ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು ‘ಪೌರತ್ವ ಕಾಯ್ದೆ 1955’ರ ಸೆಕ್ಷನ್ 6ಎ ಸಿಂಧುತ್ವವನ್ನು ಎತ್ತಿಹಿಡಿದಿದೆ. ಇದಾದ ಕೆಲವು ದಿನಗಳಲ್ಲೇ ಈ ಸೆಕ್ಷನ್ ರದ್ದುಗೊಳಿಸುವಂತೆ ಕೋರಿದ ಅರ್ಜಿದಾರರು ತೀರ್ಪಿನ ಬಗ್ಗೆ ಆಕ್ರೋಶ, ನಿರಾಶೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ತೀರ್ಪನ್ನು “ಅಸ್ಸಾಂ ಜನರ ಸಂಸ್ಕೃತಿಯ ಭವಿಷ್ಯಕ್ಕೆ ಅಪಾಯಕಾರಿ” ಎಂದು ಹೇಳಿದರೆ, ಇನ್ನು ಕೆಲವರು ಈ ತೀರ್ಪು “ವಸಾಹತುಶಾಹಿ ಮನಸ್ಥಿತಿಯ ಪ್ರತಿಬಿಂಬ” ಎಂದಿದ್ದಾರೆ.
ಪೌರತ್ವ ಕಾಯ್ದೆ 1955ರ ಸೆಕ್ಷನ್ 6ಎ 1966ರ ಜನವರಿ 1ರಿಂದ 1971ರ ಮಾರ್ಚ್ 25ರ ನಡುವೆ ನೆರೆಯ ರಾಷ್ಟ್ರಗಳಿಂದ ಅಸ್ಸಾಂಗೆ ವಲಸೆ ಬಂದು, ಅಲ್ಲಿಯೇ ನೆಲೆಸಿರುವವರಿಗೆ ಭಾರತದ ಪೌರತ್ವ ಪಡೆಯಲು ಅವಕಾಶ ನೀಡುತ್ತದೆ. ಇದರಲ್ಲಿ ಯಾವುದೇ ಧಾರ್ಮಿಕ ಲೆಕ್ಕಾಚಾರಗಳಿಲ್ಲ. ಸೆಕ್ಷನ್ ಎ ಸಂಪೂರ್ಣವಾಗಿ ಧರ್ಮನಿರಪೇಕ್ಷವಾದದ್ದು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಫುಲ್ಲಕುಮಾರ್ ಮಹಂತ ನೇತೃತ್ವದ ಆಲ್ ಅಸ್ಸಾಂ ಸ್ಟುಡೆಂಟ್ಸ್ ಯೂನಿಯನ್ (ಎಎಎಸ್‌ಯು) ನಡುವೆ ನಡೆದ ಅಸ್ಸಾಂ ಒಪ್ಪಂದದ ಭಾಗವಾಗಿ ಸೆಕ್ಷನ್ 6ಎ ಅನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಅಸ್ಸಾಂನಲ್ಲಿ ವಲಸಿಗರಿಗೆ ಪೌರತ್ವ: ಸೆಕ್ಷನ್ 6A ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಈ ನಡುವೆ, ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿರುವ, ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಸೆಕ್ಷನ್ 6ಬಿ ಅಡಿಯಲ್ಲಿ ಬಾಂಗ್ಲಾದೇಶ, ಅಪ್ಘಾನಿಸ್ತಾನ, ಪಾಕಿಸ್ತಾನದಿಂದ ಭಾರತಕ್ಕೆ 2014ರ ಡಿಸೆಂಬರ್ 31ಕ್ಕೆ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡುವ ಅವಕಾಶ ಕಲ್ಪಿಸಲಾಗುತ್ತದೆ.
ಎರಡು ಸೆಕ್ಷನ್, ವಿಭಿನ್ನ ಗಡುವು
ಎರಡು ಸೆಕ್ಷನ್‌ಗಳು ಎರಡು ವಿಭಿನ್ನ ಗಡುವುಗಳನ್ನು ಹೊಂದಿದೆ. ಇದನ್ನು ಕೂಡಾ ಅರ್ಜಿದಾರರು ಪ್ರಶ್ನಿಸಿದ್ದಾರೆ. ಈಗ ಸುಪ್ರೀಂ ಕೋರ್ಟ್ 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವ ಎತ್ತಿಹಿಡಿದರೆ, ಇಲ್ಲಿ ಸಿಎಎ ಕಥೆಯೇನು ಎಂಬುದು ಅಸ್ಸಾಂನ ಹೋರಾಟಗಾರರ ಪ್ರಶ್ನೆ.
ಆದರೆ, ಈ ತೀರ್ಪನ್ನು ಅಸ್ಸಾಂ ಒಪ್ಪಂದಕ್ಕೆ ಸಹಿ ಮಾಡಿದ ಸಂಘಟನೆಗಳು ಸ್ವಾಗತಿಸಿವೆ. ಎಎಎಸ್‌ಯುನ ಮುಖ್ಯ ಸಲಹೆಗಾರ ಸಮುಜ್ಜಲ್ ಭಟ್ಟಾಚಾರ್ಯ ಇದೊಂದು ಹೆಗ್ಗುರುತು ಮತ್ತು ಐತಿಹಾಸಿಕ ತೀರ್ಪು ಎಂದು ಹೇಳಿದ್ದಾರೆ. ಆಲ್-ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟದ ಸಲಹೆಗಾರ ಐನುದ್ದೀನ್ ಅಹ್ಮದ್ ಕೂಡಾ ಈ ತೀರ್ಪನ್ನು ಸ್ವಾಗತಿಸಿದ್ದಾರೆ.
ಇದನ್ನು ಓದಿದ್ದೀರಾ? ಅಸ್ಸಾಂ | ತಾಂತ್ರಿಕ ಕಾರಣದಿಂದ 19 ಕಡೆ ಇರಿಸಿದ್ದ ಬಾಂಬ್‌ಗಳು ಸ್ಪೋಟಗೊಳ್ಳಲಿಲ್ಲ; ಉಲ್ಫಾ ಸಂಘಟನೆ
ಗಮನಾರ್ಹವಾಗಿ, ಪೌರತ್ವ ಕಾಯ್ದೆ 1955ರ ತೀರ್ಪನ್ನು ಎಎಎಸ್‌ಯು ಸ್ವಾಗತಿಸಿದ್ದರೂ, ಈ ಸಂಘಟನೆ ಸಿಎಎಯನ್ನು ವಿರೋಧಿಸುತ್ತಿದೆ. ಸಿಎಎ ವಿರುದ್ಧ ಹೋರಾಟ ನಡೆಸುತ್ತಿದೆ. “1985ರ ಐತಿಹಾಸಿಕ ಅಸ್ಸಾಂ ಒಪ್ಪಂದವನ್ನು ಸಿಎಎ ರದ್ದುಗೊಳಿಸುತ್ತದೆ” ಎಂದು ಎಎಎಸ್‌ಯು ವಾದಿಸುತ್ತಿದೆ.
ತೀರ್ಪಿನಿಂದಾದ ರಾಜಕೀಯ ಪ್ರಭಾವ
ಭಾರತದ ಪೌರತ್ವವನ್ನು ಪಡೆಯಲು ಗಡುವು ತಮ್ಮ ಬಿಜೆಪಿ ಸರ್ಕಾರದಡಿ ಜಾರಿ ಮಾಡಲಾದ ಸಿಎಎ ಪ್ರಕಾರವಾಗಿ 1951 ಆಗಿರಬೇಕು ಎಂಬುದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಭಿಲಾಷೆ ಆಗಿತ್ತು. ಈ ಬಯಕೆಗೆ ಸುಪ್ರೀಂ ಕೋರ್ಟ್ ಈಗ ತಣ್ಣೀರು ಎರಚಿದೆ.
ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ಮಾತನಾಡಿದ್ದ ಅಸ್ಸಾಂ ಸಿಎಂ, “ಭಾರತದ ಪೌರತ್ವವನ್ನು ಪಡೆಯಲು 1951 ಆರಂಭಿಕ ಗಡುವು ಎಂಬುದನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಮಿಷನ್ ಬಾಸುಂಧರ ಯೋಜನೆಗೂ ನಾವು ಈ ಗಡುವನ್ನು ಮೂರು ವರ್ಷಗಳಿಂದ ಅನ್ವಯಿಸುತ್ತಿದ್ದೇವೆ. ಹಾಗಂತ ನಿಮಗೆ ಡ್ರೈವರ್ ಲೈಸೆನ್ಸ್ ಪಡೆಯಲೂ ಕೂಡಾ ಈ ಗಡುವು ಮುಖ್ಯವಾಗಲ್ಲ. ಇದು ಕೆಲವು ಯೋಜನೆಗಳಿಗೆ ಮಾತ್ರ ಅನ್ವಯಿಸುತ್ತದೆ. ಇದು ದೈನಂದಿನ ಜೀವನದ ಮೇಲೆ ಪ್ರಭಾವ ಬೀರಲ್ಲ” ಎಂದು ತಿಳಿಸಿದ್ದರು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಪೌರತ್ವ ಸ್ಥಿತಿ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅರ್ಜಿ
ಪೌರತ್ವ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಮಾಡಿದ ರಾಜಕೀಯವನ್ನು ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಕೇಂದ್ರ ಸರ್ಕಾರವು 2019ರ ಪೌರತ್ವ (ತಿದ್ದುಪಡಿ) ಮಸೂದೆಯ ಮೂಲಕ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಸೂಕ್ಷ್ಮ ಮತ್ತು ವಿವಾದಾತ್ಮಕ ವಿಷಯವನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಅಷ್ಟು ಮಾತ್ರವಲ್ಲದೆ ಈ ಮಸೂದೆಯ ವಿರುದ್ದ ಪ್ರತಿಭಟಿಸಿದ ಐವರನ್ನು (ಸ್ಯಾಮ್ ಸ್ಟಾಫರ್ಡ್, ದೀಪಾಂಜಲ್ ದಾಸ್, ಈಶ್ವರ್ ನಾಯಕ್, ಅಬ್ದುಲ್ ಅಲಿಮ್ ಮತ್ತು ದ್ವಿಜೇಂದ್ರ ಪಾಂಗಿಂಗ್) ಕೇಂದ್ರ ಬಲಿ ಪಡೆದುಕೊಂಡಿದೆ. ಅಸ್ಸಾಂನಲ್ಲಿ ಪೌರತ್ವ ಕಾಯ್ದೆ 1955ರ ವಿರುದ್ದವಾಗಿ ನಡೆದ ಹಿಂಸಾಚಾರ, ಸಾವು ನೋವುಗಳು ಸಿಎಎ ಜಾರಿ ವೇಳೆಯೂ ನಡೆದಿದೆ.
ಭಾರತದ ಪೌರತ್ವವನ್ನು ಪಡೆಯಲು ಅರ್ಹತೆಯ ಗಡುವು ಸಿಎಎ ಸೆಕ್ಷನ್ 6ಬಿ ಅಡಿಯಲ್ಲಿ ದೇಶದಾದ್ಯಂತ 1950 ಆಗಿದ್ದರೆ, ಅಸ್ಸಾಂನಲ್ಲಿ ಮಾತ್ರ ಪೌರತ್ವ ಕಾಯ್ದೆ 1955ರ ಸೆಕ್ಷನ್ 6ಎ ಅಡಿಯಲ್ಲಿ ಗಡುವು 1971 ಆಗಿದೆ. ಇದು ಗೊಂದಲ, ಅಸಮಾಧಾನ, ಆಕ್ರೋಶ, ನಿರಾಸೆ ಎಲ್ಲವನ್ನೂ ಹಾಗೆಯೇ ಇರಿಸಿದೆ. ಈ ಗಡುವು ವಿಚಾರವನ್ನು ಇನ್ನಷ್ಟು ಸಂಕೀರ್ಣಗೊಳಿಸಿದ ಶ್ರೇಯಸ್ಸು ವಿವಾದಿತ ಸಿಎಎ ಜಾರಿಗೆ ತಂದ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು.