ತುಮಕೂರು | ಅಮಾನಿಕೆರೆ ಕೋಡಿ ನೀರಿನಿಂದ ದಿಬ್ಬೂರು ಜಲಾವೃತ : ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ

Date:

Advertisements

 ನಿರಂತರ ಮಳೆಯಿಂದಾಗಿ ನಗರದ ಅಮಾನಿಕೆರೆ ಕೋಡಿ ನೀರು ನುಗ್ಗಿ ದಿಬ್ಬೂರು ಬಡಾವಣೆಯ ಮನೆ, ಅಂಗಡಿ, ತೋಟಗಳು ಜಲಾವೃತಗೊಂಡಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಕೋಡಿ ನೀರಿನಿಂದ 2 ಮನೆಗಳು ಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತ-ವ್ಯಸ್ತವಾಗಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಜಲಾವೃತವಾಗಿರುವ ಮನೆಗಳ ಕುಟುಂಬದ ಸದಸ್ಯರನ್ನು ಜಿಲ್ಲಾಡಳಿತದ ವತಿಯಿಂದ ದಿಬ್ಬೂರು ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಅವರಿಗೆ ನಿರ್ದೇಶನ ನೀಡಿದರು. 

1000584107

ಸ್ಥಳದಲ್ಲಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಳೆದ 2019 ಹಾಗೂ 2022ರಲ್ಲಿ ಅಮಾನಿಕೆರೆ ಕೋಡಿ ನೀರು ನುಗ್ಗಿ ಇಲ್ಲಿನ ನಿವಾಸಿಗಳ ಜೀವನ ಅಸ್ತ-ವ್ಯಸ್ತವಾಗಿತ್ತು. ಇದೇ ಬಡಾವಣೆಯ ಸರ್ವೇ ನಂಬರ್ 207 ಹಾಗೂ 208ರಲ್ಲಿರುವ ರಾಜಗಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲದ ಕಾರಣ ದಿಬ್ಬೂರು ಬಡಾವಣೆ ಜಲಾವೃತಗೊಂಡಿದೆ. ಅಲ್ಲದೆ ನಗರದಲ್ಲಿರುವ ಮುಖ್ಯ ರಾಜಗಾಲುವೆಗಳು ಒತ್ತುವರಿಯಾಗಿರುವುದರಿಂದಲೂ ಜನರು ಇಂತಹ ಸಮಸ್ಯೆಯನ್ನು ಎದುರಿಸುವ ಸಂದರ್ಭ ಎದುರಾಗಿದೆ. ಈ ನಿಟ್ಟಿನಲ್ಲಿ ರಾಜಗಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. 

Advertisements
1000584078

ನಂತರ ಹರಿಯುತ್ತಿದ್ದ ಮಳೆ ನೀರಿನಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಜಲಾವೃತಗೊಂಡಿದ್ದ ಮನೆ, ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಂದಾಯ ಹಾಗೂ ಪಾಲಿಕೆ ವತಿಯಿಂದ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸಬೇಕು. ರಾಜಗಾಲುವೆಗಳಲ್ಲಿರುವ ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕಲ್ಲದೆ, ಮಳೆಯಿಂದ ಯಾವುದೇ ಜೀವಹಾನಿಯಾಗದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

1000584114

ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಮಕೂರಿನ ದೇವರಾಯಪಟ್ಟಣ ಕೆರೆ, ಅಕ್ಕ-ತಂಗಿ ಕೆರೆ, ಸತ್ಯಮಂಗಲ ಕೆರೆ ಸೇರಿದಂತೆ ವಿವಿಧ ಕೆರೆಗಳ ಕೋಡಿ ನೀರಿನಿಂದ ನಗರದ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದ್ದು, ಹೆಚ್ಚುವರಿ ನೀರು ದಿಬ್ಬೂರು ಮಾರ್ಗವಾಗಿ ಭೀಮಸಂದ್ರ ಕೆರೆಯನ್ನು ತಲುಪುತ್ತದೆ. ಆದರೆ ಮಳೆನೀರಿನ ಪ್ರಮಾಣ ಹೆಚ್ಚಿರುವುದರಿಂದ ಬಡಾವಣೆಗೆ ನೀರು ನುಗ್ಗಿದೆ. ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಜ ಕಾಲುವೆ ತೆರೆವು ಕಾರ್ಯ ಕೈಗೊಳ್ಳಲಾಗಿದೆ. ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಡಾವಣೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ. 50ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಮುಂದುವರೆಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳ, ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ತೆರೆದಿರುವ ಗಂಜಿ ಕೇಂದ್ರಗಳಿಗೆ ತೆರಳಬೇಕೆಂದು ಮನವಿ ಮಾಡಿದರು. 

1000584109

ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಆರಂಭಕ್ಕೂ ಮುನ್ನವೇ ರಾಜ ಕಾಲುವೆಗಳ ತೆರವು ಕಾರ್ಯ ಕೈಗೊಳ್ಳಲಾಗಿತ್ತು, ಕೆಲವು ಪ್ರದೇಶಗಳಲ್ಲಿ ರಾಜ ಕಾಲುವೆ ಒತ್ತುವರಿಯಾಗಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆಯಿಂದ ಜಂಟಿ ಸರ್ವೇ ಕಾರ್ಯ ಕೈಗೊಂಡು ರಾಜ ಕಾಲುವೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಮಳೆಯಿಂದ ನಿರಾಶ್ರಿತರಾದವರಿಗೆ ಗಂಜಿ ಕೇಂದ್ರದಲ್ಲಿ ಹಾಸಿಗೆ-ಹೊದಿಕೆ, ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಯ್ಯ, ಪಾಲಿಕೆ ಇಂಜಿನಿಯರ್ ವಿನಯ್, ಅಗ್ನಿಶಾಮಕ, ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು. 

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X