಡ ಅಪಾಯವನ್ನು ತಂದಿಟ್ಟಿದ್ದಾರೆ.
ಇದನ್ನೂ ಓದಿ ಮಂಡ್ಯ ಸಮ್ಮೇಳನ | ಸಾಹಿತ್ಯದ ಸಾರ್ವಭೌಮತ್ವ ಆಳುವವರ ಅಧೀನಕ್ಕೆ ಬಲಿಯಾಗದಿರಲಿ
ಇವತ್ತು ಹಿಂದುತ್ವವಾದಿಗಳು ರಾಷ್ಟ್ರಭಕ್ತರ ಛದ್ಮವೇಶವನ್ನು ತೊಟ್ಟು, ರಾಜಕೀಯ ಉದ್ದೇಶವನ್ನು ಈಡೇರಿಸಿಕೊಂಡು ತಮ್ಮ ಜನಾಂಗದ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹಿಂದುತ್ವ ಸಿದ್ಧಾಂತದ ಜನಕರ ಆರ್ಥಿಕ ಸ್ಥಿತಿಗತಿಗಳು ಗಮನಾರ್ಹವಾಗಿ ಸುಧಾರಿಸಿವೆ. ಯಾವ ಹೋರಾಟವನ್ನೂ ಮಾಡದೆ ಆರ್ಥಿಕ ಮಾನದಂಡದ ಮೇಲೆ 10% ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ. ಉಳಿದ ಜನಾಂಗಗಳಿಗೆ ಮೀಸಲಾತಿ ಹೋರಾಟಕ್ಕೆ ಪ್ರಚೋದಿಸಿ ಮತ್ತೊಂದು ಕಡೆ ಸರಕಾರವನ್ನೇ ಖಾಸಗೀಕರಣಕ್ಕೆ ದೂಡಿ ಮೀಸಲಾತಿ ವ್ಯವಸ್ಥೆಯನ್ನೇ ಗೌಣಗೊಳಿಸುತ್ತಿದ್ದಾರೆ. ಹಿಂದುತ್ವವಾದಿಗಳ ಈ ಹುಸಿ ರಾಷ್ಟ್ರೀಯತೆ ಮತ್ತು ಅದರ ಹಿಂದಿರುವ ಹುನ್ನಾರಗಳನ್ನು ಅರಿತು ಸಾಮಾನ್ಯ ಜನರು ಈಗಲಾದರೂ ಹಿಂದುತ್ವವಾದಿ ಗಿಡುಗಗಳಿಂದ ಈ ದೇಶವನ್ನು ರಕ್ಷಿಸಿಕೊಳ್ಳುವ ತುರ್ತು ಅಗತ್ಯವಿದೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ
This guy Dr. J. S. Patil who claims himself to be intellectual, research scholar etc gives completely false information regarding History, Vedas, Upanishads, Bhagavad Geetha, I Ramayana, etc in his YouTube videos and also in his articles. His knowledge is very poor.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com