ಫ್ಲೈಓವರ್ ಗೋಡೆಗೆ ಬಸ್ ಡಿಕ್ಕಿ ಹೊಡೆದಿದ್ದು, ಕನಿಷ್ಠ 12 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದುರ್ಘಟನೆ ರಾಜಸ್ತಾನದ ಕಾರ್ನಲ್ಲಿಯಲ್ಲಿ ನಡೆದಿದೆ. ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಸ್ತಾನದ ಸಲಾಸರ್‌ನಿಂದ ಹೊರಟಿದ್ದ ಬಸ್, ಸಿಕರ್ ಜಿಲ್ಲೆಯ ಕಾರ್ನಲ್ಲಿಯ ಲಕ್ಷ್ಮಣಗಢ ಬಳಿ ಹೆದ್ದಾರಿಯ ಫ್ಲೈಓವರ್ ಗೋಡೆಗೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಲಕ್ಷ್ಮಣಗಢದ ಸರ್ಕಾರಿ ಕಲ್ಯಾಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜಸ್ತಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.