ಕೊಪ್ಪಳ ಜಿಲ್ಲೆಯ ಮರಕುಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ ಚಂದ್ರಶೇಖರವರಿಗೆ ಈ ರಾಜ್ಯದ ಕೆಳವರ್ಗದ ಜನ ಹೃತೂರ್ವಕ ಅಭಿನಂದನೆ ಹೇಳುತ್ತ ಈ ತೀರ್ಪುನ್ನು ಸ್ವಾಗತಿಸುತ್ತೇವೆ. ಇದರ ಜತೆಗೆ ರಾಜ್ಯದ ಎಲ್ಲ ಜಿಲ್ಲಾ ಸತ್ರ ನ್ಯಾಯಾಧೀಶರೂ ಕೂಡಾ ಈ ಪ್ರಕಾರ ತೀರ್ಪು ಕೊಟ್ಟಾಗ ಮಾತ್ರ ದೇಶದಲ್ಲಿ ದಲಿತರು ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗುತ್ತದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಮನವಿ ಮಾಡಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ(ಕ್ರಾಂತಿಕಾರಿ)ದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
“ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014 ಅಗಸ್ಟ್ 28ರಂದು ಒಂದು ಕ್ಷುಲ್ಲಕ ಕಾರಣಕ್ಕಾಗಿ ಮೇಲ್ವರ್ಗದವರು ದಲಿತ ಕೇರಿಗೆ ನುಗ್ಗಿ ಸಿಕ್ಕ ಸಿಕ್ಕ ದಲಿತರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೆ, ದಲಿತರ ಗುಡಿಸಲುಗಳಿಗೆ ಬೆಂಕಿಹಚ್ಚಿ ಅಟ್ಟಹಾಸ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಗಂಗಾವತಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಬಗ್ಗೆ ಆಟ್ರಾಸಿಟಿ ಮತ್ತು ಕೊಲೆಗೆ ಯತ್ನ ಮಾಡಿದ ಪ್ರಕರಣ ದಾಖಲಾಗಿತ್ತು” ಎಂದು ತಿಳಿಸಿದರು.
“ಕೊಪ್ಪಳ ಜಿಲ್ಲಾ ಸತ್ರನ್ಯಾಯಾಲಯದಲ್ಲಿ ಸುಮಾರು 10 ವರ್ಷಗಳಿಂದ ವಿಚಾರಣೆ ನಡೆಸಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಇದೇ ತಿಂಗಳು ಅಕ್ಟೋಬರ್ 21ರಂದು ತೀರ್ಪು ನೀಡಿದ್ದು, 98 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಇನ್ನುಳಿದ 3 ಮಂದಿಯನ್ನು 5 ವರ್ಷ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆದೇಶ ಮಾಡಿರುವುದು ಬಹುಶಃ ದೇಶದಲ್ಲಿಯೇ ಪ್ರಥಮ ಬಾರಿಗೆ ಇಂತಹ ತೀರ್ಪು ಕೊಟ್ಟಿರಬಹುದು. ಮಹಾತ್ಮ ಗೌತಮ ಬುದ್ಧ, ಅಣ್ಣ ಬಸವಣ್ಣ, ಸಾಮಾಜಿಕ ಕ್ರಾಂತಿಕಾರಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಾನತೆಯ ಕನಸು ಮತ್ತು ಮಾಜಿ ಪ್ರಧಾನಿ ವಿ ಪಿ ಸಿಂಗ್ ಅವರ ಕನಸನ್ನು ನನಸಾಗಿಸಿದ ನ್ಯಾಯಾಧೀಶ ಸಿ ಚಂದ್ರಶೇಖರ ಅವರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೆಲದ ಕಾನೂನನ್ನು ಅತ್ಯಂತ ಘನತೆ, ಗೌರವದಿಂದ ಪಾಲಿಸಿ: ನ್ಯಾಯಾಧೀಶೆ ಪ್ರಿಯಾಂಕಾ
“ಈ ದೇಶದಲ್ಲಿಯೇ ಪ್ರಥಮ ಬಾರಿಗೆ ಇಂತಹ ಕಠಿಣ ಶಿಕ್ಷೆ ವಿಧಿಸಿದ ಮಾನ್ಯರಿಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು” ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾನು ಗುರಿಕಾರ, ಮಾನಪ್ಪ ಕಟ್ಟಿಮನಿ, ಚಂದ್ರಶೇಖರ ಹಸನಾಪುರ, ಬಸವರಾಜ ಶೆಳ್ಳಗಿ, ಮಾನಪ್ಪ ಶೆಳ್ಳಗಿ, ರಾಮಣ್ಣ ಶೆಳ್ಳಗಿ, ಹಣಮಂತ ದೊರೆ ಬಿಜಾಸಪುರ, ಮಹೇಶ ಯಾದಗಿರಿ, ದೇವಿಂದ್ರಪ್ಪ ಬಾದ್ಯಾಪೂರ, ರೇವಣಸಿದ್ದ ಮಾಲಹತ್ತಿ, ನಿಂಗಪ್ಪ ಕಟಗಿ ಶಹಾಪೂರ, ಮೂರ್ತಿ ಬೊಮ್ಮನಹಳ್ಳಿ, ಮುಯಪ್ಪ, ವೀರಭದ್ರಪ್ಪ ತಳಾವರಗಲಿ, ಹಣಮಂತ ಬಾಂಬೆಕರ್ ಸೇರಿದಂತೆ ಇತರರು ಇದ್ದರು.