ರೈತರು ಆರ್ಥಿಕವಾಗಿ ಸದೃಢವಾಗಬೇಕಾದರೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಜೊತೆಗೆ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಸಲಹೆ ನೀಡಿದರು.
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಶ್ರೀ.ಪವಾಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿಜಯಪುರದ ಕೃಷಿ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ‘ಕೃಷಿ ಸಂಪದ’ ಕೃಷಿ ತಂತ್ರಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ರೈತರು ಈ ಕೃಷಿ ತಂತ್ರಜ್ಞಾನ ಮತ್ತು ವಸ್ತುಪ್ರದರ್ಶನದ ಪ್ರಯೋಜನಗಳನ್ನು ಪಡೆದುಕೊಂಡು ತಮ್ಮ ಕೃಷಿ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು ಎಂದರು.
ಕೃಷಿ ಉತ್ಪಾದನೆ ಹೆಚ್ಚಿಸಬೇಕಾದರೆ ಮಣ್ಣು ಮತ್ತು ನೀರಿನ ನಿರ್ವಹಣೆ ಬಹಳ ಮುಖ್ಯ. ರೈತರು ನಿಯಮಿತವಾಗಿ ತಮ್ಮ ತಮ್ಮ ಭೂಮಿಯಲ್ಲಿನ ಮಣ್ಣು ಪರೀಕ್ಷೆ ಮಾಡಿಸಿ ಶಿಫಾರಸು ಮಾಡಿದಂತೆಯೇ ಗೊಬ್ಬರ ಬಳಸಬೇಕು. ಇದರಿಂದ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಶಿಕ್ಷಣ ನಿರ್ದೇಶಕ ಡಾ.ವಿ.ಆರ್.ಕಿರೆಸೂರ್ ಅವರು ಮಾತನಾ ಡಿಪ್ಲೋಮಾ ಕೃಷಿ ಮತ್ತು ಕೃಷಿ ಪದವಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಗ್ರಾಮೀಣ ಪ್ರದೇಶಗಳ ರೈತರ ಮಕ್ಕಳು ಹೆಬ್ಬ. ಸಂಖ್ಯೆಯಲ್ಲಿ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಳ್ಳಬೇಕು ಎಂದರು.
ಬಸರಕೋಡ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಬಿ.ಮೇಟಿ ಮಾತನಾಡಿ, ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳು ರೈತರಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜೇನು ಸಾಕಾಣಿಕೆ, ಕುರಿ-ಕೋಳಿ ಸಾಕಾಣಿಕೆ ಮುಂತಾದ ಉಪಕಸಬುಗಳ ಬಗೆಗೆ ಇನ್ನಷ್ಟು ಸೌಲಭ್ಯ ಮತ್ತು ಮಾಹಿತಿಯನ್ನು ತಲುಪಿಸಬೇಕೆಂದರು.
ಇದನ್ನು ಓದಿದ್ದೀರಾ? ವಿಜಯಪುರ | ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಬಗೆಯ ಕೌಶಲ್ಯ ಅಗತ್ಯ: ಪ್ರೊ.ಓಂಕಾರ ಕಾಕಡೆ
ಕಾರ್ಯಕ್ರಮದಲ್ಲಿ ಸಹ ಸಂಶೋಧನಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಧಾರವಾಡ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಸಿ.ಆರ್.ಪಾಟೀಲ, ಕೀಟಶಾಸ್ತ್ರ ತಜ್ಞ ಡಾ.ಎ.ಪಿ.ಬಿರಾದಾರ, ಕೆವಿಕೆ ಮುಖ್ಯಸ್ಥ ಮತ್ತು ರೋಗಶಾಸ್ತ್ರ ತಜ್ಞ ಡಾ.ಎಸ್.ಎಮ್.ವಸ್ತ್ರದ, ತೋಟಗಾರಿಕೆ ತಜ್ಞರಾದ ಕುಶಾಲ, ಡಿ.ಕೆ.ಹರೀಶ. ಮಣ್ಣು ಶಾಸ್ತ್ರ ತಜ್ಞ ಸಿದ್ದರಾಮ ಪಾಟೀಲ, ಬೇಸಾಯ ಶಾಸ್ತ್ರ ತಜ್ಞ ಬಿ.ಟಿ.ನಾಡಗೌಡ, ಬಸರಕೋಡ, ಡವಳಗಿ, ರೂಡಗಿ, ಸಿದ್ದಾಪುರ ಗ್ರಾಮದ ರೈತರು ಮತ್ತು ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
