ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ–ಬಾಲಕಿಯರ ಬೆಳಗಾವಿ ವಿಭಾಗಮಟ್ಟದ ಬಾಲ್ ಬಾಡ್ಮಿಂಟನ್ ಟೂರ್ನಿ ಹಾಗೂ ಗದಗ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
‘ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯ. ಸೋಲೇ ಗೆಲುವಿನ ಮೆಟ್ಟಿಲು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಅವಶ್ಯ. ಇದರಿಂದ ತಂಡಗಳೊಂದಿಗೆ ಸಮನ್ವಯತೆ, ಹೊಂದಿಕೊಳ್ಳುವ ಸ್ವಭಾವ ಬೆಳೆಯುತ್ತದೆ. ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ, ಕ್ರೀಡಾಕೂಟ ಯಶಸ್ವಿಗೊಳಿಸಬೇಕು’ ಎಂದು ಹೇಳಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಭರತ್ ಎಸ್., ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರಡಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಂ.ಎ. ಹವಳದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ ಕುರಿಯವರ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಬಿ.ಕೊಣ್ಣೂರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಗದಗ ಗ್ರಾಮೀಣ ಅಧ್ಯಕ್ಷ ಪವಾರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿ ಎನ್.ಎಸ್.ಪಾಟೀಲ ಇದ್ದರು.
ಇದನ್ನು ಓದಿದೀರಾ: ಕುಮಾರಸ್ವಾಮಿ ಆರೋಪ ಮಾಡೋದು ಬಿಟ್ಟು ಚುನಾವಣೆ ಎದುರಿಸಲಿ: ಡಿ.ಕೆ ಸುರೇಶ್
ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಕ್ಷೇತ್ರ ಸಮನ್ವಯಾಧಿಕಾರಿಗಳು ಸೇರಿದಂತೆ 9 ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
