ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಆಯಾ ರಾಜ್ಯಗಳಿಗೆ ಆದೇಶ ನೀಡಿದ್ದರೂ ಕೂಡ ಇಲ್ಲಿಯವರೆಗೂ ಪರಿಶಿಷ್ಟರ ಮೀಸಲು ವರ್ಗೀಕರಣದ ಬಗ್ಗೆ ಆಸಕ್ತಿ ತೋರದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಇಲ್ಲವೇ ಕುರ್ಚಿ ಖಾಲಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ ಒತ್ತಾಯಿಸಿದರು.
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಒಳ ಮೀಸಲಾತಿಗೆ ಆಗ್ರಹಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆಯಲಿರುವ ಬೃಹತ್ ತಮಟೆ ಚಳುವಳಿಗೆ ತೆರಳಲು ಗುಬ್ಬಿ ಬಸ್ ನಿಲ್ದಾಣದ ಬಳಿ ಜಮಾಯಿಸಿ ತಮಟೆ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಿದ್ರಾ ಸ್ಥಿತಿಯಲ್ಲಿರುವ ಸರ್ಕಾರಕ್ಕೆ ತಮಟೆ ಚಳವಳಿ ನಡೆಸುವ ಮೂಲಕ ಎಚ್ಚರಿಸುವ ಕೆಲಸಕ್ಕೆ ಮುಂದಾಗಿದ್ದು ಎಚ್ಚರಗೊಂಡು ಈ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಜಿ.ಎಚ್.ಜಗನ್ನಾಥ್ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಕಳೆದ ಮೂರು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣ ಕುರಿತು ಪರಿಶಿಷ್ಟರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆದೇಶಿಸಿದ್ದರೂ ಕೂಡ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರದ ವಿರುದ್ಧ ಇಂದು ಜಿಲ್ಲಾದ್ಯಂತ ತಮಟೆ ಚಳವಳಿ ನಡೆಸುವ ಮೂಲಕ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಕಡಬ ಶಂಕರ್ ಮಾತನಾಡಿ ತುಳಿತಕ್ಕೆ ಒಳಗಾದ ಸಮುದಾಯದಲ್ಲಿ ತೀರಾ ನಿಕೃಷ್ಟ ಬದುಕು ಕಂಡ ಮಾದಿಗ ಸಮಾಜ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಲ್ಲಿದ್ದಾರೆ. ಈ ಒಳಮೀಸಲಾತಿ ಜಾರಿಯಾದಲ್ಲಿ ಮುಖ್ಯವಾಹಿನಿಗೆ ಬರಲು ಅನುವು ಆಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಂತೆ ತಳಮಟ್ಟದ ನಮ್ಮ ಸಮುದಾಯ ಸ್ವಾಭಿಮಾನಿ ಜೀವನಕ್ಕೆ ಈ ಮೀಸಲಾತಿ ಜಾರಿಯಾಗಬೇಕು. ಕೂಡಲೇ ರಾಜ್ಯ ಸರ್ಕಾರ ನ್ಯಾಯಾಲಯ ಆದೇಶದಂತೆ ಯಥಾವತ್ತಾಗಿ ಜಾರಿ ಮಾಡಿ ದಲಿತರ ಬದುಕಿಗೆ ಅರ್ಥ ನೀಡಿ ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಈಶ್ವರಯ್ಯ, ದೇವರಾಜು, ಕಲ್ಲೇಶ್, ನಟರಾಜು,ರವಿಕುಮಾರ್, ಯೋಗೀಶ್, ಮಲ್ಲಿಕಾರ್ಜುನಯ್ಯ, ರಂಗಸ್ವಾಮಿ, ರಾಮಚಂದ್ರ, ಸೋಮಶೇಖರ್, ರವಿಕುಮಾರ್ ಕಲ್ಲೂರ್, ಯೋಗೀಶ್, ಸಂತೋಷ್, ಭರತ್ ಹಾಗೂ ಹಾಗೂ ಇನ್ನಿತರರು ಭಾಗವಹಿಸಿದ್ದರು.