ದ್ವೀಪ ಸಮೂಹ ರಾಷ್ಟ್ರ ಫಿಲಿಪೀನ್ಸ್ ಪದೇ-ಪದೇ ಚಂಡಮಾರುತಗಳಿಗೆ ತುತ್ತಾಗುತ್ತಲೇ ಇದೆ. ಈ ವರ್ಷ ಬರೋಬ್ಬರಿ 11 ಬಾರಿ ಚಂಡಮಾರುತ ಅಪ್ಪಳಿಸಿದೆ. ಇತ್ತೀಚೆಗೆ, ಅಪ್ಪಳಿಸಿದ ಟ್ರಾಮಿ ಚಂಡಮಾರುತದಿಂದ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಟ್ರಾಮಿ ಚಂಡಮಾರುತವು ಫಿಲಿಪೀನ್ಸ್‌ನ ಅಪ್ಪಳಿಸಿದ 11ನೇ ಚಂಡಮಾರುತವಾಗಿದೆ. ಚಂಡಮಾರುತದಿಂದ ಎರಡು ದಿನಗಳ ಕಾಲ ಭಾರೀ ಮಳೆಯಾಗಿದೆ. ಪರಿಣಾಮ, ಪ್ರವಾಹ ಸಂಭವಿಸಿದ್ದು, ಹಲವು ಪ್ರಾಂತ್ಯಗಳು ಮುಳುಗಡೆಯಾಗಿವೆ. ಇನ್ನೂ ಹಲವು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.
ಚಂಡಮಾರುತದಿಂದ 50 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅವರಲ್ಲಿ,ಸುಮಾರು 20 ಲಕ್ಷ ಜನರು ಆಶ್ರಯ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅವರಿಗಾಗಿ, 6,300ಕ್ಕೂ ಹೆಚ್ಚು ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಫಿಲಿಪೀನ್ಸ್ ಸರ್ಕಾರ ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರದಿಂದ ಸೋಮವಾರದವರೆಗೆ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಕಾಣೆಯಾದವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
2013ರಲ್ಲಿ ಹೈಯಾನ್ ಚಂಡಮಾರುತವು ಫಿಲಿಪೀನ್ಸ್ ಮೇಲೆ ಅಪ್ಪಳಿಸಿತ್ತು. ಪರಿಣಾಮ, 7,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇತ್ತೀಚಿನ ದಶಕಗಳಲ್ಲಿ ಫಿಲಿಪೀನ್ಸ್ ಮೇಲೆ ಅಪ್ಪಳಿಸಿದ ಭೀರಕ ಚಂಡಮಾರುತ ಇದಾಗಿತ್ತು.