ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷ, ಸಂಘಟನೆ ಇಡೀ ರಾಜ್ಯದಲ್ಲಿಯೇ ಹೆಚ್ಚು ಬಲಿಷ್ಠವಾಗಿದ್ದು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕಾರ್ಯಕರ್ತರು ಮುಖಂಡರು ಆತ್ಮವಿಶ್ವಾಸ ಮತ್ತು ಸಹೋದರತ್ವದ ಮೂಲಕ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರು ಹಾಗೂ ಪದವೀಧರರ ವಿಭಾಗದ ರಾಜ್ಯಾಧ್ಯಕ್ಷ ಎ ಎನ್ ನಟರಾಜ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು, “ಹಿಂದಿನಿಂದಲೂ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಪಕ್ಷಕ್ಕೋಸ್ಕರ ಸಾಕಷ್ಟು ದುಡಿದಿದ್ದಾರೆ. ಈಗಲೂ ದುಡಿಯುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆತ್ಮವಿಶ್ವಾಸ ಮತ್ತು ಸಹೋದರತ್ವದ ಮೂಲಕ ಸಾಮೂಹಿಕ ನಾಯಕತ್ವದ ಅಡಿಯಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಪಕ್ಷದ ಸಿದ್ಧಾಂತಗಳನ್ನು ಮತ್ತು ನೀಡಿರುವ ಯೋಜನೆಗಳನ್ನು ಜನರ ಬಳಿ ತಲುಪಿಸಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು” ಎಂದು ಕರೆ ನೀಡಿದರು.
“ಈ ಹಿಂದೆಯೂ ನಾನು ಸಾಮಾಜಿಕ ಜಾಲತಾಣದ ಮುಖ್ಯಸ್ಥನಾಗಿದ್ದಾಗ ಸಾಕಷ್ಟು ಬಾರಿ ಚಿತ್ರದುರ್ಗದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದು, ಪದವೀಧರ ವಿಭಾಗದ ಕೆಪಿಸಿಸಿ ರಾಜ್ಯಾಧ್ಯಕ್ಷನಾಗಿ ಮೊದಲ ಬಾರಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದೇನೆ. ಇಲ್ಲಿರುವ ಎಲ್ಲ ನಾಯಕರು ಮುಖಂಡರು ಮತ್ತು ಕಾರ್ಯಕರ್ತರ ಸಹಯೋಗದೊಂದಿಗೆ ಅತಿ ಹೆಚ್ಚು ಪದವೀಧರರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು, ಚಿತ್ರದುರ್ಗ ಜಿಲ್ಲೆಯ ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮಾನಾಯಕರವರಿಗೆ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ” ಎಂದು ಕೋರಿದರು.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, “ಈ ಹಿಂದೆ ಇರುವಂತಹ ಬಿಜೆಪಿ ಸರ್ಕಾರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡದೇ, ಹಿಜಾಬ್ ಧರಿಸಬೇಕು ಬೇಡವೋ, ಜಟಕಾ ಕಟ್-ಹಲಾಲ್ ಕಟ್ ಮಾಂಸ ಖರೀದಿಸಬೇಕೋ ಬೇಡವೋ ಎಂದು ಬರೀ ಧರ್ಮಗಳ ನಡುವೆ ದ್ವೇಷ ಬಿತ್ತುವುದು, ಅದಕ್ಕೆ ಉತ್ತೇಜಿಸುವುದು ಮಾತ್ರ ಮಾಡುತ್ತ ಬಂದಿದೆ. ಹೀಗಿರುವಾಗ ನಮ್ಮ ಕಾಂಗ್ರೆಸ್ ಸರ್ಕಾರ ತಂದಿರುವಂತಹ ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಹನೆಯಿಂದ ಗ್ಯಾರಂಟಿ ಯೋಜನೆಗಳು ಯಾರಿಗೂ ಸರಿಯಾಗಿ ತಲುಪುತ್ತಿಲ್ಲ. ಇವುಗಳಿಂದ ಸರಿಯಾದ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ, ಹೀಗೆಲ್ಲಾ ಸುಳ್ಳು ಹೇಳಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಗ್ಯಾರೆಂಟಿ ಯೋಜನೆಗಳಿಂದ ಆಗಿರುವಂತಹ ಅನುಕೂಲಗಳನ್ನು ಸಾಕಷ್ಟು ಬಾರಿ ತಾವುಗಳು ಮಾಧ್ಯಮಗಳಲ್ಲಿ ನೋಡಿರಬಹುದು. ಗ್ಯಾರಂಟಿ ಯೋಜನೆಯಿಂದ ಬಂದಿರುವ ಹಣದಿಂದ ಒಬ್ಬ ತಾಯಿ ಗ್ರಂಥಾಲಯ ರಚಿಸುವುದು, ಫ್ರಿಡ್ಜ್, ಕಿವಿಯೋಲೆಗಳನ್ನು ತೆಗೆದುಕೊಂಡಿರುವುದು ಹೀಗೆ ಹತ್ತಾರು ರೀತಿಯಲ್ಲಿ ಬಡ ಕುಟುಂಬದ ಮಹಿಳೆಯರಿಗೆ ಅನುಕೂಲವಾಗಿದೆ” ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ ಕೆ ತಾಜ್ ಪೀರ್ ಮಾತನಾಡಿ, “ನಿಮ್ಮಂತಹ ವಾಗ್ಮಿಗಳು ನಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ ಸಾಕಷ್ಟು ವಿಷಯಗಳನ್ನು ಹಂಚುತ್ತ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಮತ್ತು ಪಕ್ಷ ಬಲಪಡಿಸುವ ಕೆಲಸವನ್ನು ಮಾಡುತ್ತಿರುತ್ತೀರಿ” ಎಂದು ಹೇಳಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿರುವುದಕ್ಕೆ ಧನ್ಯವಾದ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಮರಕುಂಬಿ ಪ್ರಕರಣದ ತೀರ್ಪು; ಸತ್ರ ನ್ಯಾ. ಸಿ ಚಂದ್ರಶೇಖರ್‌ರವರಿಗೆ ದಸಂಸ ಅಭಿನಂದನೆ
ಜಿಲ್ಲಾ ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಮಾತನಾಡಿ, “ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅನೇಕ ಪದವೀಧರರು ನೈತಿಕವಾಗಿ ಬೆಂಬಲವನ್ನು ನೀಡುತ್ತ ಬಂದಿರುತ್ತಾರೆ. ಆದರೆ ಹಲವು ಪದವೀಧರರು, ನಿರುದ್ಯೋಗಿಗಳು, ಉಪನ್ಯಾಸಕರು, ನಿವೃತ್ತ ಉದ್ಯೋಗಿಗಳು, ಪದವೀಧರ ಮಹಿಳೆಯರು, ಗೃಹಣಿಯರು ಇವರನ್ನು ನಮ್ಮ ಪಕ್ಷ ನೀಡಿರುವಂತಹ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಯುವನಿಧಿ ಮತ್ತು ಇತರ ಗ್ಯಾರಂಟಿಗಳ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ ಅತಿಹೆಚ್ಚು ಪದವೀಧರರನ್ನು ಪಕ್ಷಕ್ಕೆ ಕರೆತಂದು ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಪ್ರಧಾನ ಕಾರ್ಯದರ್ಶಿಗಳಾದ ಡಿ ಎನ್ ಮೈಲಾರಪ್ಪ, ಸಂಪತ್ ಕುಮಾರ್, ಲಕ್ಷ್ಮಿಕಾಂತ್, ಬೀದಿಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷರಾದ ಸಮೀವುಲ್ಲಾ, ಮೋಹನ್ ಪೂಜಾರಿ, ಪಿ ಬಸವರಾಜ್, ಗಂಗಾಧರ್, ಪ್ರಕಾಶ್ ಯಾದವ್, ವಸೀಮ್, ಆಜಮ್, ಮುರಳಿ, ಮಾಂತೇಶ್, ನಟರಾಜ್, ಮೋಯ್ದಿನ್ ಖಾನ್, ದಿನೇಶ್, ಇರ್ಫಾನ್ ಪಟೇಲ್, ಫ್ರಾನ್ಸಿಸ್ ಅರುಣ್ ಡಿಸೋಜ, ಅಕ್ಬರ್, ಗುರುಸ್ವಾಮಿ ಸೇರಿದಂತೆ ಇತರರು ಇದ್ದರು.