ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸಲು ರಾಜಧಾನಿ ಗುವಾಹಟಿ ಸೇರಿದಂತೆ ಅಸ್ಸಾಂ ರಾಜ್ಯದ 19 ಸ್ಥಳಗಳಲ್ಲಿ ಸರಣಿ ಬಾಂಬ್‌ಗಳನ್ನು ಸ್ಫೋಟಿಸಲು ನಿಷೇಧಿತ ಉಲ್ಫಾ ಸಂಘಟನೆ ಯೋಜನೆ ರೂಪಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಎಲ್ಲ 19 ಕಡೆ ಇರಿಸಿದ್ದ ಬಾಂಬ್‌ಗಳು ಕೊನೆಯ ಕ್ಷಣದಲ್ಲಿ ಸ್ಫೋಟಗೊಳ್ಳದ ಕಾರಣ ಗುವಾಹಟಿ ಸೇರಿದಂತೆ ಅಸ್ಸಾಂನ ನಗರಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ.
ಈ ನಡುವೆ ಉಲ್ಫಾ ಸಂಘಟನೆ ಕೂಡ ಹೇಳಿಕೆ ನೀಡಿದ್ದು, “ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸಲು ರಾಜಧಾನಿ ಗುವಾಹಟಿ ಸೇರಿದಂತೆ ಅಸ್ಸಾಂ ರಾಜ್ಯದ 19 ಸ್ಥಳಗಳಲ್ಲಿ ಸರಣಿ ಸ್ಫೋಟಕಗಳನ್ನು ಸ್ಫೋಟಿಸಲು ಬಾಂಬ್‌ಗಳನ್ನು ಇಡಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ ಸ್ಫೋಟಗೊಳ್ಳಲಿಲ್ಲ” ಎಂದು ತಿಳಿಸಿದೆ.
ನಿಷೇಧಿತ ಸ್ವತಂತ್ರ್ಯ ಉಲ್ಫಾ(ಐ) ಸಂಘಟನೆ ಅಸ್ಸಾಂ ಪ್ರತ್ಯೇಕ ರಾಜ್ಯದ ಬೇಡಿಕೆಯ ಸಂಘಟನೆಗಳಲ್ಲಿ ಒಂದಾಗಿದೆ. ಉಲ್ಫಾದ ಹಲವು ಬಣಗಳು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಕೈಬಿಟ್ಟು ಪ್ರಜಾಪ್ರಭುತ್ವದ ಹಾದಿಗೆ ಮರಳಿವೆ. ಆದರೆ ಸಶಸ್ತ್ರ ಗುಂಪು ಉಲ್ಫಾ-ಐ ಮಾತ್ರ ಅಸ್ಸಾಂ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹಿಂಸಾಚಾರ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಗ್ಲಾ ಹಿಂದೂಗಳ ಸಂಕಟ: ದಿಟವೆಷ್ಟು, ಸಟೆಯೆಷ್ಟು?
ಎಂದಿನಂತೆ ಉಲ್ಫಾ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಿಷ್ಕರಿಸಲು ಕರೆ ನೀಡಿತ್ತು. ಈ ಹಂತದಲ್ಲಿ ಭದ್ರತಾ ಪಡೆಗಳಿಗೆ ಮಾಹಿತಿ ಲಭಿಸಿ ಬಾಂಬ್‌ಗಳನ್ನು ಏಕಕಾಲದಲ್ಲಿ ಸ್ಫೋಟಿಸುವ ಪ್ರಯತ್ನವು ಕೊನೆಯ ಕ್ಷಣದಲ್ಲಿ ವಿಫಲವಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
ಈ 19 ಬಾಂಬ್‌ಗಳಲ್ಲಿ ಒಂದನ್ನು ಅಸ್ಸಾಂ ಸೆಕ್ರೆಟರಿಯೇಟ್ ಬಳಿ ಇಡಲಾಗಿತ್ತು. ಉಲ್ಫಾ ಭಯೋತ್ಪಾದಕರು ಅಸ್ಸಾಂ ರಾಜಧಾನಿ ಗುವಾಹಟಿಯ 8 ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು. ಸತತವಾಗಿ ಏಕಕಾಲದಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಪ್ರಯತ್ನವು ‘ಕೊನೆಯ ನಿಮಿಷ’ ತಾಂತ್ರಿಕ ದೋಷದಿಂದಾಗಿ ವಿಫಲವಾಗಿದೆ. ಇದರ ಬೆನ್ನಲ್ಲೇ ಅಸ್ಸಾಂ ರಾಜ್ಯದಾದ್ಯಂತ ಆರೋಪಿಗಳ ಪತ್ತೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.