ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎಸ್ ಪುಟ್ಟಸ್ವಾಮಿ ಅವರು ಸೋಮವಾರ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.
ನ್ಯಾಯಮೂರ್ತಿ ಪುಟ್ಟಸ್ವಾಮಿ ಅವರು ‘ಆಧಾರ್’ ಯೋಜನೆಯನ್ನು ಸಂವಿಧಾನದ 21ನೇ ವಿಧಿಯಡಿ ಪ್ರಶ್ನಿಸಿದ ಮೊದಲಿಗರು ಎಂದೇ ಪ್ರಸಿದ್ಧರು. ಆಧಾರ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ 2012ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಪೀಠ ತೀರ್ಪು ನೀಡಿತ್ತು. ಆದರೆ ಆಧಾರ್ ಯೋಜನೆಯನ್ನು ಅದು ಎತ್ತಿ ಹಿಡಿಯಿತು.
ವಕೀಲರಾಗಿ 1952 ರಲ್ಲಿ ನೋಂದಾಯಿಸಿಕೊಂಡ ಅವರು ನವೆಂಬರ್ 1977ರಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹೈಕೋರ್ಟ್‌ನಲ್ಲಿ 1986ರವರೆಗೆ ಸೇವೆ ಸಲ್ಲಿಸಿದ ಅವರು ನಿವೃತ್ತಿ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಪೀಠದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.
