ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿನ್ನೆ ಘೋಷಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಆಯ್ಕೆ ಮಾಡಿತ್ತು.
ಅಜ್ಜಂ ಪೀರ್ ಖಾದ್ರಿಯವರಿಗೆ ಟಿಕೆಟ್ ನೀಡಬೇಕೆಂಬ ಪ್ರಬಲ ಒತ್ತಡವಿತ್ತಾದರೂ, ಕೊನೆಯ ಕ್ಷಣದಲ್ಲಿ ಯಾಸೀರ್ ಅಹ್ಮದ್ ಖಾನ್ ಅವರಿಗೆ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಶಿಗ್ಗಾಂವಿ ಟಿಕೆಟ್ ವಂಚಿತ ಅಜ್ಜಂ ಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾದ ಕಾರಣ ಸಚಿವ ಜಮೀರ್ ಅಹಮದ್ ಖಾನ್ ಅವರು ಸಚಿವ ರಹೀಂ ಖಾನ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ ಅವರೊಂದಿಗೆ ಖಾದ್ರಿ ಅವರ ನಿವಾಸಕ್ಕೆ ಭೇಟಿ ನೀಡಿ ಮನವೊಲಿಸಿದರು.
ಅಸಮಾಧಾನಗೊಂಡಿದ್ದ ಬೆಂಬಲಿಗರನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ಇದಕ್ಕೆ ಬಗ್ಗದ ಅಜ್ಜಂ ಪೀರ್ ಖಾದ್ರಿ ಬೆಂಬಲಿಗರು, ಸಚಿವ ಝಮೀರ್ ಅಹ್ಮದ್ ಖಾನ್ ಅವರ ಕಾರಿಗೆ ಹುಲಗೂರು ಗ್ರಾಮದಲ್ಲಿ ಕಲ್ಲೆಸೆದಿದ್ದಾರೆ.

ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಯ ಟಿಕೆಟ್‌ಗಾಗಿ ಅಲ್ಪಸಂಖ್ಯಾತ ಸಮುದಾಯದಿಂದ ಅಜ್ಜಂ ಪೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ನಡುವೆ ಪೈಪೋಟಿ ಇತ್ತು. ಮತ್ತೊಂದೆಡೆ ಲಿಂಗಾಯತ ಸಮುದಾಯದಿಂದ ಸಂಜೀವ್ ನೀರಲಗಿ, ಸೋಮಣ್ಣ ಬೇವಿನಮರ, ವಿನಯ್ ಕುಲಕರ್ಣಿ ಪುತ್ರಿ ವೈಶಾಲಿ ಕುಲಕರ್ಣಿ ಅವರು ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದರು. ಆದರೆ, ಅಂತಿಮವಾಗಿ ಹೈಕಮಾಂಡ್ ಮತ್ತೆ ಯಾಸೀರ್ ಖಾನ್ ಪಠಾಣ್ ಅವರಿಗೆ ಮಣೆ ಹಾಕಿತ್ತು. ಇದರಿಂದಾಗಿ ಅಜ್ಜಂ ಪೀರ್ ಖಾದ್ರಿಯವರ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.
ಹಾನಗಲ್ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರಾದ ಯಾಸೀರ್ ಅಹ್ಮದ್ ಖಾನ್ ಪಠಾಣ್, 2023ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ, ಸೋತಿದ್ದರು.

ಬೈಕಿನಲ್ಲಿ ಬಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಅಜ್ಜಂ ಪೀರ್ ಖಾದ್ರಿ
ಈ ನಡುವೆ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ಶಾಸಕ ಸೈಯ್ಯದ್ ಅಜ್ಜಂ ಪೀರ್ ಖಾದ್ರಿ, ಸಚಿವರ ಮನವೊಲಿಕೆಗೆ ಬಗ್ಗಿಲ್ಲ. ಕೊನೆಯ ಕ್ಷಣದಲ್ಲಿ ಚುನಾವಣಾಧಿಕಾರಿಯ ಕಚೇರಿಗೆ ಬೈಕಿನಲ್ಲಿ ದೌಡಾಯಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಮಾಡಿದ ಯಾಸೀರ್ ಖಾನ್ ಪಠಾಣ್
ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ್ ಖಾನ್ ಪಠಾಣ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ನಾವು ಎಲ್ಲರೂ ಈ ಮೊದಲೇ ಜನತಾ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿದ್ದೇವೆ. ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದ್ದೆ. ಕಾಂಗ್ರೆಸ್ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಒಲವು ಇದೆ. ಕಳೆದ ನಾಲ್ಕು ತಿಂಗಳಿಂದ ನಿರಂತರವಾಗಿ ಕ್ಷೇತ್ರ ಸುತ್ತಾಡಿದ್ದೇನೆ” ಎಂದಿದ್ದಾರೆ.
ಟಿಕೆಟ್ ಕೈ ತಪ್ಪಿರುವ ಹಿಂದೆ ಕಾಣದ ಕೈಗಳ ಪಿತೂರಿ: ಅಜ್ಜಂ ಪೀರ್ ಖಾದ್ರಿ
“ನಾನು ಒಬ್ಬ ಅಲ್ಪಸಂಖ್ಯಾತ ಅನ್ನುವ ಕಾರಣಕ್ಕೆ ಬೇರೆ ಸಮುದಾಯದ ಯಾರೂ ಬಂದು ಪ್ರಚಾರ ಮಾಡಲಿಲ್ಲ. ಹೊಂದಾಣಿಕೆಯ ರಾಜಕಾರಣ ಮಾಡಿ ಬೊಮ್ಮಾಯಿಯನ್ನು ಗೆಲ್ಲಿಸಿದ್ದಾರೆ. ಈಗ ಹಾನಗಲ್ಲಿನ ಪಠಾಣ್‌ಗೆ ಟಿಕೆಟ್ ಕೊಟ್ಟಿದ್ದಾರೆ. ಅವನೊಬ್ಬ ರೌಡಿಶೀಟರ್, ಅವನ ಮೇಲೆ 17 ಕೇಸ್ ಇದೆ. ಕ್ಷೇತ್ರದ ಜನರು ಸ್ಥಳೀಯ ಅಭ್ಯರ್ಥಿಯನ್ನು ಬಯಸುತ್ತಾರೆ. ನಾನು ಸ್ಥಳೀಯನಾಗಿದ್ದೇನೆ, ಮುಂದಿನ ದಿನದಲ್ಲಿ ಪಿತೂರಿಯ ಎಲ್ಲಾ ವಿಚಾರ ಬಹಿರಂಗವಾಗಲಿದೆ” ಎಂದು ಅಜ್ಜಂ ಪೀರ್ ಖಾದ್ರಿ ಹರಿಹಾಯ್ದಿದ್ದಾರೆ.
“ನಾನು ಸಿದ್ದರಾಮಯ್ಯರ ಅಭಿಮಾನಿ. ಅವರ ವಿರುದ್ಧ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಟಿಕೆಟ್ ಕೈ ತಪ್ಪಿರುವ ಹಿಂದೆ ಕಾಣದ ಕೈಗಳ ಪಿತೂರಿ ನಡೆದಿದೆ. ಒಳ ಒಪ್ಪಂದ ಆಗಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಗೂಂಡಾಗಿರಿ ಮಾಡಿದವನಿಗೆ ಟಿಕೆಟ್ ಕೊಟ್ಟಿದ್ದಾರೆ. ಸೋಲುವವರಿಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಪಕ್ಷೇತರವಾಗಿ ನಿಲ್ಲಲು ಕಾರ್ಯಕರ್ತರ ಒತ್ತಡ ಹೆಚ್ಚಾಗಿದೆ. ನನ್ನ ಕಾರ್ಯಕರ್ತರು ವಿಷ ಕುಡಿಯಲು ಹೋಗಿದ್ದಾರೆ. ಹಾಗಾಗಿ, ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ” ಎಂದು ಖಾದ್ರಿ ತಿಳಿಸಿದ್ದಾರೆ.

