ಇದು ನಿಖಿಲ್ ಮತ್ತು ಯೋಗೇಶ್ವರ್ ನಡುವಿನ ಕಾದಾಟವಲ್ಲ; ಸೈನಿಕ-ಜಾಗ್ವಾರ್‌ಗಳ ಸೆಣಸಾಟವೂ ಅಲ್ಲ. ದೇವೇಗೌಡ ಮತ್ತು ಸಿದ್ದರಾಮಯ್ಯ; ಎಚ್.ಡಿ ಕುಮಾರಸ್ವಾಮಿ-ಡಿ.ಕೆ ಶಿವಕುಮಾರ್‌ಗಳೆಂಬ ಘಟಾನುಘಟಿಗಳ ನಡುವಿನ ಕಾದಾಟ. ಪ್ರತಿಷ್ಠೆಯನ್ನು ಪಣಕ್ಕಿಟ್ಟ ಹೋರಾಟ.
ಗೊಂಬೆಗಳ ನಾಡಾದ ಚನ್ನಪಟ್ಟಣದಲ್ಲಿ ಈಗ ಸ್ಟಾರ್ ವಾರ್ ಶುರುವಾಗಿದೆ. ಉಪಚುನಾವಣೆಯ ನೆಪದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ಎಂಬ ಇಬ್ಬರು ಕನ್ನಡ ಚಿತ್ರರಂಗದ ಮಾಜಿ ನಾಯಕನಟರು ಈಗ ಮತದಾರರ ಮುಂದೆ ಕೈ ಮುಗಿದು ನಿಂತಿದ್ದಾರೆ. ಅಥವಾ ಅಕ್ಷರಶಃ ನರ್ತಿಸುತ್ತಿದ್ದಾರೆ.
ಮರದ ಕರಕುಶಲ ವಸ್ತುಗಳಿಗೆ, ಮರದ ಗೊಂಬೆ ಮತ್ತು ಆಟಿಕೆಗಳಿಗೆ ಚನ್ನಪಟ್ಟಣ ಹೆಸರಾಗಿತ್ತು. ಆ ಕಾರಣದಿಂದಾಗಿ ಚನ್ನಪಟ್ಟಣವನ್ನು ಬೊಂಬೆನಗರಿ ಎನ್ನುತ್ತಿದ್ದರು. ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯವರ ಹುಟ್ಟೂರು, ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಇದು ಸೇನಾ ನೆಲೆಯಾಗಿತ್ತು. ಪಾಳೇಗಾರರ ಆಡಳಿತವನ್ನೂ ಚನ್ನಪಟ್ಟಣ ಕಂಡಿತ್ತು. ಹೈದರಾಲಿಯ ಗುರು ಅಕ್ಮಲ್ ಶಾ ಖಾದ್ರಿಯ ಮಸೀದಿಯೂ ಚನ್ನಪಟ್ಟಣದಲ್ಲಿದೆ. ಇವುಗಳ ಜೊತೆಗೆ ಕ್ಷೇತ್ರದ ಕತೆ ಹೇಳುವ ಸಾವಿರಕ್ಕೂ ಹೆಚ್ಚಿನ ವೀರಗಲ್ಲು, ಮಾಸ್ತಿಕಲ್ಲುಗಳಿವೆ.
ಇಂತಹ ಐತಿಹಾಸಿಕ ಸ್ಥಳವಾದ ಚನ್ನಪಟ್ಟಣದಲ್ಲಿ ಈಗ ಉಪಚುನಾವಣೆ ಎಂಬ ಕದನ ಆರಂಭವಾಗಿದೆ. ದಿನದಿಂದ ದಿನಕ್ಕೆ ಕಾವು ಏರುತ್ತಿದೆ. ಮೊನ್ನೆ ‘ಸೈನಿಕ’ ಚಿತ್ರದ ಹೀರೋ ಯೋಗೇಶ್ವರ್ ನಾಮಪತ್ರ ಸಲ್ಲಿಕೆಯ ದಿನ ಜನಜಾತ್ರೆಯೇ ನೆರೆದಿತ್ತು. ನಿನ್ನೆ ‘ಜಾಗ್ವಾರ್’ ಚಿತ್ರದ ಹೀರೋ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ದಿನ, ಅದಕ್ಕಿಂತ ಹೆಚ್ಚಿನ ಜನ ಸೇರಿ, ಶಕ್ತಿ ಪ್ರದರ್ಶಿಸಲಾಗಿತ್ತು. ಇಬ್ಬರೂ ಸಿನೆಮಾ ಜಗತ್ತಿನತ್ತ ಅದೃಷ್ಟ ಅರಸಿ ಹೋದವರು, ತಲಾ ಎರಡೆರಡು ಚಿತ್ರಗಳಲ್ಲಿ ನಟಿಸಿ, ನಿರ್ಮಿಸಿ, ನಂತರ ರಾಜಕಾರಣದತ್ತ ಮುಖ ಮಾಡಿ, ‘ಸೇವೆ’ಗಾಗಿ ಜನರೆದುರು ನಿಂತವರು.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ಈಗ 61 ವರ್ಷ. ಚನ್ನಪಟ್ಟಣದ ಚಕ್ಕರೆಯವರು. ಬೆಂಗಳೂರಿನಲ್ಲಿ ಪದವಿ ಮುಗಿಸಿ, ಗಿರಿನಗರದಲ್ಲಿ ಕಾಯಿ ವ್ಯಾಪಾರ ಮಾಡುತ್ತಿದ್ದರು. 1988ರಲ್ಲಿ ಚಿತ್ರರಂಗದತ್ತ ಆಕರ್ಷಿತರಾದರು. ಎರಡು ಮೂರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದರು. ಅದರ ನಡುವೆಯೇ ಮೆಗಾಸಿಟಿ ಎಂಬ ಮಧ್ಯಮವರ್ಗದ ಜನಕ್ಕೆ ಸೈಟ್ ಕೊಡುವ ಯೋಜನೆ ಆರಂಭಿಸಿದರು. ಅದರಿಂದ ಹಣವೂ ಹರಿದು ಬಂದಿತ್ತು. ಸೈಟ್ ಸಿಕ್ತಾ ಇಲ್ಲವಾ ಎನ್ನುವುದನ್ನು ಹಣ ಕಟ್ಟಿದ ಜನ ಹೇಳಬೇಕು, ಇರಲಿ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂರು ಪಕ್ಷಗಳಿಂದಲೂ ಕುಟುಂಬ ಅಭ್ಯರ್ಥಿಗಳ ದುರಂತ ರಾಜಕಾರಣ
1999ರಲ್ಲಿ ರಾಜಕೀಯಕ್ಕೆ ಧುಮುಕಿ, ಚನ್ನಪಟ್ಟಣದಿಂದ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡರು. ಅಧಿಕಾರ, ಹಣ ಕಂಡಾಕ್ಷಣ, ತಾವೇ ಏಕೆ ಚಿತ್ರ ನಿರ್ಮಿಸಬಾರದೆಂಬ ತೀರ್ಮಾನಕ್ಕೆ ಬಂದ ಯೋಗೇಶ್ವರ್, 2000ದಲ್ಲಿ ಮಹೇಶ್ ಸುಖಧರೆ ನಿರ್ದೇಶನದಲ್ಲಿ ʼಸೈನಿಕʼ ಎಂಬ ಚಿತ್ರದ ಮೂಲಕ ನಾಯಕನಟನಾದರು. ಚಿತ್ರ ಯಶಸ್ವಿಯಾಗದಿದ್ದರೂ, ಚಿತ್ರನಟ ಎಂಬ ಹೆಸರು ಸಿಕ್ಕಿತು.
ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದವರು, ನಂತರ ಕಾಂಗ್ರೆಸ್ ಸೇರಿ 2004, 2008ರಲ್ಲೂ ಗೆದ್ದು ಹ್ಯಾಟ್ರಿಕ್ ಗೆಲುವು ಕಂಡರು. ಆದರೆ, ಮಂತ್ರಿಯಾಗಬೇಕೆಂಬ ಆಸೆಗೆ ಬಿದ್ದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಆಪರೇಷನ್ ಕಮಲದ ಸೂತ್ರದಾರಿಯಾದರು. 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವಥ್ ರಿಂದ ಸೋತರು. ಛಲ ಬಿಡದ ಯೋಗೇಶ್ವರ್, ಅಶ್ವಥ್ ರನ್ನೇ ಬಿಜೆಪಿಗೆ ಕರೆತಂದು, ಮತ್ತೆ 2011ರಲ್ಲಿ ಮತ್ತೊಂದು ಉಪಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಸಚಿವರಾದರು. 2013ರಲ್ಲಿ ಬಿಜೆಪಿ ಬಿಟ್ಟು ಸಮಾಜವಾದಿ ಪಕ್ಷ ಸೇರಿದ ಯೋಗೇಶ್ವರ್, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರ ವಿರುದ್ಧ ಗೆದ್ದರು. ಆ ಮೂಲಕ ಚನ್ನಪಟ್ಟಣದಲ್ಲಿ ಪಕ್ಷ ಮುಖ್ಯವಲ್ಲ, ವ್ಯಕ್ತಿ ಮುಖ್ಯ ಎಂಬುದನ್ನು ಸಾರಿದರು.
2013, ಯೋಗೇಶ್ವರ್ ಅವರ ರಾಜಕೀಯದ ಉತ್ತುಂಗ ಸ್ಥಿತಿ. ಅದರ ನಂತರ ಸೋಲು ಬೆನ್ನೇರತೊಡಗಿತು. 2018ರ ಚುನಾವಣಾ ಸಮಯಕ್ಕೆ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡರು. ಆದರೆ, ಅಷ್ಟೊತ್ತಿಗೆ ರಾಮನಗರವನ್ನು ಪತ್ನಿಗೆ ಬಿಟ್ಟುಕೊಟ್ಟ ಕುಮಾರಸ್ವಾಮಿ, ಚನ್ನಪಟ್ಟಣದತ್ತ ಹೆಜ್ಜೆ ಇಟ್ಟಿದ್ದರು. ಆದಕಾರಣ 2018 ಮತ್ತು 2023- ಎರಡು ಸಲ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಸೋಲು ಕಂಡರು. 2020ರಲ್ಲಿ ಬಿಜೆಪಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು.
ಬಿಜೆಪಿ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಾಗ, ನಿಜಕ್ಕೂ ಇರುಸು ಮುರುಸುಂಟಾಗಿದ್ದು ಯೋಗೇಶ್ವರ್‌ಗೆ. ಆದರೆ, ಅದನ್ನೂ ಅರಗಿಸಿಕೊಂಡರು. 2024ರ ಲೋಕಸಭಾ ಚುನಾವಣೆಯಲ್ಲಿ, ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಅಭ್ಯರ್ಥಿ ಎಂದಾಗ, ಯೋಗೇಶ್ವರ್ ಎದ್ದು ನಿಂತರು. ಹೆಚ್ಚು ಉತ್ಸಾಹದಿಂದ ಓಡಾಡಿದರು. ಬೆಂಗಳೂರು ಗ್ರಾಮಾಂತರದಲ್ಲಿ ಗೌಡರ ಅಳಿಯ ಡಾ. ಮಂಜುನಾಥರ ಗೆಲುವಿಗಾಗಿ ಹಗಲಿರುಳು ಶ್ರಮಿಸಿದರು. ಯೋಗೇಶ್ವರ್ ಅವರ ಈ ಅತಿ ಉತ್ಸಾಹದ ಹಿಂದೆ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಆಸೆ ಇತ್ತು. ಅದು ಸಹಜವಾಗಿತ್ತು.
ಆದರೆ, ಎರಡು ಬಾರಿ ಗೆದ್ದು, ಕ್ಷೇತ್ರವನ್ನು ಪುತ್ರನಿಗಾಗಿ ಹದವಾದ ಭೂಮಿಯನ್ನಾಗಿಸಿದ್ದ ಕುಮಾರಸ್ವಾಮಿಯವರು ಯೋಗೇಶ್ವರ್‌ಗೆ ಬಿಟ್ಟುಕೊಡುವುದುಂಟೇ? ಸತ್ಯ ಗೊತ್ತಾಗುತ್ತಿದ್ದಂತೆ ಯೋಗೇಶ್ವರ್, ಕುಮಾರಸ್ವಾಮಿಯವರ ಎದುರಾಳಿ ಕ್ಯಾಂಪಿನಲ್ಲಿ ಕಾಣಿಸಿಕೊಂಡರು, ಕಾಂಗ್ರೆಸ್ ಸೇರಿ ಅಭ್ಯರ್ಥಿಯಾದರು.
ತೆಂಗಿನಕಾಯಿ ವ್ಯಾಪಾರಿ, ಚಲನಚಿತ್ರ ನಟ, ಲ್ಯಾಂಡ್ ಡೆವಲಪರ್, ರಾಜಕಾರಣಿ- ಹೀಗೆ ನಾಲ್ಕಾರು ವೇಷಗಳನ್ನು ಎತ್ತಿ, ಹಲವಾರು ಏಳು-ಬೀಳುಗಳನ್ನು ಕಂಡು, 61ರ ಗಡಿ ದಾಟಿರುವ ಯೋಗೇಶ್ವರ್, ತಮ್ಮ ಇಲ್ಲಿಯವರೆಗಿನ ಆಸ್ತಿಯನ್ನು 35 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. ಐದು ಸಲ ಗೆದ್ದು ಶಾಸಕ, ಸಚಿವರಾಗಿದ್ದ ಯೋಗೇಶ್ವರ್, ಮೂರು ಸಲ ಸೋತು, ಸೋಲಿನ ರುಚಿಯನ್ನೂ ಅನುಭವಿಸಿದ್ದಾರೆ. ಒಂದು ಸಲ, ವಿಧಾನ ಪರಿಷತ್ ಸದಸ್ಯರಾಗಿ, ಅದಕ್ಕೂ ರಾಜೀನಾಮೆ ನೀಡಿದ್ದಾರೆ. 2009ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ, ಅಲ್ಲೂ ಸೋಲು ಕಂಡಿದ್ದಾರೆ. ಹಾಗಾಗಿ ಈ ಬಾರಿಯ ಉಪಚುನಾವಣೆ ಅವರ 10ನೇ ಅಗ್ನಿಪರೀಕ್ಷೆ.
ಇದನ್ನು ಓದಿದ್ದೀರಾ?: ನಿಖಿಲ್ ರೋಡ್ ಶೋ | ನೀತಿ ಸಂಹಿತೆ ಉಲ್ಲಂಘನೆ, ಆಯೋಜಕರಿಗೆ ನೋಟಿಸ್, ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ
ಇನ್ನು ಜೆಡಿಎಸ್‌ನಿಂದ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ, ಹುಟ್ತಾನೆ ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಬಂದವರು. ಅವರು ಕಣ್ಬಿಡುವ ಹೊತ್ತಿಗೆ ತಾತಾ ಎಚ್.ಡಿ. ದೇವೇಗೌಡ, ರಾಜಕೀಯ ರಂಗದಲ್ಲಿ ರಿಂಗ್ ಮಾಸ್ಟರ್ ಎನಿಸಿಕೊಂಡಿದ್ದರು. ಬೆಳೆಯುತ್ತ ದೊಡ್ಡಪ್ಪ ಎಚ್.ಡಿ. ರೇವಣ್ಣ, ಅಪ್ಪ ಎಚ್.ಡಿ. ಕುಮಾರಸ್ವಾಮಿಯವರ ರಾಜಕಾರಣವನ್ನು. ರಾಜಕಾರಣವನ್ನೇ ಹಾಸುಹೊದ್ದ ಕುಟುಂಬವನ್ನು. 2006ರಲ್ಲಿ ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾದಾಗ, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಹೋಟೆಲ್‌ವೊಂದರಲ್ಲಿ ಗೆಳೆಯರೊಂದಿಗೆ ಗಲಾಟೆ ಮಾಡಿಕೊಳ್ಳುವ ಮೂಲಕ, ನಿಖಿಲ್ ಕುಮಾರಸ್ವಾಮಿ ನಾಡಿನ ಜನತೆಯ ಕಣ್ಣಿಗೆ ಬಿದ್ದಿದ್ದರು.

ಆ ನಂತರ, 2016ರಲ್ಲಿ ಚಿತ್ರರಂಗದತ್ತ ಹೊರಳಿ, ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಅತಿ ಅದ್ದೂರಿಯ ಬಿಗ್ ಬಜೆಟ್- ಆ ಕಾಲಕ್ಕೇ 65 ಕೋಟಿ ಖರ್ಚಿನ ಚಿತ್ರವಾದ ʼಜಾಗ್ವಾರ್ʼ ಮೂಲಕ ನಾಯಕನಟರಾದರು. ಕುಮಾರಸ್ವಾಮಿಯವರೇ ನಿರ್ಮಾಪಕರಾಗಿದ್ದ ಆ ಚಿತ್ರ, ಯಶಸ್ವಿಯಾಗದಿದ್ದರೂ ನಿಖಿಲ್‌ರಿಗೆ ಒಂದು ಮಟ್ಟಿಗಿನ ಹೆಸರು ತಂದುಕೊಟ್ಟಿತ್ತು. ಚಿತ್ರನಟ ಎಂದು ಬ್ರ್ಯಾಂಡ್ ಮಾಡಿತ್ತು. ಗ್ಲ್ಯಾಮರ್ ಲೋಕದ ಜನಪ್ರಿಯತೆಯನ್ನು ಅಲೆಯಲ್ಲಿ ತೇಲುತ್ತಿದ್ದ ನಿಖಿಲ್, 2019ರಲ್ಲಿ ಎದುರಾದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದರು. ನಿಖಿಲ್ ವಿರುದ್ಧ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಕಣದಲ್ಲಿದ್ದರು. ಇಬ್ಬರಿಗೂ ಚಿತ್ರರಂಗ ಮತ್ತು ರಾಜಕಾರಣದ ನಂಟಿತ್ತು. ವಯಸ್ಸಿನ ಅಂತರ ಹೆಚ್ಚಿತ್ತು. ಅಮ್ಮ-ಮಗ ನಡುವಿನ ಸ್ಪರ್ಧೆಯಂತಿತ್ತು.
ಆ ಸಂದರ್ಭದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮಂಡ್ಯದ ಅಷ್ಟೂ ವಿಧಾನಸಭಾ ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿತ್ತು. ಇಬ್ಬರು ಸಚಿವರಿದ್ದರು. ಜಿಲ್ಲೆಯಲ್ಲಿ ಬಹುಸಂಖ್ಯಾತರಾದ ಒಕ್ಕಲಿಗರು ಮತ್ತು ಜಾತಿ ಬೆಂಬಲವಿತ್ತು. ಅಧಿಕಾರವಿತ್ತು, ಹಣದ ಹರಿವಿತ್ತು. ಇಷ್ಟೆಲ್ಲ ಇದ್ದಾಗ, ನಿಖಿಲ್ ಗೆಲುವು ಸುಲಭ ಎನ್ನುವ ವಾತಾವರಣವಿತ್ತು. ಆದರೆ, ನಿಖಿಲ್ ಸೋತರು. ಅಲ್ಲಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಬಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.
ನಿಖಿಲ್ ಮದುವೆ ಮಕ್ಕಳು ಎಂದು ವೈಯಕ್ತಿಕ ಬದುಕಿನತ್ತ ಹೊರಳಿದರು. ಸಿನೆಮಾ ಜಗತ್ತಿನಿಂದ ದೂರವಾಗಿ ರಾಜಕಾರಣದತ್ತ ಮುಖಮಾಡಿದರು. ಅದಕ್ಕೆ ಪೂರಕವಾಗಿ 2023ರ ವಿಧಾನಸಭಾ ಚುನಾವಣೆಗೂ ಮುನ್ನ, ನಿಖಿಲ್‌ರನ್ನು ಜೆಡಿಎಸ್ ಯೂತ್ ಪ್ರೆಸಿಡೆಂಟ್ ಮಾಡಲಾಯಿತು. ಹಾಗೆಯೇ ಅಪ್ಪ ಮತ್ತು ತಾತ ಗೆದ್ದು ಮುಖ್ಯಮಂತ್ರಿಗಳಾಗಿದ್ದ ರಾಮನಗರವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳುವತ್ತ ಗಮನ ಹರಿಸಿದರು. ಅಭ್ಯರ್ಥಿಯೂ ಆದರು. ಆದರೆ, ಎರಡನೇ ಬಾರಿಯೂ ಸೋತರು.
2024ರ ಲೋಕಸಭಾ ಚುನಾವಣೆಯ ವೇಳೆಗೆ, ದೊಡ್ಡಗೌಡರ ತಲೆಯಲ್ಲಿ ಬೇರೆಯದೇ ಓಡುತ್ತಿತ್ತು. ಅದು ಬಿಜೆಪಿಯ ಮೋದಿಗೆ ಸಂದೇಶ ರವಾನಿಸಿತ್ತು. ಆದಕಾರಣ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟಿತು. ಮಂಡ್ಯ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯಾದರೆ, ಬೆಂಗಳೂರು ಗ್ರಾಮಾಂತರದಿಂದ ಅಳಿಯ ಡಾ. ಮಂಜುನಾಥ್ ಕಣಕ್ಕಿಳಿದರು. ತುಮಕೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಗೌಡರು ಹೇಳಿದವರಿಗೆ ಟಿಕೆಟ್ ಕೊಟ್ಟರು.
ಅದರ ಫಲವಾಗಿ ಬಿಜೆಪಿ 17, ಜೆಡಿಎಸ್ 2 ಮತ್ತು ಕಾಂಗ್ರೆಸ್ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಗೌಡರು ಗೆದ್ದಿದ್ದರು, ಸಿದ್ದರಾಮಯ್ಯ ಸೋತಿದ್ದರು. ಅಷ್ಟೇ ಅಲ್ಲ, ಗೆದ್ದ ಕುಮಾರಸ್ವಾಮಿ ಮೋದಿ ಕ್ಯಾಬಿನೆಟ್‌ನಲ್ಲಿ ಕೈಗಾರಿಕಾ ಸಚಿವರಾಗಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದರು. ಕುಮಾರಸ್ವಾಮಿಯವರಿಂದ ತೆರವಾದ ಚನ್ನಪಟ್ಟಣ ಕ್ಷೇತ್ರಕ್ಕೆ ಪುತ್ರ ನಿಖಿಲ್ ಕಣಕ್ಕಿಳಿಸುವುದನ್ನು ದೊಡ್ಡಗೌಡರು ನಿರ್ಧರಿಸಿಯಾಗಿತ್ತು. ಆ ನಿರ್ಧಾರದಂತೆ ಇಂದಿನ ಚನ್ನಪಟ್ಟಣದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
ಚಿತ್ರನಟ, ಯೂತ್ ಪ್ರೆಸಿಡೆಂಟ್, ಎರಡು ಸೋಲಿನ ಅನುಭವ- ಹೀಗೆ ಮೂರ್‍ನಾಲ್ಕು ವೇಷಗಳನ್ನು ಎತ್ತಿ, ಪುಟ್ಟ ಕಷ್ಟಗಳನ್ನು ಕಂಡು, 36ರ ಗಡಿ ದಾಟಿರುವ ನಿಖಿಲ್ ಕುಮಾರಸ್ವಾಮಿ, ತಮ್ಮ ಇಲ್ಲಿಯವರೆಗಿನ ಆಸ್ತಿಯನ್ನು 107 ಕೋಟಿ ರೂಪಾಯಿ ಎಂದು ಘೋಷಿಸಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಗೆ ರಾಮನಗರದಿಂದ ಸ್ಪರ್ಧಿಸಿದ್ದ ನಿಖಿಲ್, ಆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ 77 ಕೋಟಿಯ ಒಡೆಯ ಎಂದು ಘೋಷಿಸಿಕೊಂಡಿದ್ದರು. 2023ರಲ್ಲಿ 77 ಕೋಟಿ ಇದ್ದ ಆಸ್ತಿ, ಕೇವಲ ಒಂದೂವರೆ ವರ್ಷದಲ್ಲಿ 36 ಕೋಟಿ ಗಳಿಕೆ ಕಂಡು, 107 ಕೋಟಿಗೇರಿದೆ. 36 ವರ್ಷ ವಯಸ್ಸಿನ ನಿಖಿಲ್, ಮಾಡುತ್ತಿರುವ ಕೆಲಸವಾದರೂ ಏನು? ಎಲ್ಲಿ ಯಾವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ? ಎಲ್ಲಿಂದ ಬಂತು ಈ ಆಸ್ತಿ ಎನ್ನುವುದನ್ನು ಚನ್ನಪಟ್ಟಣದ ಜನ ಕೇಳಬೇಕಷ್ಟೇ.
ನೂರಾರು ಕೋಟಿಗಳ ಒಡೆಯ ನಿಖಿಲ್, ಈಗ ಉಪಚುನಾವಣಾ ಅಖಾಡಕ್ಕಿಳಿದಿದ್ದಾರೆ. ಇವರ ಬೆನ್ನಿಗೆ ದೇಶದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿಯವರಿದ್ದಾರೆ. ಸಾಲದು ಎಂದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸಾವಿರಾರು ಕಾರ್ಯಕರ್ತರಿದ್ದಾರೆ. ಹಾಗೆಯೇ ಸಿ.ಪಿ. ಯೋಗೇಶ್ವರ್ ಬೆನ್ನ ಹಿಂದೆ, ರಾಜ್ಯ ಕಾಂಗ್ರೆಸ್ ಸರ್ಕಾರವಿದೆ. ಅದಕ್ಕಿಂತಲೂ ಹೆಚ್ಚಾಗಿ ಸಾತನೂರಿನ ಬಂಡೆಕಲ್ಲಿನಂತಹ ಡಿಕೆ ಸಹೋದರರಿದ್ದಾರೆ. ಎತ್ತಿ ಮೆರೆಸಲು ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರಿದ್ದಾರೆ. ಹಾಗಾಗಿ ಇದು ನಿಖಿಲ್ ಮತ್ತು ಯೋಗೇಶ್ವರ್ ನಡುವಿನ ಕಾದಾಟವಲ್ಲ; ಸೈನಿಕ-ಜಾಗ್ವಾರ್‌ಗಳ ಸೆಣಸಾಟವೂ ಅಲ್ಲ. ದೇವೇಗೌಡ ಮತ್ತು ಸಿದ್ದರಾಮಯ್ಯ; ಎಚ್.ಡಿ ಕುಮಾರಸ್ವಾಮಿ-ಡಿ.ಕೆ ಶಿವಕುಮಾರ್‌ಗಳೆಂಬ ಘಟಾನುಘಟಿಗಳ ನಡುವಿನ ಕಾದಾಟ. ಪ್ರತಿಷ್ಠೆಯನ್ನು ಪಣಕ್ಕಿಟ್ಟ ಹೋರಾಟ.

ಚನ್ನಪಟ್ಟಣವೆಂಬ ಚಿಕ್ಕ ಪಟ್ಟಣಕ್ಕೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನದ ರೂಪದಲ್ಲಿ- ಭಾಷಣಗಳ ಮೂಲಕ ನೂರಾರು ಕೋಟಿ ಹರಿದುಬಂದಿದೆ. ಚನ್ನಪಟ್ಟಣ ತಾಲೂಕಿನಾದ್ಯಂತ ಕಂಡು ಕೇಳರಿಯದ ಕಲ್ಯಾಣ ಕಾರ್ಯಕ್ರಮಗಳ ಜಾತ್ರೆಯೇ ನಡೆಯುತ್ತಿದೆ. ಮತದಾನದ ವೇಳೆಗೆ ಇಲ್ಲಿ ಅದೇನು ಘಟಿಸುತ್ತದೋ, ಅದೆಷ್ಟು ಹಣ-ಹೆಂಡ ಹರಿದಾಡುತ್ತದೋ- ಕೆಂಗಲ್ ಹನುಮಂತನೇ ಬಲ್ಲ. ಗೊಂಬೆಗಳ ನಾಡನ್ನು ಅದ್ಯಾರು ಗೆಲ್ಲುತ್ತಾರೋ- ಚನ್ನಪಟ್ಟಣದ ಗೊಂಬೆಗಳೇ ಹೇಳಬೇಕು.
ಸದ್ಯಕ್ಕೆ ಚನ್ನಪಟ್ಟಣದ ಗೊಂಬೆ ಹೇಳತೈತೆ… ಮತದಾರ, ನೀನೇ ರಾಜಕುಮಾರ. ಅದೂ ಕೂಡ ಮತ ಚಲಾಯಿಸುವವರೆಗೆ ಮಾತ್ರ.

ಲೇಖಕ, ಪತ್ರಕರ್ತ