ಬುದ್ಧ ಎಂದರೆ ದೇವರಲ್ಲ, ಬುದ್ಧ ಎಂದರೆ ಅರಿವಿನ, ಜ್ಞಾನದ ಬೆಳಕು. ಮೂಢ ನಂಬಿಕೆಗಳಿಂದ ಹೊರಬಂದು ಅರಿವಿನ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಜಯಪುರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ನಡೆದ 68ನೇ ಧಮ್ಮಚಕ್ರ ಪರಿವರ್ತನ ದಿನಾಚರಣೆ ಹಾಗೂ ವರ್ಷಾವಾಸ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
2500 ವರ್ಷಗಳ ಹಿಂದೆ ಜೂಜಾಟ, ಸುರಾಪಾನ, ಪ್ರಾಣಿಬಲಿ ಮುಂತಾದ ಅನಿಷ್ಟಗಳ ಮೂಲಕ ಸಮಾಜವು ನೈತಿಕವಾಗಿ ಅಧಃಪತನಗೊಂಡಿದ್ದ ಸಮಯದಲ್ಲಿ ಬುದ್ಧನೆಂಬ ಹೊಸಬೆಳಕು ಮೂಡಿಬಂತು. ಭಗವಾನ ಬುದ್ಧರು ಕರ್ಮಸಿದ್ಧಾಂತವನ್ನು ಒಪ್ಪದೆ, ದೇವರು, ಆತ್ಮ, ಪುನರ್ಜನ್ಮಗಳನ್ನು ನಿರಾಕರಿಸಿದರು. ಬುದ್ಧನ ಧಮ್ಮದಲ್ಲಿ ದೇವರಿಗೆ ಸ್ಥಾನವಿಲ್ಲ, ನೈತಿಕತೆಗೆ ಸ್ಥಾನವಿದೆ ಎಂದರು.
ಬುದ್ಧ ವಿಹಾರಗಳು ಕೇವಲ ಪೂಜೆ, ಪ್ರಾರ್ಥನೆಯ ತಾಣಗಳಾಗದೆ ಶೈಕ್ಷಣಿಕ ಕೇಂದ್ರಗಳಾಗಿ, ಸಮಾಜಕ್ಕೆ ಜ್ಞಾನವನ್ನು ಹಂಚಬೇಕು. ಮಹಿಳೆಯರ ಹಕ್ಕುಗಳಿಗಾಗಿ ಮಂತ್ರಿಪದವಿಯನ್ನು ಧಿಕ್ಕರಿಸಿದ ಅಂಬೇಡ್ಕರ್ ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಂಡಿದ್ದರು. ಬುದ್ಧ-ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಿದೆ ಎಂದರು.
ಬಂತೇ ಡಾ. ಶಾಕು ಬೋಧಿಧಮ್ಮ ಮಾತನಾಡಿ, ಜಾತಿ ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ನಡೆಯುತ್ತಿರುವ ಸಂಘರ್ಷ ನಿಲ್ಲಬೇಕು. ಯುದ್ಧದ ಹೆಸರಿನಲ್ಲಿ ಮಾನವ ಕುಲವೇ ತಲ್ಲಣಿಸುತ್ತಿದೆ. ಇಡೀ ವಿಶ್ವವೇ ಇಂದು ಶಾಂತಿಯನ್ನು ಬಯಸುತ್ತಿದೆ. ಭಗವಾನ ಬುದ್ಧರ ಬೋಧನೆಗಳು ಮಾತ್ರ ಎಲ್ಲ ಸಂಕಟಗಳಿಗೆ ಪರಿಹಾರ ನೀಡಬಹುದಾಗಿದೆ ಎಂದರು.
ಇದನ್ನು ಓದಿದ್ದೀರಾ? ಹೊಸ ಪುಸ್ತಕ | ಮಾನವೀಯತೆಯ ಉಳಿವಿಗೆ ಪ್ರತಿರೋಧದ ದನಿ ʼಸ್ವಾಭಿಮಾನದ ಗತ್ತಿನ್ಯಾಗʼ
ಈ ಸಂದರ್ಭದಲ್ಲಿ ಬಂತೇ ಬೋಧಿ ಆನಂದ, ಭಂತೆ ಬೋಧಿಚಕ್ಷು, ಭಂತೆ ಬೋಧಿದರ್ಪಣ, ಪ್ರಭುಗೌಡ ಪಾಟೀಲ, ಆರ್.ಡಿ. ಸೂಳಿಕೇರಿ, ವಿ.ಎ. ಪಾಟೀಲ, ಸುಧಾಕರ ಕನಮಡಿ, ಭೀಮಶಿ ಹಿಪ್ಪರಗಿ, ಅನಿಲ ಹೊಸಮನಿ, ಎಂ.ಬಿ. ಹಳ್ಳದಮನಿ, ರಮೇಶ ಹಳ್ಳಿ, ಕೆ.ಎಂ. ಶಿವಶರಣ, ಬಿ.ಎಸ್. ಬ್ಯಾಳಿ, ಚಿದಾನಂದ ಹೊನವಾಡಕರ, ಸಿ.ಆರ್. ತೊರವಿ, ಎಸ್.ಎಲ್. ಇಂಗಳೇಶ್ವರ, ಮಡಿವಾಳ ಯಾಳವಾರ, ಸಂಜು ಕಂಬಾಗಿ, ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಮತಿನಕುಮಾರ ದೇವಧರ, ಸಂತೋಷ ಕಾಂಬಳೆ, ಲೋಹಿತ ಪಾರಣ್ಣವರ, ಉಮೇಶ ಹೆಂಡೆಗಾರ, ಮಣಿಕಂಠ ಸಾಗರ, ಸುಭಾಸ ಜುಮನಾಳ, ನಾಗರಾಜ ಲಿಂಗದಳ್ಳಿ, ದಯಾನಂದ ಹಾಲ್ಯಾಳ, ಶ್ರೀಧರ ಹಾಲ್ಯಾಳ, ಗಣೇಶ ಘಟಕಾಂಬಳೆ, ಸುರೇಶ ಬಬಲೇಶ್ವರ ಉಪಸ್ಥಿತರಿದ್ದರು.