ಭಾರತ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಟೆಸ್ಟ್ ಪಂದ್ಯಾವಳಿ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಎರಡನೇ ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ, ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 1 ರನ್‌ಗೆ ಔಟ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಭಾರತದ ತಂಡ ಮಾಜಿ ಬ್ಯಾಟರ್ ಸಂಜಯ್ ಮಾಂಜ್ರೇಕರ್, ‘ಇದು ಕೊಹ್ಲಿ ಜೀವನದಲ್ಲೇ ಅತ್ಯಂತ ಕೆಟ್ಟ ಶಾಟ್’ ಎಂದು ಹೇಳಿದ್ದಾರೆ.
ಮೊದಲ ಪಂದ್ಯ ಸೋತಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತದೆ. ಈ ಪಂದ್ಯವನ್ನು ಗೆಲ್ಲುತ್ತದೆ. ತಂಡದ ಬಹುನಿರೀಕ್ಷಿತ ಬ್ಯಾಟರ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಾರೆ ಎಂಬ ನಿರೀಕ್ಷೆ ಕ್ರಿಕೆಟ್ ಪ್ರೇಮಿಗಳಲ್ಲಿತ್ತು.
ಆದರೆ, ಈ ನಿರೀಕ್ಷೆಯನ್ನು ಇಬ್ಬರು ಆಟಗಾರರೂ ಹುಸಿಗೊಳಿಸಿದ್ದಾರೆ. ಪಂದ್ಯದಲ್ಲಿ ಖಾತೆ ತೆರೆಯುವ ಮುನ್ನವೇ, ಅಂದರೆ ಒಂದೂ ರನ್ ಗಳಿಸದೆ ರೋಹಿತ್ ಶರ್ಮಾ ಔಟ್ ಆದರೆ, ವಿರಾಟ್ ಕೊಹ್ಲಿ 1 ರನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.
ಎಂಟು ಎಸೆತಗಳನ್ನು ಎದುರಿಸಿದ ಕೊಹ್ಲಿ 1 ರನ್ ಗಳಿಸಿದ್ದರು. ಸ್ಯಾಂಟ್ನರ್ ಮಾಡಿದ ಫುಲ್ ಟಾಸ್ ಬೌಲಿಂಗ್ ಎದುರಿಸಿದ ಕೊಹ್ಲಿ ಕ್ಲೀನ್ ಬೌಲ್ಡ್ ಆದರು.
ಉತ್ತಮ ಶಾಟ್ ಹೊಡೆಯಬಹುದಾದ ಫುಲ್ ಟಾಸ್ ಬಾಲ್‌ಗೆ ಕೊಹ್ಲಿ ವಿಕೆಟ್ ಒಪ್ಪಿಸಿದ್ದು, ಕ್ರೀಡಾಂಗಣದಲ್ಲಿ ನೆರೆದಿದ್ದವರನ್ನು ಮೂಕರನ್ನಾಗಿಸಿತು. ಕೊಹ್ಲಿಯ ಶಾಟ್ ಬಗ್ಗೆ ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಸಂಜಯ್ ಮಾಂಜ್ರೇಕರ್, “ಕೊಹ್ಲಿ ಅವರು ತಮ್ಮ ಜೀವಮಾನದ ಅತ್ಯಂತ ಕೆಟ್ಟ ‘ಶಾಟ್’ ಹೊಡೆಯಲು ಯತ್ನಿಸಿದರು ಎಂಬುದು ಅವರಿಗೂ ತಿಳಿದಿದೆ. ಅವರು ಹೀಗೆ ವಿಕೆಟ್ ಒಪ್ಪಿಸಿದ್ದು ಬೇಸರದ ಸಂಗತಿ. ತಂಡ ಸಂಕಷ್ಟದಲ್ಲಿದ್ದ ಸಮಯದಲ್ಲಿ ಅವರು ಅದ್ಭುತ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದವರು’’ ಎಂದಿದ್ದಾರೆ.