ಪರಿಶಿಷ್ಟ ಜಾತಿ-ಪಂಗಡಗಳಿಗೆ ರಾಜ್ಯದಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಆ 101 ಜಾತಿಗಳಲ್ಲಿ 50ಕ್ಕೂ ಹೆಚ್ಚು ಜಾತಿಗಳ ಜನಸಂಖ್ಯೆ ಕಡಿಮೆ ಇರುವ ಕಾರಣ ಮೀಸಲಾತಿ ಮುಟ್ಟೇ ಇಲ್ಲ. ಈಗಲಾದರೂ, ಮೀಸಲಾತಿಯ ಲಾಭ ಪಡೆದವರು ಉದಾರಿಗಳಾಗಿ ವರ್ತಿಸಬೇಕಿದೆ. ಮೂವತ್ತು ವರ್ಷಗಳ ಹೋರಾಟದಿಂದ ನೊಂದು ಬೆಂದು ಬರಡಾಗಿರುವವರನ್ನು ಇನ್ನಷ್ಟು ನೋಯಿಸದೆ, ಕಾಯಿಸದೆ ಸರ್ಕಾರ ಆದಷ್ಟು ಬೇಗ ಜಾರಿಗೆ ತರಬೇಕಿದೆ.
ಒಳ ಮೀಸಲಾತಿ ಅನುಷ್ಠಾನಗೊಳಿಸುವ ಬಗ್ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ಮಾಡುವ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲು ಹಾಗೂ ಸಂಪುಟ ಉಪ ಸಮಿತಿ ರಚಿಸಿ ಅದರ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯ ಸರ್ಕಾರದ ಈ ತೀರ್ಮಾನ ಸ್ವಾಗತಾರ್ಹ. 2023ರ ವಿಧಾನಸಭೆ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ನಡೆದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಾವೇಶದಲ್ಲಿ ಏನು ನಿರ್ಣಯ ಕೈಗೊಳ್ಳಲಾಗಿತ್ತು, ಆ ನಿರ್ಣಯದಂತೆ ಸಚಿವ ಸಂಪುಟ ತೀರ್ಮಾನ ಮಾಡಿದೆ. ಅಂದರೆ, ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿಕೊಳ್ಳಲಿಕ್ಕೆ ಒಂದು ಕಾರಣವೂ ಸಿಕ್ಕಂತಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಮೂಲಕ ಅಸ್ಪೃಶ್ಯ ಜಾತಿಗಳಿಗೆ ಸೇರಿದವರಿಗೆ ನ್ಯಾಯ ಒದಗಿಸಬೇಕೆಂಬುದು ಮೂರು ದಶಕಗಳ ನಿರಂತರ ಹೋರಾಟ. ಒಳಮೀಸಲಾತಿ ಆಗ್ರಹಕ್ಕೆ ಬಹುಮುಖ್ಯ ಕಾರಣ, ದಲಿತರೊಳಗಿನ 101 ಜಾತಿಗಳಿಗೆ ಮೀಸಲಾತಿಯು ಅಸಮಾನವಾಗಿ ಹಂಚಿಕೆ ಆಗುತ್ತಿರುವುದು. ಈ ಅಸಮಾನ ಹಂಚಿಕೆಗೆ ತಡವಾದರೂ ನ್ಯಾಯ ದೊರಕುವ ಕಾಲ ಸನ್ನಿಹಿತವಾಗಿದೆ. ಇದು ನಿಜಕ್ಕೂ ಹೋರಾಟಕ್ಕೆ ಸಂದ ಜಯ.
ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಒಳಮೀಸಲಾತಿ ಬಗೆಗಿನ ದಲಿತ ಸಮುದಾಯಗಳ ಹೋರಾಟ ಮತ್ತು ಬೇಡಿಕೆ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಆಯೋಗ ರಚಿಸುವ ಪ್ರಸ್ತಾವ ಸರ್ಕಾರದ ಮುಂದಿತ್ತು, ಮಾಡಿರಲಿಲ್ಲ. ಬಳಿಕ ಅಸ್ತಿತ್ವಕ್ಕೆ ಬಂದ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, 2005ರಲ್ಲಿ ಅಧ್ಯಯನ ನಡೆಸಿ ಶಿಫಾರಸು ಮಾಡಲು ನ್ಯಾ. ಎ.ಜೆ. ಸದಾಶಿವ ನೇತೃತ್ವದಲ್ಲಿ ಆಯೋಗ ರಚಿಸಲಾಗಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ. 15ರ ಮೀಸಲಾತಿಯನ್ನು ಎಡಗೈಗೆ ಶೇ. 6, ಬಲಗೈಗೆ ಶೇ. 5.5, ಅಸ್ಪೃಶ್ಯ ಉಪಜಾತಿಗಳಿಗೆ ಶೇ. 3 ಹಾಗೂ ಈ ಮೂರು ಗುಂಪುಗಳಿಗೆ ಸೇರದ ಜಾತಿಗಳವರಿಗೆ ಶೇ. 1ರಷ್ಟು ಮೀಸಲಾತಿ ನೀಡಬಹುದು ಎಂದು ಸದಾಶಿವ ಆಯೋಗವು 2012ರಲ್ಲೇ ಅಂದಿನ ಮುಖ್ಯಮಂತ್ರಿ ಡಿವಿ ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿತ್ತು.
ವರದಿ ಸ್ವೀಕರಿಸಿ 12 ವರ್ಷ ಕಳೆದರೂ, ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಸರ್ಕಾರಗಳು ದಲಿತ ನಾಯಕರಿಂದ ಮನವಿ ಸ್ವೀಕರಿಸುವುದನ್ನು, ಚುನಾವಣೆಯ ಸಮಯದಲ್ಲಿ ಜಾರಿಗೆ ತರುವ ಭರವಸೆ ನೀಡುವುದನ್ನು ಮುಂದುವರೆಸಿಕೊಂಡೇ ಬಂದಿದ್ದವು. ಜಾರಿಗೆ ತರುವ ಇಚ್ಛಾಶಕ್ತಿ ಯಾವ ಪಕ್ಷದ ನಾಯಕರಲ್ಲೂ ಕಾಣಲಿಲ್ಲ.
ಏತನ್ಮಧ್ಯೆ, ಒಳ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತು. ಇತ್ತೀಚೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತು. ಒಳ ಮೀಸಲಾತಿ ಕಾನೂನುಬದ್ಧ ಎಂದು ಹೇಳುವ ಮೂಲಕ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿತು. ಆದರೆ ಸರ್ಕಾರಿ ಉದ್ಯೋಗಗಳಲ್ಲಿ ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ಕೋರ್ಟ್ ಆಯಾಯ ರಾಜ್ಯಗಳ ವಿವೇಚನೆಗೆ ನೀಡಿತ್ತು.
ಈಗ, ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಅನುಷ್ಠಾನಗೊಳಿಸುವ ತೀರ್ಮಾನಕ್ಕೆ ಬಂದಿದೆ. ಎಡ-ಬಲ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಿದೆ. ಈ ಸಮಿತಿಯು 3 ತಿಂಗಳಲ್ಲಿ ವರದಿ ನೀಡಲಿದೆ ಹಾಗೂ ವರದಿ ಬರುವವರಿಗೆ ಯಾವುದೇ ಹುದ್ದೆ ನೇಮಕಾತಿ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ನ್ಯಾಯ ನಿರ್ಣಯಕ್ಕೆ ಅಗತ್ಯವಾಗಿ ಬೇಕಾದ ಪರಿಶೀಲನಾರ್ಹ ದತ್ತಾಂಶ(ಎಂಪೆರಿಕಲ್ ಡೇಟಾ)- ಸದಾಶಿವ ಆಯೋಗದಿಂದಲೋ ಅಥವಾ 2015ರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದಲೋ- ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಎರಡರಲ್ಲಿ ಸೂಕ್ತವಾದ ಒಂದರಿಂದ ದತ್ತಾಂಶ ಸ್ವೀಕರಿಸಬಹುದು. ಅಥವಾ ಎರಡರಿಂದಲೂ ಎತ್ತಿಕೊಳ್ಳಬಹುದು, ಇರಲಿ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು; ರಾಜ್‌ರಿಂದ ಕಲಿಯುವುದು ಬಹಳಷ್ಟಿದೆ
ಇದೆಲ್ಲವೂ ಸರಿ. ಆದರೆ, ನೇಮಕಗೊಳ್ಳುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯವರಿಗೆ, ಪರಿಶಿಷ್ಟ ಜಾತಿ-ಪಂಗಡಗಳ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಅರಿವಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆಯೇ, ಸರ್ಕಾರ, ಉಪ ಚುನಾವಣೆಯ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿರಬಹುದಾ ಎಂಬ ಅನುಮಾನವನ್ನೂ ಹುಟ್ಟುಹಾಕುತ್ತದೆ.
ಏತನ್ಮಧ್ಯೆ, ಕೆಲವರು ಸದಾಶಿವ ಆಯೋಗದ ವರದಿ ಬೇಡ ಎನ್ನುವವರಿದ್ದಾರೆ. ಬಿಜೆಪಿ ಸರ್ಕಾರವಂತೂ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಇನ್ನು 2015ರ ಜಾತಿ ಜನಗಣತಿ- ಸಮೀಕ್ಷೆ ಸಮರ್ಪಕವಾಗಿಲ್ಲವೆಂದು ಒಕ್ಕಲಿಗ ಮತ್ತು ಲಿಂಗಾಯತರು ವಿರೋಧಿಸುತ್ತಿದ್ದಾರೆ. ಹಾಗೆಯೇ ಪರಿಶಿಷ್ಟ ಜಾತಿ-ಪಂಗಡಗಳಲ್ಲಿದ್ದೂ, ಮೀಸಲಾತಿಯ ಅನುಕೂಲ ಪಡೆದ- ಕೊರಮ, ಕೊರಚ, ಭೋವಿ, ಲಂಬಾಣಿ ಜಾತಿಗಳ ಜನ ಒಳ ಮೀಸಲಾತಿಯೇ ಬೇಡ ಎಂದು ವಿರೋಧಿಸುತ್ತಿದ್ದಾರೆ.
ಸರ್ಕಾರ ಒಳ್ಳೆಯದಕ್ಕೆ ಕೈ ಹಾಕಿದಾಗಲೆಲ್ಲ, ಈ ರೀತಿ ಒಳವಿರೋಧಿಗಳ ಕೈ ಮೇಲಾಗುವುದು, ಅದು ಸರ್ಕಾರಕ್ಕೆ ಸಬೂಬು ಒದಗಿಸುವುದು, ಜಾರಿಗೆ ಕಾಲಮಿತಿ ಇಲ್ಲದಿರುವುದು- ವಿಳಂಬದ್ರೋಹಕ್ಕೆ ಕಾರಣವಾಗುತ್ತದೆ. ಅದಕ್ಕೆ ತಳ ಸಮುದಾಯಗಳು ಬಲಿಯಾಗುವುದು ನಿರಂತರವಾಗುತ್ತದೆ.
ಪರಿಶಿಷ್ಟ ಜಾತಿ-ಪಂಗಡಗಳಿಗೆ ರಾಜ್ಯದಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಆ 101 ಜಾತಿಗಳಲ್ಲಿ 50ಕ್ಕೂ ಹೆಚ್ಚು ಜಾತಿಗಳ ಜನಸಂಖ್ಯೆ ಕಡಿಮೆ ಇರುವ ಕಾರಣ ಮೀಸಲಾತಿ ಮುಟ್ಟೇ ಇಲ್ಲ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಅಲೆಮಾರಿಗಳು, ದಕ್ಕಲರು, ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ಬಗ್ಗೆ ಅರಿವಿಲ್ಲ. ಮುಖ್ಯವಾಹಿನಿಯ ಮುಖ ನೋಡದ ಮಾಸ್ತಿಕರಿಗೆ ಗಂಜಿ ಕೂಡ ಸಿಕ್ಕಿಲ್ಲ.
ಈಗಲಾದರೂ, ಮೀಸಲಾತಿಯ ಲಾಭ ಪಡೆದವರು ಉದಾರಿಗಳಾಗಿ ವರ್ತಿಸಬೇಕಿದೆ. ಮೂವತ್ತು ವರ್ಷಗಳ ಹೋರಾಟದಿಂದ ನೊಂದು ಬೆಂದು ಬರಡಾಗಿರುವವರನ್ನು ಇನ್ನಷ್ಟು ನೋಯಿಸದೆ, ಕಾಯಿಸದೆ ಸರ್ಕಾರ ಆದಷ್ಟು ಬೇಗ ಜಾರಿಗೆ ತರಬೇಕಿದೆ.
