ರಾಜ್ಯದಲ್ಲಿ ಹಿಂಗಾರು ಮಹಾ ಮಳೆ ಸತತವಾಗಿ ಸುರಿದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಬಗ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರು ಮಳೆ ಹಾನಿ ಸಂಬಂಧ ಸಚಿವರು ಮತ್ತು ಅಧಿಕಾರಿಗಳ ಜೊತೆ ಯಾವುದೇ ಸಭೆ ನಡೆಸದಿರುವ ಬಗ್ಗೆ ಈ ದಿನ.ಕಾಮ್ ಟೀಕಿಸಿ ವರದಿ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಜಿಲ್ಲೆಗಳಲ್ಲಿ ಆಗಿರುವ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದಿದ್ದಾರೆ.
ರೈತ ಹೋರಾಟಗಾರರು ಮತ್ತು ರೈತರನ್ನು ಮಾತನಾಡಿಸಿ ಮಳೆ ಹಾನಿ ಬಗ್ಗೆ ಕಳೆದ ಗುರುವಾರ (ಅ.24)ದಂದು ಈ ದಿನ.ಕಾಮ್ ‘ಉಪಚುನಾವಣೆ ಗುಂಗಲ್ಲಿ ಸರ್ಕಾರ; ಮಹಾ ಮಳೆಯಲ್ಲಿ ಕರಗುತ್ತಿದೆ ರೈತನ ಕಣ್ಣೀರು!’ ಶಿರ್ಷಿಕೆಯಡಿ ವರದಿ ಪ್ರಕಟಿಸಿತ್ತು.
“ಉಪ ಚುನಾವಣೆಯ ಹೊತ್ತಲ್ಲಿ ರಾಜ್ಯದಲ್ಲಿ ಹಿಂಗಾರು ಮಳೆ ಸೃಷ್ಟಿಸಿರುವ ಅನಾಹುತಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ರಾಜ್ಯ ಸರ್ಕಾರ ಗ್ಯಾರಂಟಿಗಳ ಗುಂಗಿನಲ್ಲೇ ಕಾಲ ಕಳೆಯುತ್ತಿದೆ. ಸಿಎಂ ಆದ ಹೊಸತರಲ್ಲಿ ಸಾಲು ಸಾಲು ಜಿಲ್ಲಾಧಿಕಾರಿಗಳ ಸಭೆ ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ಈಗ ಅತಿವೃಷ್ಟಿ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆದು ಸಲಹೆ, ಸೂಚನೆ ಕೊಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ” ಎಂದು ವರದಿಯಲ್ಲಿ ಟೀಕಿಸಲಾಗಿತ್ತು.
ಈ ದಿನ.ಕಾಮ್ ಪ್ರಕಟಿಸಿದ್ದ ವರದಿ: ಉಪಚುನಾವಣೆ ಗುಂಗಲ್ಲಿ ಸರ್ಕಾರ; ಮಹಾ ಮಳೆಯಲ್ಲಿ ಕರಗುತ್ತಿದೆ ರೈತನ ಕಣ್ಣೀರು!
ರಾಜ್ಯದ ಅತಿವೃಷ್ಟಿ ಬಗ್ಗೆ ಭಾರತೀಯ ಕೃಷಿಕ ಸಮಾಜ (ಸಂ) ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಈ ದಿನ.ಕಾಮ್ ಜೊತೆ ಮಾತನಾಡಿ, “ಕಳೆದ ವರ್ಷ ರಾಜ್ಯ ಹಸಿರು ಬರಗಾಲ ಎದುರಿಸಿತ್ತು. ಈ ವರ್ಷ ಮುಂಗಾರು ಮಳೆ ಕೆಲವು ಕಡೆ ಕೈಕೊಟ್ಟಿದೆ. ಹಲವೆಡೆ ಹೆಚ್ಚಾಗಿ ಸಮರ್ಪಕ ಬೆಳೆ ರೈತರ ಕೈಗೆ ಸಿಕ್ಕಿಲ್ಲ. ಈಗ ಹಿಂಗಾರು ಮಳೆ ರಾಜ್ಯದಲ್ಲಿ 15 ದಿನದಿಂದ ಸುರಿಯುತ್ತಿದೆ. ಹೆಸರು, ಕಡಲೆ, ಮೆಕ್ಕೆಜೋಳ, ಉದ್ದು, ಶೇಂಗಾ, ಹತ್ತಿ ಅಂತ ಸೂಕ್ಷ್ಮ ಬೆಳೆಗಳು ಮಳೆಗೆ ತುತ್ತಾಗಿವೆ. ಇದರಿಂದ ಹಿಂಗಾರು ಬೆಳೆಗಳ ಅವಧಿ ಏರು ಪೇರಾಗಿ ಸಮರ್ಪಕ ಬೆಳೆ ಬೆಳೆಯುವುದು ರೈತರಿಗೆ ಕಷ್ಟವಾಗಲಿದೆ. ಈ ಭಾರಿಯ ಕರ್ನಾಟಕ ಅತಿವೃಷ್ಟಿಯನ್ನು ರಾಷ್ಟೀಯ ವಿಪತ್ತು ಎಂದು ಘೋಷಿಸಿದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ಯಡಿ ಪರಿಹಾರ ಘೋಷಿಸಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದ್ದರು.
“ರಾಜ್ಯ ಸರ್ಕಾರ ಕೂಡಲೇ ರಾಜ್ಯದ ಅತಿವೃಷ್ಟಿ ಬಗ್ಗೆ ಗ್ರಾಮೀಣ ಮಟ್ಟದಿಂದ ಅಧಿಕಾರಿಗಳಿಂದ ವರದಿ ಪಡೆದು, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಡೆ ಯೋಚಿಸಬೇಕು. ಮಹಾ ಮಳೆಯಲ್ಲಿ ಕರಗುತ್ತಿರುವ ರೈತನ ಕಣ್ಣೀರನ್ನು ಸರ್ಕಾರ ಒರೆಸಿ, ‘ಸಿದ್ದರಾಮಯ್ಯ ಸರ್ಕಾರ-ಜನಪರ ಸರ್ಕಾರ’ ಎಂಬ ಅವರದ್ದೇ ಹೇಳಿಕೆಯನ್ನು ಈ ಸಂದರ್ಭದಲ್ಲಿ ಸಾಬೀತುಪಡಿಸಲಿ” ಎಂದು ವರದಿ ಮೂಲಕ ಎಚ್ಚರಿಸಲಾಗಿತ್ತು.
ಈ ದಿನ.ಕಾಮ್ ವರದಿ ಬೆನ್ನಲ್ಲೇ ಹಿಂಗಾರು ಮಳೆಯ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದ ನಡೆಸಿ ಮಾಹಿತಿ ಪಡೆದಿದ್ದಾರೆ. ಸಭೆಯಲ್ಲಿ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಕಂದಾಯ ಇಲಾಖೆ ಸಚಿವರಾದ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ, ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್ , ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ , ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.