ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲೇ 41 ಶಿಶುಗಳು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಯಲಿಗೆ ಬಂದಿದೆ. ನಿರಂತರವಾಗಿ ನವಜಾತ ಶಿಶುಗಳು ಸಾವನ್ನಪ್ಪುತ್ತಿದ್ದರೂ, ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಾಗಿರುವ ಬಿಮ್ಸ್‌ನಲ್ಲಿ ಪ್ರತಿದಿನ 25ಕ್ಕೂ ಹೆಚ್ಚು ಹೆರಿಗೆಗಳು ಆಗುತ್ತವೆ. ಹೀಗಾಗಿ, ಬಿಮ್ಸ್‌ಗೆ ಶಿಶುಗಳು ಮತ್ತು ತಾಯಂದಿರ ಆರೋಗ್ಯಕ್ಕಾಗಿ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯವೂ ಹಲವು ವರ್ಷಗಳಿಮದ ಇದೆ. ಆದರೆ, ಹೆಚ್ಚಿನ ಸೌಲಭ್ಯಗಳು ಆಸ್ಪತ್ರೆಗೆ ದೊರೆತಿಲ್ಲ ಎಂಬ ಆರೋಪಗಳಿವೆ. ಈ ನಡುವೆ, ಮೂರೇ ತಿಂಗಳಲ್ಲಿ 41 ಶಿಶುಗಳು ಸಾವನ್ನಪ್ಪಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಬಿಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್‌ನಲ್ಲಿ 12, ಸೆಪ್ಟಂಬರ್ನಲ್ಲಿ 18 ಹಾಗೂ ಅಕ್ಟೋಬರ್ನಲ್ಲಿ 11 ಶಿಶುಗಳು ಸಾವನ್ನಪ್ಪಿವೆ. ಆಸ್ಪತ್ರೆಯಲ್ಲಿರುವ ಏರ್ ಕಂಪ್ರೆಸರ್ ಕೆಟ್ಟಿರುವುದೇ ಶಿಶುಗಳ ಸಾವಿಗೆ ಕಾರಣವೆಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿ ಎರಡು ಏರ್ ಕಂಪ್ರೆಸರ್‌ಗಳಿವೆ. ಅವುಗಳಲ್ಲಿ ಒಂದು ಏರ್ ಕಂಪ್ರೆಸರ್ ಮೂರು ತಿಂಗಳ ಹಿಂದೆಯೇ ಕೆಟ್ಟಿದೆ. ಇನ್ನೂ ಅದನ್ನು ರಿಪೇರಿ ಮಾಡಿಲ್ಲ. ಪರಿಣಾಮ, ಶಿಶುಗಳಿಗೆ ಸರಿಯಾಗಿ ಆಮ್ಲಜನಕ ಪೂರೈಕೆಯಾಗದೆ, ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
“ಶಿಶುಗಳು ಸಾವನ್ನಪ್ಪಿರುವುದ ಸತ್ಯ. ಸಾವಿಗೆ ಕಾರಣಗಳೇನು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ಏರ್ ಕಂಪ್ರೆಸರ್ ಕೆಟ್ಟಿದೆ. ಹೊಸ ಏರ್ ಕಂಪ್ರೆಸರ್ ಖರೀದಿಗೆ ಟೆಂಡರ್ ಕರೆಯಲಾಘಿದೆ. ಅವಧಿಪೂರ್ವ ಪ್ರಸವ, ಶಿಶುಗಳ ತೂಕ ಕಡಿಮೆ ಸೆರಿದಂತೆ ನಾನಾ ಕಾರಣಗಳಿಂದ ಮಕ್ಕಳು ಸಾವನ್ನಪ್ಪಿದ್ದಾರೆ” ಎಂದು ಬಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಅಶೋಕ ಶೆಟ್ಟಿ ಹೇಳಿದ್ದಾರೆ.