ಪೋಲಿಯೋ ಮಹತ್ವದ ಕುರಿತು ಪೋಷಕರಲ್ಲಿ ಅರಿವು ಮೂಡಿಸಬೇಕು. ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸುವ ಮೂಲಕ ಸಂಪೂರ್ಣ ಪೋಲಿಯೋ ನಿರ್ಮೂಲನೆಗೆ ಶ್ರಮಿಸಬೇಕಿದೆ ಎಂದು ರೋಟರಿ ಕ್ಲಬ್ ಆಫ್ ಹೆರಿಟೇಜ್ ಮೈಸೂರು ಅಧ್ಯಕ್ಷ ಆರ್ ರಾಜೇಶ್ ಸಲಹೆ ನೀಡಿದರು.
ವಿಶ್ವ ಪೋಲಿಯೋ ದಿನದ ಅಂಗವಾಗಿ ಮೈಸೂರಿನ ರೋಟರಿ ಕ್ಲಬ್ ಆಫ್ ಹೆರಿಟೇಜ್ ವತಿಯಿಂದ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದ ಲಸಿಕೆಯ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ಹಾಕಿ ಮಾತನಾಡಿದರು.
“ಐದು ವರ್ಷದೊಳಗಿನ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಪೋಲಿಯೋ ಲಸಿಕೆ ಕೊಡಿಸುವುದು ಪೋಷಕರ ಮಹತ್ತರ ಜವಾಬ್ದಾರಿಯಾಗಿದೆ. ಏಕೆಂದರೆ ಲಸಿಕೆ ನೀಡದೇ ಹೋದಲ್ಲಿ ಮಕ್ಕಳು ಅಂಗವೈಕಲ್ಯತೆಗೆ ತುತ್ತಾಗುತ್ತಾರೆ. ಆದ್ದರಿಂದ ತಪ್ಪದೇ ಲಸಿಕೆ ಕೊಡಸಬೇಕು. ಈವರೆಗೂ ಪೋಲಿಯೋ ನಿರ್ಮೂಲನೆಗೆ ಜಗತ್ತಿನಾದ್ಯಂತ ಆರ್ಥಿಕವಾಗಿಯೂ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸಾಕಷ್ಟು ಶ್ರಮ ವಹಿಸಿದೆ” ಎಂದು ಹೇಳಿದರು.
ಇದೇ ವೇಳೆ ಆಸ್ಪತ್ರೆಗೆ ದಾಖಲಾಗಿರುವ ಸುಮಾರು 50ಕ್ಕೂ ಅಧಿಕ ನವಜಾತ ಶಿಶುಗಳಿಗೆ ಅಗತ್ಯವಿರುವ ಸ್ವೆಟರ್, ಟೊಪ್ಪಿ, ಕಾಲು ಚೀಲ ವಿತರಿಸಿದರು.
ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ರಾಜೇಂದ್ರ ಕುಮಾರ್ ಮಾತನಾಡಿ, “ಪೋಲಿಯೋ ಲಸಿಕೆ ಕುರಿತು ಸಾಕಷ್ಟು ಅರಿವು ಮೂಡಿಸಿ, ಮನೆ-ಮನೆಗೆ ತೆರಳಿ ಲಸಿಕೆ ಕೊಡಿಸುವ ಕಾರ್ಯಕ್ಕೆ ಮುಂದಾದರೂ ಕೂಡಾ ಇನ್ನೂ ಸಾಕಷ್ಟು ಮಕ್ಕಳು ಲಸಿಕೆ ವಂಚಿತರಾಗಿ ಅಂಗವೈಕಲ್ಯತೆಗೆ ತುತ್ತಾಗುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಸರಾ ಪ್ರಾಧಿಕಾರ ರಚನೆಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹ
“ಪೋಷಕರು ಎಚ್ಚೆತ್ತುಕೊಂಡು ಇನ್ಮುಂದಾದರೂ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ಕೊಡಿಸುವ ಮುಖೇನ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಆಫ್ ಹೆರಿಟೇಜ್ ಸಂಸ್ಥಾಪಕ ಅಧ್ಯಕ್ಷ ರೊ ಮಂಜುನಾಥ್ ಕೆ, ಕ್ಲಬ್‌ನ ಹಿರಿಯ ಸದಸ್ಯ ರೊ ನಾರಾಯಣ್ ನಾಯಕ್, ರೊ ರಾಘವೇಂದ್ರ ಆಚಾರ್ ಮತ್ತು ಚಂದನ್, ಜೀವನಿಧಿ ಟ್ರಸ್ಟ್‌ನ ಆಯೇಷಾ, ಆಸ್ಪತ್ರೆಯ ಕಚೇರಿಯ ಅಧೀಕ್ಷಕ ದೇವರಾಜು, ಶುಶ್ರೂಷಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.