ಚೆಂಡು ವಿರೂಪ ಪ್ರಕರಣದ ಆರು ವರ್ಷದ ಬಳಿಕ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಮೇಲಿನ ನಾಯಕತ್ವ ನಿಷೇಧವನ್ನು ರದ್ದುಪಡಿಸಲಾಗಿದೆ.
2018ರ ಈ ಪ್ರಕರಣದಲ್ಲಿ ಜೀವಮಾನವಿಡೀ ನಾಯಕತ್ವದ ಜವಾಬ್ದಾರಿ ನಿರ್ವಹಿಸದಂತೆ ವಾರ್ನರ್ ಮೇಲೆ ನಿಷೇಧ ಹೇರಲಾಗಿತ್ತು. ಮೂವರು ಸದಸ್ಯರ ಸಮಿತಿಯ ಎದುರು ವಾರ್ನರ್ (37) ತಮ್ಮ ವಾದವನ್ನು ಮಂಡಿಸಿದ್ದು, ನಿಷೇಧ ರದ್ದುಪಡಿಸಲು ಬೇಕಾದ ಎಲ್ಲ ಮಾನದಂಡಗಳನ್ನು ವಾರ್ನರ್ ಪೂರೈಸಿರುವುದರಿಂದ ನಿಷೇಧ ರದ್ದುಪಡಿಸಲು ನಿರ್ಧರಿಸಲಾಯಿತು.
“ವಾರ್ನರ್ ಅವರ ಗೌರವಾರ್ಹ ಮತ್ತು ಪಶ್ಚಾತ್ತಾಪದ ಧ್ವನಿ ಹಾಗೂ ತಮ್ಮ ಕ್ರಮಕ್ಕಾಗಿ ಹೊಣೆಗಾರಿಕೆಯನ್ನು ಒಪ್ಪಿಕೊಂಡ” ಅಂಶವನ್ನು ಸಮಿತಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಮಹಿಳೆಯರ ಟಿ20 ವಿಶ್ವಕಪ್: ನ್ಯೂಜಿಲೆಂಡ್ ಚೊಚ್ಚಲ ಚಾಂಪಿಯನ್
ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದು, ತಮ್ಮ ಬಿಗ್ ಬ್ಯಾಷ್ ಲೀಗ್ ತಂಡ ಸಿಡ್ನಿ ಥಂಡರ್ ಸೇರಿದಂತೆ ಎಲ್ಲೆಡೆ ನಾಯಕತ್ವದ ಪಾತ್ರವನ್ನು ನಿರ್ವಹಿಸಬಹುದಾಗಿದೆ. ತಮ್ಮ ಮೇಲಿನ ನಿರ್ಬಂಧದ ಪರಾಮರ್ಶೆಗೆ ಡೇವಿಡ್ ವಾರ್ನರ್ ಮನವಿ ಮಾಡಿಕೊಂಡಿರುವುದು ನನಗೆ ಸಂತಸ ತಂದಿದೆ.ಈ ಬೇಸಿಗೆಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅವರು ಅರ್ಹರು” ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ನಿಕ್ ಹಾಕ್ಲೆ ಹೇಳಿದ್ದಾರೆ.
2018ರ “ಸ್ಯಾಂಡ್ ಪೇಪರ್ ಗೇಟ್” ಹಗರಣದ ಕೇಂದ್ರ ಬಿಂದು ಎನಿಸಿದ್ದ ಡೇವಿಡ್ ವಾರ್ನರ್, ತಮ್ಮ ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬನ್ ಕ್ರಾಫ್ಟ್ ಜತೆ ಚೆಂಡಿನ ಮೇಲ್ಮೈಯನ್ನು ಅಕ್ರಮವಾಗಿ ವಿರೂಪಗೊಳಿಸಿದ ಆರೋಪ ಹೊತ್ತಿದ್ದರು. ಒಂದು ವರ್ಷದವರೆಗೆ ಅವರನ್ನು ಅಮಾನತುಗೊಳಿಸಲಾಗಿತ್ತು ಹಾಗೂ ನಾಯಕತ್ವದ ಹೊಣೆ ಮೇಲೆ ಜೀವಿತಾವಧಿ ನಿಷೇಧ ಹೇರಲಾಗಿತ್ತು.
