ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಮತ್ತು ರಾಮನಗರ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಚನ್ನಪಟ್ಟಣ ಕ್ಷೇತ್ರದ ನೀಲಕಂಠನಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, “ಅವಳಿ ಪಟ್ಟಣಗಳನ್ನು ಅವಳಿ ನಗರಗಳನ್ನಾಗಿ ಪರಿವರ್ತಿಸಲಾಗುವುದು. ಇದರಿಂದ ಈ ಭಾಗದ ಆರ್ಥಿಕತೆಗೆ ಶಕ್ತಿ ಬರುವುದರ ಜತೆಗೆ ಜನಜೀವನ ಮಟ್ಟವೂ ಸುಧಾರಿಸುತ್ತದೆ. ಅಭಿವೃದ್ಧಿ ಮಾಡುವುದು ಎಂದರೆ ಯಾವುದೇ ದುರುದ್ದೇಶಕ್ಕೆ ಬೆಂಗಳೂರಿಗೆ ಸೇರುವುದಲ್ಲ. ಆಯಾ ಪ್ರದೇಶಗಳನ್ನು ಆಯಾ ಬೌಗೋಳಿಕ ವ್ಯಾಪ್ತಿಯಲ್ಲಿಯೇ ವಿಸ್ತೃತವಾಗಿ ಅಭಿವೃದ್ಧಿ ಮಾಡುವುದು” ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಕುಟುಕಿದರು.
ಕಮೀಶನ್ ದುರಾಸೆಗೆ ಯುಜಿಡಿ ಯೋಜನೆ ನೆನೆಗುದಿಗೆ
“ಚನ್ನಪಟ್ಟಣ ಕ್ಷೇತ್ರದಲ್ಲಿ ಒಳಚರಂಡಿ ವ್ಯವಸ್ಥೆ ಆಗಿಲ್ಲ. ನಾನು ಸಿಎಂ ಆಗಿದ್ದಾಗ ಯೋಜನೆಗೆ ಒಪ್ಪಿಗೆ ನೀಡಿದ್ದೆ. ₹97 ಕೋಟಿ ಹಣ ಬಿಡುಗಡೆಯಾಗಿ ಮೂರು ವರ್ಷವಾಗಿದೆ. ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದರೆ ಕೆಲಸ ಆಗುತ್ತಿದೆ. ಅದನ್ನು ಮಾಡುವುದು ಬಿಟ್ಟು ಗುತ್ತಿಗೆದಾರರಿಗೆ ‘ಮನೆ ಹತ್ತಿರ ಬಂದು ನೋಡಿ’ ಎಂದು ತಾಕೀತು ಮಾಡುತ್ತಿದ್ದಾರೆ. ಅವರ ಕಮೀಶನ್ ದುರಾಸೆಗೆ ಯುಜಿಡಿ ಯೋಜನೆ ನೆನೆಗುದಿಗೆ ಬಿದ್ದಿದೆ” ಎಂದು ಕುಮಾರಸ್ವಾಮಿ ದೂರಿದರು.
ಗಾರ್ಮೆಂಟ್ಸ್ ಕಾರ್ಖಾನೆಗೆ ಸ್ಥಾಪನೆ
“ನೀಲಕಂಠನಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕಾರ್ಖಾನೆ ಬೇಕೆಂದು ಕೇಳಿದ್ದಾರೆ. ಅವರ ಮನವಿ ನಾನು ಸ್ಪಂದಿಸುತ್ತೇನೆ. ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ ಕೊಡಿಸಿ, ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಪ್ರಯತ್ನ ಮಾಡುತ್ತೇನೆ” ಎಂದರು.
ದಲಿತರನ್ನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಎತ್ತಿಕಟ್ಟುವ ಹೀನ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಎರಡು ಸಾಲ ಸೋಲಿಸಿ ಅವರನ್ನು ರಾಜಕೀಯವಾಗಿ ನಿರ್ನಾಮ ಮಾಡಿದ್ದು ಕಾಂಗ್ರೆಸ್. ಆದರೆ, ಮೋದಿ ಅವರು ಅಂಬೇಡ್ಕರ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಸಂವಿಧಾನ ಅಂಗೀಕರಿಸಲಾದ ನವೆಂಬರ್ 26ನೇ ತಾರೀಖನ್ನು ಶಾಶ್ವತವಾಗಿ ಸಂವಿಧಾನ ದಿನವನ್ನಾಗಿ ಆಚರಿಸಲು ಅವರು ನಿರ್ಧಾರ ಮಾಡಿದ್ದಾರೆ” ಎಂದು ಹೇಳಿದರು.
ಮೈಸೂರು ಕೊಡಗು ಸಂಸದ ಯದುವೀರ್ ಕೃಷದತ್ತ ಒಡೆಯರ್, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕರಾದ ಡಾ.ಅನ್ನದಾನಿ, ಚೌಡರೆಡ್ಡಿ ತೂಪಲ್ಲಿ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.