ಸಿ ಟಿ ರವಿ ಅವರ ಸಹಕಾರ ಸಿ ಪಿ ಯೋಗೇಶ್ವರ್ ಅವರ ಪರವಾಗಿದೆ. ಮಿಕ್ಕ ವಿಶ್ಲೇಷಣೆ ಮಾಧ್ಯಮದವರು ಮಾಡಿಕೊಳ್ಳಿ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ದುರ್ಬಲವೆಂದು ತೋರಿಸಿಕೊಂಡಿದೆ ಎನ್ನುವ ಸಿ ಟಿ ರವಿ ಅವರ ಹೇಳಿಕೆ ಸುದ್ದಿಗಾರರು ಕೇಳಿದಾಗ ಈ ರೀತಿ ಪ್ರತಿಕ್ರಿಯಿಸಿದರು.
ಬಿಜೆಪಿಯ ಕೆಲ ನಾಯಕರಿಂದಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ ಎಂಬ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ನಾನು ಸಿ ಟಿ ರವಿಯವರ ಹೇಳಿಕೆಗೆ ಮಾತ್ರ ಉತ್ತರ ನೀಡುತ್ತಿದ್ದು, ಮಿಕ್ಕ ಚರ್ಚೆ, ವಿಶ್ಲೇಷಣೆಯನ್ನು ನೀವು ಮಾಡಿ. ಮಾಧ್ಯಮದವರು ಹೆಚ್ಚು ವ್ಯಾಖ್ಯಾನ ಮಾಡುವುದರಿಂದ ಇದರ ಸಾಧಕ- ಬಾಧಕಗಳು ಹಾಗೂ ಕಳೆದ ಒಂದು ವಾರಗಳಿಂದ ನಡೆದ ವಿದ್ಯಮಾನಗಳನ್ನು ರಾಜ್ಯದ ಜನರಿಗೆ ನೀವು ತಿಳಿಸಬೇಕು” ಎಂದರು.
ನಿಖಿಲ್ ಅಥವಾ ಅನಸೂಯಾ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ “ಅದು ಆಯಾಯ ಪಕ್ಷದ ತೀರ್ಮಾನ” ಎಂದು ಹೇಳಿದರು.
ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಪ್ರಬಲ ವ್ಯಕ್ತಿಯನ್ನೇ ಕಾಂಗ್ರೆಸ್‌ಗೆ ಕರೆತರಲಾಗುತ್ತದೆ ಎನ್ನುವ ಸುದ್ದಿಯ ಬಗ್ಗೆ ಕೇಳಿದಾಗ “ಕಾದು ನೋಡೋಣ” ಎಂದಷ್ಟೇ ಉತ್ತರಿಸಿದರು.
ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ನೀಡಲು ಶಿವಕುಮಾರ್ ಅವರು ಹಿಂದೇಟು ಹಾಕಿದರು ಎನ್ನುವ ಬಗ್ಗೆ ಕೇಳಿದಾಗ, “ನಾನು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ತಕ್ಷಣ ಇನ್ನೊಂದು ಚುನಾವಣೆಗೆ ನಿಂತರೆ, ಜನರಿಗೆ ಒಳ್ಳೆಯ ಸಂದೇಶ ನೀಡಿದಂತೆ ಆಗುವುದಿಲ್ಲ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೈಕಮಾಂಡ್‌ಗೆ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಅನೇಕ ಕಾರ್ಯಕರ್ತರು ನಾನೇ ನಿಲ್ಲಬೇಕು ಎಂದು ಹೇಳಿದರು. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ” ಎಂದರು.
ಅಭ್ಯರ್ಥಿಗಳ ವಿಚಾರದಲ್ಲಿ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು
ಯೋಗೇಶ್ವರ್ ಅವರು ಪಕ್ಷದಲ್ಲಿ ಮೂರು ವರ್ಷ ದುಡಿದ ನಂತರ ಟಿಕೆಟ್ ನೀಡಿ ಎನ್ನುವ ಕಾರ್ಯಕರ್ತರ ಹೇಳಿಕೆಗಳ ಬಗ್ಗೆ ಕೇಳಿದಾಗ, “ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವುಗಳು, ಮುಖಂಡರು, ಕಾರ್ಯಕರ್ತರಾದಿಯಾಗಿ ಎಲ್ಲರೂ ಪಕ್ಷ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ. ನಾಮಪತ್ರ ಸಲ್ಲಿಕೆಯಾದ ನಂತರ ಎಲ್ಲರ ಬಳಿಯೂ ನಾನೇ ಖುದ್ದಾಗಿ ಮಾತನಾಡುತ್ತೇನೆ” ಎಂದು ತಿಳಿಸಿದರು.
ಆಕಾಂಕ್ಷಿಗಳ ಪಟ್ಟಿ ದೆಹಲಿಗೆ
ಶಿಗ್ಗಾಂವಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹೊರತಾಗಿ ಬೇರೆಯವರನ್ನು ಘೋಷಣೆ ಮಾಡಲಾಗುತ್ತದೆಯೇ ಎಂದು ಕೇಳಿದಾಗ, “ಇದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ಕ್ರೀನಿಂಗ್ ಕಮಿಟಿಯವರು ಈಗಾಗಲೇ ನಾಲ್ಕರಿಂದ ಐದು ಜನ ಆಕಾಂಕ್ಷಿಗಳ ಹೆಸರನ್ನು ದೆಹಲಿಗೆ ಕಳಿಸಿರಬಹುದು. ಮಾಜಿ ಮುಖ್ಯಮಂತ್ರಿ ಕ್ಷೇತ್ರವಾಗಿರುವುದರಿಂದ, ಗೆಲ್ಲುವಂತಹ ಪ್ರಭಾವಿ ವ್ಯಕ್ತಿಗೆ ಟಿಕೆಟ್ ನೀಡಬಹುದು” ಎಂದರು.
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎನ್ನುವ ಸಚಿವ ಜಮೀರ್ ಅವರ ಬಹಿರಂಗ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರತಿ ಬಾರಿಯೂ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗುತ್ತಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಉಸ್ತುವಾರಿಯನ್ನು ಜಮೀರ್ ಅವರಿಗೆ ಹೈಕಮಾಂಡ್ ನೀಡಿರುವುದರಿಂದ ಹಾಗೂ ಅವರು ಸಹ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಈ ರೀತಿಯ ಬೇಡಿಕೆ ಇಡುವುದು ಸಹಜ” ಎಂದು ವಿವರಿಸಿದರು.