ಆಯಾ ರಾಜ್ಯಗಳ ಪ್ರಕಾರ ಸುಪ್ರೀಂ ಕೋರ್ಟ್ ಒಳಮೀಸಲಾತಿ ಆದೇಶ ನೀಡಿ ಮೂರು ತಿಂಗಳಾಗಿದ್ದು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಈ ಹಿಂದೆ ಚುನಾವಣೆಯಲ್ಲಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾತಿಗೆ ತಪ್ಪಿದ್ದಾರೆ, ಆದೇಶವನ್ನು ಪಾಲಿಸುವ ಮೂಲಕ ಒಳ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಕಾಂತರಾಜ ಆಯೋಗದ ವರದಿ 15 ದಿನಗಳ ಒಳಗಾಗಿ ಜಾರಿಗೊಳಿಸದಿದ್ದರೆ ನ.12ರಂದು ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ, ಸಂಸದರು, ಶಾಸಕರಗಳಿಗೆ ಘೇರಾವ್ ಹಾಕಲಾಗುತ್ತದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವವರು ಸ್ವಾಗತಿಸಿದ್ದಾರೆ. ರಾಜ್ಯದಲ್ಲಿ ಸದಾಶಿವ ಆಯೋಗ ಮತ್ತು ಕಾಂತರಾಜ ಆಯೋಗ ಎಲ್ಲಾ ಜಾತಿಗಳ ವೈಜ್ಞಾನಿಕ ದತ್ತಾಂಶ ನೀಡಿದೆ. ಇದರ ಆಧಾರದಲ್ಲೇ ಸಿಎಂ ಸಿದ್ದರಾಮಯ್ಯ ಒತ್ತಡಕ್ಕೆ ಮಣಿಯದೇ ಜಾರಿಗೊಳಿಸಬೇಕು ಎಂದರು.
ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಎಲ್ಲಾ ಸರ್ಕಾರಗಳು ಆಶ್ವಾಸನೆ ನೀಡುತ್ತಾ ಬಂದಿದೆ. ಕಳೆದ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ಜಾರಿಗೆ ಭರವಸೆ ನೀಡಿದ್ದು ಇದೀಗ ಮಾತಿಗೆ ತಪ್ಪುತ್ತಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನ ಬದ್ಧವಾಗಿರುವ ಮೀಸಲಾತಿ ನಮ್ಮ ಹಕ್ಕಾಗಿದ್ದು, ಒಳ ಮೀಸಲಾತಿ ಜಾರಿಗೊಳಿಸಿ ಇಲ್ಲ, ರಾಜೀನಾಮೆ ನೀಡಿ ಎಂದ ಅವರು, ವೀರಶೈವ ಲಿಂಗಾಯತ ಸಮುದಾಯ ಕಾಂತರಾಜ ವರದಿ ಜಾರಿ ಮಾಡಬಾರದು ಎಂದು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ. ರಾಜಕೀಯ ಪ್ರಾಬಲ್ಯ ಹೊಂದಬೇಕು ಎನ್ನುವ ದೃಷ್ಟಿಯಿಂದ ಕಾಂತರಾಜ ವರದಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನು ಓದಿದ್ದೀರಾ? ರಾಯಚೂರು | ಒಳಮೀಸಲಾತಿ ಜಾರಿಗೆ ಮತ್ತೊಂದು ಸಮಿತಿ ರಚನೆ ತರಾತುರಿಯ ತೀರ್ಮಾನ : ಎಸ್ ಮಾರೆಪ್ಪ
ಒಳಮೀಸಲಾತಿ ಜಾರಿಗೆ ಮತ್ತು ಕಾಂತರಾಜ ಆಯೋಗದ ವರಧಿ ಜಾರಿಗೊಳಿಸಬೇಕು. 15 ದಿನಗಳ ಒಳಗಾಗಿ ನಿರ್ಣಯ ಕೈಗೊಳ್ಳದಿದ್ದರೆ ಜಿಲ್ಲಾ ಉಸ್ತುವಾರಿ, ಸಂಸದರು, ಶಾಸಕರುಗಳಿಗೆ ನ.12 ರಂದು ಘೇರಾವ್ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಮುನಿಯಪ್ಪ, ಕೆವಿ ವಾಸು, ಪ್ರಭು ದಳಪತಿ, ವೈ.ನರಸಪ್ಪ, ಆದನಗೌಡ ಪಾಟೀಲ್, ಹಾಜಿಸಾಬ್, ಹಿರೇಬೂದುರು, ವೆಂಕನಗೌಡ ನಾಯಕ ವಕೀಲ ಸೇರಿದಂತೆ ಅನೇಕರು ಇದ್ದರು.
