ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಆಲೌಟ್ ಆಗಿದೆ.
ಭಾರತದ ವಿರುದ್ದ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಸರ್ವಪತನ ಕಂಡಿತು. ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ 59/7 ಹಾಗೂ ಆರ್ ಅಶ್ವಿನ್ 64/2 ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡವನ್ನು 300 ರನ್‌ಗಳಿಗಿಂತ ಒಳಗೆ ಕಟ್ಟಿಹಾಕಿದರು.
ನ್ಯೂಜಿಲೆಂಡ್ ಪರ ಡೆವೊನ್ ಕಾನ್ವೆ (76), ರಚಿನ್ ರವೀಂದ್ರ (65) ಹಾಗೂ ಮಿಷಲ್ ಸ್ಯಾಟ್ನರ್ (33) ಮಾತ್ರ ಗೌರವಾನ್ವಿತ ಮೊತ್ತ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‌ಮನ್‌ಗಳ್ಯಾರು 20ರ ಗಡಿ ದಾಟಲಿಲ್ಲ.
ಹೊಸ ದಾಖಲೆ ನಿರ್ಮಿಸಿದ ಅಶ್ವಿನ್
ಈ ಪಂದ್ಯದಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ಎರಡು ವಿಕೆಟ್ ಕಬಳಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ. ಈ ಮೊದಲು ದಾಖಲೆ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ ಅಗ್ರಸ್ಥಾನದಲ್ಲಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 78 ಇನಿಂಗ್ಸ್ಗಳಲ್ಲಿ ಲಿಯಾನ್ ಒಟ್ಟು 187 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಲಿಯಾನ್ ಅವರನ್ನು ಹಿಂದಿಕ್ಕಿ ಅಶ್ವಿನ್ 189 ವಿಕೆಟ್ ಕಬಳಿಸಿ ಅಗ್ರಸ್ಥಾನಕ್ಕೇರಿದ್ದಾರೆ.
