ಪಟ್ಟಭದ್ರ ಹಿತಾಸಕ್ತಿಗಳು, ಜೀವ ವಿರೋಧಿ, ಜನಾಂಗ ವಿರೋಧಿಗಳು ʼವಚನ ದರ್ಶನʼ ಎಂಬ ಕೊಳಕು ಪುಸ್ತಕ ಪ್ರಕಟಿಸಿ ನಾಡಿನ ಸೌಹಾರ್ದತೆ ಕೆಡಿಸುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ವಚನ ಸಾಹಿತ್ಯ ರಕ್ಷಣೆಗೆ ರಾಜ್ಯಾದಾದ್ಯಂತ ಜನಾಂದೋಲನ ರೂಪಿಸಬೇಕಾಗಿದೆ ಎಂದು ವಿಜಯಪುರದ ಸಾಹಿತಿ ಡಾ.ಜೆ.ಎಸ್.ಪಾಟೀಲ ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದ ಡಾ. ಎಸ್.ಎಸ್.ಸಿದ್ದಾರೆಡ್ಡಿ ವೇದಿಕೆಯಲ್ಲಿ ಆಯೋಜಿಸಿದ ರಾಜ್ಯ ಮಟ್ಟದ 5ನೇ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ʼವಚನ ಸಾಹಿತ್ಯ ನಿರ್ಮಾಣ ಹಂತದಲ್ಲೇ ಅದನ್ನು ನಾಶಪಡಿಸಲು ಸಂಪ್ರದಾಯವಾದಿಗಳು ಯತ್ನಿಸಿದರು. ಶರಣ ಕ್ರಾಂತಿಗೆ ಪ್ರತಿಕ್ರಾಂತಿ ರೂಪಿಸಿ ವಚನ ಸಾಹಿತ್ಯಕ್ಕೆ ಬೆಂಕಿ ಹಚ್ಚಲು ಹುನ್ನಾರ ನಡೆಸಿದರು. ಶರಣರ ಮೂಲ ಆಶಯಗಳನ್ನು ತಿರುಚುವ ಶಕ್ತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ವಚನ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ಕಾರ್ಯ ಮಾಡಬೇಕುʼ ಎಂದು ಆಗ್ರಹಿಸಿದರು.
ʼಸಾಹಿತ್ಯೇತರ ಉದ್ದೇಶದಿಂದ ಹುಟ್ಟಿಕೊಂಡಿದ್ದು ವಚನ ಸಾಹಿತ್ಯ. ವಚನ ದ್ವೇಷಿ, ಬಸವ ದ್ವೇಷಿಗಳಿಗೆ ಉತ್ತರ ಕೊಡಬೇಕಾದರೆ ವರ್ಗ, ವರ್ಣ ರಹಿತ ಸಮಾಜ ಸ್ಥಾಪನೆ, ಆರ್ಥಿಕ, ಲಿಂಗ ಹಾಗೂ ಧಾರ್ಮಿಕ ಸಮಾನತೆ ಆಶಯವನ್ನು ಜನಮಾನಸಕ್ಕೆ ಮುಟ್ಟಿಸಲು ನಿರಂತರವಾಗಿ ಬಸವ ಪ್ರಜ್ಞೆ ಕಾರ್ಯಕ್ರಮಗಳು ನಡೆಯಬೇಕು. ಈ ಮೂಲಕ ವಚನ ದರ್ಶನ ದ್ರೋಹಿಗಳಿಗೆ ತಕ್ಕ ಉತ್ತರ ಕೊಡಬೇಕಾಗಿದೆʼ ಸಲಹೆ ನೀಡಿದರು.
ʼ1420ರಲ್ಲಿ ವಿಜಯನಗರ ಕಾಲದಲ್ಲಿ ಸಾಮ್ರಾಜ್ಯದ ಪ್ರೌಢದೇವರಾಯ, ಮಲ್ಲಿಕಾರ್ಜುನರಾಯ ಮತ್ತು ವಿರೂಪಾಕ್ಷರಾಯ ಎಂಬ ಮೊದಲ ಮೂವರು ಅರಸರು ಬಸವ ಪ್ರಜ್ಞಾಧಾರೆಗೆ ಸೇರಿದ್ದ ಕಾರಣಕ್ಕೆ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಪುನರುತ್ಥಾನದ ಕಾಲಘಟ್ಟವಾಗಿತ್ತು. ಲಕ್ಕಣ ದಂಡೇಶ, ಚಾಮರಸ ಸೇರಿದಂತೆ ಧೀಮಂತ ವಿದ್ವಾಂಸರನ್ನು ಹುಟ್ಟು ಹಾಕಿದ ಪ್ರೌಢದೇವರಾಯ ಆಗ ಲಭ್ಯವಾಗಿದ್ದ ಏಳೆಂಟು ನೂರು ವಚನಗಳ ಮೂಲಕ ವಚನ ಸಾಹಿತ್ಯದ ಮೂಲಕ ವಚನ ಸಾಹಿತ್ಯ ಪುನರುತ್ಥಾನಗೊಳಿಸಿದನು. ಆದರೆ, ಪಟ್ಟಭದ್ರ ಹಿತಾಶಕ್ತಿಗಳು ಪ್ರೌಢದೇವರಾಯನ ಆಸ್ಥಾನದೊಳಗೆ ನುಸುಳಿ ವಚನಗಳನ್ನು ಪ್ರಕ್ಷುಪ್ತಗೊಳಿಸಲು ಹುನ್ನಾರ ನಡೆಸಿದರು. ಪೂರ್ವದಲ್ಲಿ ಇಲ್ಲದಿದ್ದರೂ 47 ವಚನಗಳಲ್ಲಿ ವೀರಶೈವ ಎಂಬ ಪದ ಸೇರ್ಪಡೆಯಾಗಿದೆ. ಸಂಸ್ಕೃತ ಸಾಲು ಸಹ ಸೇರಿವೆ. ವಚನಗಳ ಶುದ್ಧಿಕರಣ ನಡೆಸುವ ಕಾರ್ಯ ತುರ್ತಾಗಿ ಆಗಬೇಕಿದೆʼ ಎಂದರು.

ʼ1920ರಿಂದ 30ರವರೆಗೆ ಫ.ಗು.ಹಳಕಟ್ಟಿ ಅವರು ತಮ್ಮ ವೈಯಕ್ತಿಕ ಬದುಕು ಮೀಸಲಿಟ್ಟು ಇಡೀ ವಚನ ಸಾಹಿತ್ಯವನ್ನು ಪುನರುತ್ಥಾನಗೊಳಿಸಿದರು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ವಚನ ಸಾಹಿತ್ಯ ದ್ವೇಷಿಸಿ ಅದನ್ನು ವ್ಯಾಖ್ಯಾನ ನಡೆಸುತ್ತಾರೆ. 1930ರಿಂದ ಇಡೀ ವಚನ ಸಾಹಿತ್ಯ ಉಪನಿಷತ್ತುಗಳ ಮುಂದುವರಿದ ಭಾಗ ಎಂಬ ಅಪಸ್ವರ ಆರಂಭಗೊಂಡಿತ್ತು. 2015ರಲ್ಲಿ ಶಿವಮೊಗ್ಗ ವಿಶ್ವವಿದ್ಯಾಲಯದಲ್ಲಿ ಪಟ್ಟಭದ್ರ ಹಿತಾಶಕ್ತಿಗಳು ಕಾರ್ಯಕ್ರಮ ರೂಪಿಸಿ ವಚನ ಸಾಹಿತ್ಯ ಸನಾತನ ಸಂಸ್ಕೃತಿಯ ಮುಂದುವರೆದ ಭಾಗ ಎಂದು ಮತ್ತೆ ಅಪ್ರಪಚಾರ ನಡೆಸಲು ಯತ್ನಿಸಿದರುʼ ಎಂದು ಮಾಹಿತಿ ನೀಡಿದರು.
ʼ2017 ರಿಂದ ನಾಡಿನಲ್ಲಿ ಬಸವಪ್ರಜ್ಞೆ ಜಾಗೃತವಾಗಿ ವೇಗವಾಗಿ ಪಸರಿಸಲು ಆರಂಭಗೊಂಡಿತ್ತು. ಇದೀಗ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನ್ನಾಗಿ ಘೋಷಿಸಿದ ಬಳಿಕ ಸಂಪ್ರದಾಯವಾದಿಗಳು ಮತ್ತೆ ವಚನಗಳ ಮೇಲೆ ವಕ್ರದೃಷ್ಟಿ ಬಿದ್ದಿದೆ. ಅದರ ಮುಂದುವರಿದ ಭಾಗವಾಗಿಯೇ ವಚನ ದರ್ಶನ ಎಂಬ ಕೃತಿ ಹೊರತಂದು ವಚನ ಸಾಹಿತ್ಯದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಬೇಕಾಗಿದೆʼ ಎಂದು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ʼಆತ್ಮಕಲ್ಯಾಣ ಜೊತೆಗೆ ಲೋಕ ಕಲ್ಯಾಣ ಬಯಸಿದ್ದು ವಚನ ಸಾಹಿತ್ಯವಾಗಿದೆ. ಬಸವಾದಿ ಶರಣರು ತಮ್ಮ ನಡೆ-ನುಡಿ ಮುಖಾಂತರ ಜಗತ್ತಿಗೆ ಬೆಳಕು ನೀಡಿದರು. ವಚನಗಳು ಜಗತ್ತಿನ ಜನರಿಗೆ ನೀಡಿದ ಜೀವನ ಸಂವಿಧಾನ. ಆಡಳಿತಾತ್ಮಕವಾದ ಸಂವಿಧಾನ ತಿದ್ದುಪಡಿ ಮಾಡಬಹುದು. ಆದರೆ, ಶರಣರ ಜೀವಪರ ಸಂವಿಧಾನ ತಿದ್ದಲು ಸಾಧ್ಯವಿಲ್ಲʼ ಎಂದರು.
ʼಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹದ ಮೂಲಕ ಗುಣಾತ್ಮಕ ಬದುಕು ಕಟ್ಟಿಕೊಳ್ಳಬೇಕೆಂದು ವಚನ ಸಾಹಿತ್ಯ ತಿಳಿಸಿದೆ. ಜನ ಬದುಕಲಿ, ಜಗ ಬದುಕಲಿ ಎಂಬ ಸತ್ಯ ಸಂಕಲ್ಪದಿಂದ ವಚನಗಳು ರಚನೆಯಾಗಿವೆ. ಶರಣರು ನೈತಿಕ ಧಾರ್ಮಿಕ, ಆಧ್ಯಾತ್ಮಿಕತೆ ಜೊತೆಗೆ ಆರ್ಥಿಕ ಸಮಾನತೆ ನೀಡಿದರು. ಶರಣರು ನೀಡಿದ ಸೂತ್ರಗಳು ಇಂದಿನ ರಾಜಕಾರಣಿಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಸರ್ವರಿಗೂ ಸಮಬಾಳು ಸಮಪಾಲು ನೀತಿ ಜಾರಿಗೆ ಬರುತ್ತದೆʼ ಎಂದು ಹೇಳಿದರು.
ʼಜಗತ್ತಿನ ಎಲ್ಲಾ ತಲ್ಲಣಗಳಿಗೆ ವಚನ ಸಾಹಿತ್ಯ ಔಷಧಿಯಾಗಿದೆ. ದೇವರಿಗೂ ಮತ್ತು ಮನುಷ್ಯರಿಗೂ ನೇರಸಂಪರ್ಕ ಕಲ್ಪಿಸಿದ ಶರಣರು ಇಷ್ಟಲಿಂಗವನ್ನು ಪೂಜಿಸಲು ಆಧ್ಯಾತ್ಮಿಕ ಸ್ವಾತಂತ್ರ್ಯ ನೀಡಿದ್ದಾರೆ. ಬಸವಣ್ಣ ಕರ್ನಾಟಕಕ್ಕೆ ಅಷ್ಟೇ ಅಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಶರಣರ ವಚನಗಳು ಬದುಕಿಗೆ ದಾರಿದೀಪವಾಗಿವೆʼ ಎಂದರು.

ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ತ್ಯಾಗರಾಜ ಮಾತನಾಡಿ, ʼನಿರ್ಲಕ್ಷಿತ ವಚನಗಳನ್ನು ಬೆಳಕಿಗೆ ತರುವುದೇ ಪರಿಷತ್ತಿನ ಮೂಲ ಧ್ಯೇಯವಾಗಿದೆ. ವಚನಗಳು ಸಾಹಿತ್ಯ ಕೆಲವರಿಂದ ರಚನೆಯಾದವುಗಳಲ್ಲ. ಅದೊಂದು ಆಕಾಶವಿದ್ದಂತೆ. ಶರಣರು ನಡೆ-ನುಡಿ ಒಂದಾಗಿಸಿಕೊಂಡು ವಚನಗಳನ್ನು ರಚಿಸಿದ್ದಾರೆ. ನಾನು ಆಧುನಿಕ ವಚನಗಳ ವಿರೋಧಿಯಲ್ಲ. ಆದರೆ, ನಮಗೆ ಆಧುನಿಕ ವಚನಗಳು ಬೇಡ. ಏಕೆಂದರೆ ಅವುಗಳಲ್ಲಿ ನಡೆ-ನುಡಿ ಒಂದಾಗಿರುವುದಿಲ್ಲ. ವಚನಗಳು ಶಾಲಾ ಮಕ್ಕಳಿಗೆ ತಲುಪಿಸುವ ಅವಶ್ಯಕತೆವಿದೆ. ಮಕ್ಕಳಿಗೆ ವಚನ ಓದಿಸಿದರೆ ಅವು ಅವರ ಹೃದಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆʼ ಎಂದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ಎಸ್.ದಾಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು. ಹುಲಸೂರಿನ ಶಿವಾನಂದ ಸ್ವಾಮೀಜಿ, ಸಿದ್ಧರಾಮ ಬೆಲ್ದಾಳ ಶರಣರು, ಡಾ.ಗುರಮ್ಮಾ ಸಿದ್ದಾರೆಡ್ಡಿ, ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ, ಚನ್ನಬಸವ ಬಳತೆ, ಬಾಬು ವಾಲಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಗುರುನಾಥ ಕೊಳ್ಳೂರ, ಬಿ.ಜಿ.ಶೆಟಕಾರ, ಶ್ರೀಕಾಂತ ಸ್ವಾಮಿ, ಪ್ರಕಾಶ ಅಂಗಡಿ, ರವಿ ನಾಕಲಗೂಡು, ಬಾಗಲಕೋಟೆಯ ಶ್ರೀಶೈಲ ಕರಿಶಂಕರ, ಚಿಕ್ಕಬಳ್ಳಾಪುರದ ಕೆ.ಪಿ.ನವಮೋಹನ, ಗದಗದ ಮಹಾಂತೇಶ ಗಜೇಂದ್ರಗಡ, ಆರ್.ಬಿ.ವೆಂಕಟೇಶ ಉಪಸ್ಥಿತರಿದ್ದರು.
ಭಾನುಪ್ರಿಯಾ ಅರಳಿ ತಂಡದವರು ನಾಡಗೀತೆ ನಡೆಸಿಕೊಟ್ಟರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ವಚನ ನೃತ್ಯ ಜರುಗಿತು. ಪುಟ್ಟರಾಜ ಶರಣಯ್ಯ ಸ್ವಾಮಿ ವಚನ ಗಾಯನ ನಡೆಸಿಕೊಟ್ಟರು. ದೀಪಕ ಥಮಕೆ ಮತ್ತು ಶ್ರೀದೇವಿ ಪಾಟೀಲ ನಿರೂಪಿಸಿದರು. ಶೈಲಜಾ ಚಳಕಾಪುರೆ ವಂದಿಸಿದರು. ಡಾ. ರಘುಶಂಖ ಭಾತಂಬ್ರಾ ಸ್ವಾಗತಿಸಿದರು.
ಗಮನ ಸೆಳೆದ ವಚನ ಸಾಹಿತ್ಯ ಮೆರವಣಿಗೆ :
ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಿಂದ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸಿ.ಸೋಮಶೇಖರ ಅವರ ಮೆರವಣಿಗೆ ಜರುಗಿತು. ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮುಖಾಂತರ ರಂಗಮಂದಿರ ತಲುಪಿತು.
ಮೆರವಣಿಗೆಗೆ ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೈಜಿನಾಥ ಕಮಠಾಣೆ ಚಾಲನೆ ನೀಡಿದರು. ನಾಡಧ್ವಜವನ್ನು ಖ್ಯಾತ ವೈದ್ಯ ಡಾ. ವಿಜಯಶ್ರೀ ಬಶೆಟ್ಟಿ ನೆರವೇರಿಸಿದರು, ಬಸವ ಬಾಂಧವ್ಯ ಬಳಗದ ಅಧ್ಯಕ್ಷ ಬಾಬುರಾವ ದಾನಿ ಷಟಸ್ಥಲ ಧ್ವಜರೋಹಣ ನೆರವೇರಿಸಿದರು. ಮೆರವಣಿಗೆಯ ನೇತೃತ್ವವನ್ನು ರಾಜೇಂದ್ರಕುಮಾರ ಮಣಗೀರೆ ವಹಿಸಿದ್ದರು.

ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಎಸ್.ಬಿ.ಸಜ್ಜನಶೆಟ್ಟಿ, ಪ್ರತಿಭಾ ಚಾಮಾ, ಜಯದೇವಿ ಯದಲಾಪುರೆ, ಸೋಮಶೇಖರ ಪಾಟೀಲ ಗಾದಗಿ, ಸೇರಿದಂತೆ ವಿವಿಧ ಸಮಾಜದ ಮುಖಂಡರು ಹಾಗೂ ಯುವಕರು, ಮಹಿಳೆಯರು ಭಾಗವಹಿಸಿದ್ದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ :
ಚಿಕ್ಕಬಳ್ಳಾಪುರದ ಗ.ನ. ಅಶ್ವಥ ಅವರನ್ನು ಜಾನಪದ ಕ್ಷೇತ್ರದ ಸೇವೆಗಾಗಿ ಹಾಗೂ ಚ.ಭೀ. ಸೋಮಶೆಟ್ಟಿ ಬೀದರ ಅವರನ್ನು ʼಬಸವಶ್ರೀʼ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿರಿಜಾ ಚಂದ್ರಶೇಖರ ಇಳಕಲ್, ಮಹಾದೇವಮ್ಮ ತಾಯಿ ಅವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಾಂತ ಸ್ವಾಮಿಗಳ ಪ್ರಶಸ್ತಿಯನ್ನು ಡಾ. ಅಮರನಾಥ ಸೋಲಪುರ ಅವರಿಗೆ ನೀಡಲಾಯಿತು. ವಿವಿಧ ಕ್ಷೇತ್ರದ 20 ಜನ ಸಾಧಕರಿಗೆ ಶರಣ ಬಂಧು ಪ್ರಶಸ್ತಿ ನೀಡಿ ಗೌರವಿಸಲಾಯಿತು.
Vachana Darshana is a very good thought provoking book. Every one should read and understand it