ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಜನ ಆಲಿಸಬೇಕಾಗಿದೆ. ಇದು ಎಂದಿಗೆ ನಿಲ್ಲುತ್ತದೋ ಅಂದು ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥ ಬರುತ್ತದೆ. ಕಸಾಪ, ಸ್ವಾಗತ ಸಮಿತಿಯವರೆಲ್ಲ ಸೇರಿ ಇಂತಹದೊಂದು ಆದರ್ಶದ ನಿರ್ಧಾರ ಕೈಗೊಳ್ಳಬೇಕಿದೆ.
ಮಂಡ್ಯದಲ್ಲಿ ಡಿಸೆಂಬರ್ 21ರಿಂದ ಮೂರು ದಿನ ನಡೆಯಲಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗ್ಗೆ ದಿನಕ್ಕೊಂದು ಊಹಾಪೋಹ ಸೃಷ್ಟಿಯಾಗುತ್ತಿದೆ. ಕೆಲ ದಿನಗಳ ಹಿಂದೆ ಸಾಹಿತ್ಯೇತರ ಸಾಧಕರು ಯಾಕೆ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂದು ಪ್ರಶ್ನೆ ಮಾಡುವ ಮೂಲಕ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ತಾವು ಕಸಾಪ ಅಧ್ಯಕ್ಷರಾದ ಮಾನದಂಡದಂತೆಯೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೂ ಸಾಹಿತ್ಯೇತರರು ಅಧ್ಯಕ್ಷರಾಗಲಿ ಎಂದು ಹೇಳಿಕೆಯೊಂದನ್ನು ತೇಲಿಬಿಟ್ಟರು. ಅದಕ್ಕೆ ಒಂದಷ್ಟು ವಿರೋಧ ಬರುತ್ತಿದ್ದಂತೆಯೇ, ಕಸಾಪಕ್ಕೆ ಬರುತ್ತಿರುವ ಶಿಫಾರಸ್ಸುಗಳ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾ ಒಂದಷ್ಟು ರಾಜಕಾರಣಿಗಳು, ಮಠಾಧೀಶರು, ಕ್ರೀಡಾಪಟುಗಳ ಹೆಸರನ್ನು ತೇಲಿ ಬಿಟ್ಟರು. ಅಷ್ಟಾದ ನಂತರ ಮತ್ತೆ ಈ ಬಾರಿ ಮಹಿಳೆಯೊಬ್ಬರನ್ನು ಅಧ್ಯಕ್ಷ ಗಾದಿಗೆ ಆಯ್ಕೆ ಮಾಡುವಂತೆ ಸಲಹೆ ಬಂದಿದೆ ಎಂದು ಮೂರು ಹೆಸರುಗಳನ್ನು ಹರಿಯಬಿಟ್ಟರು. ಅ. 28 ರಂದು ಕಸಾಪದ ತುರ್ತು ಸಭೆ ನಡೆಸಲಾಗುವುದು ಎಂದರು. ಅದು ನಡೆಯಿತಾ, ಅಲ್ಲಿ ಅಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ಆಯ್ತಾ ಒಂದೂ ಗೊತ್ತಾಗಿಲ್ಲ. ಅದು ಆದಾಗ ಆಗಲಿ.
ಆದರೆ, ಸಾಹಿತ್ಯ ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ನಡೆಯುವ ಗೋಷ್ಠಿಯ ವಿಷಯಗಳ ಆಯ್ಕೆ, ಪ್ರಬಂಧಕಾರರ ಆಯ್ಕೆ, ಗೋಷ್ಠಿಯ ಅಧ್ಯಕ್ಷತೆ ಕೂಡಾ ಅಷ್ಟೇ ಮುಖ್ಯ. ಅಲ್ಲೂ ಪುರುಷರದ್ದೇ ಮೇಲುಗೈ ಎಂಬುದಕ್ಕೆ ಪುರಾವೆ ಕೇಳುವಂತಿಲ್ಲ. ಹಿಂದಿನ ಸಮ್ಮೇಳನಗಳ ಆಮಂತ್ರಣ ಪತ್ರಿಕೆಯ ಮೇಲೊಮ್ಮೆ ಕಣ್ಣಾಡಿಸಿದರೆ ಸಾಕು. ಅದರ ವಿರಾಟ್ ರೂಪ ದರ್ಶನವಾಗುತ್ತದೆ. ಮಹಿಳೆಯರನ್ನು ಪೂರ್ಣಕುಂಭ ಸ್ವಾಗತಕ್ಕೆ, ವೇದಿಕೆಯಲ್ಲಿ ಹಾರ ತುರಾಯಿಯ ಟ್ರೇ ಹಿಡಿದು ಓಡಾಡಲು, ಪ್ರತಿನಿಧಿಗಳ ನೋಂದಣಿ, ಊಟ ಬಡಿಸಲು ಹೀಗೆ ಚಾಕರಿಗಷ್ಟೇ ಬಳಕೆ ಮಾಡಲಾಗುತ್ತಿದೆ. ಅದಕ್ಕೂ ಹೆಚ್ಚೆಂದರೆ ಸಾಂಸ್ಕೃತಿ ಕಾರ್ಯಕ್ರಮಕ್ಕೆ ಅವಕಾಶ ಸಿಗಬಹುದೇನೋ! ಇದು ಇಂದು ನೆನ್ನೆಯ ಆರೋಪವಲ್ಲ. ಪ್ರತಿಸಲವೂ ಇದೇ ಚಾಳಿ.
ವಿಚಾರಗೋಷ್ಠಿಗಳಲ್ಲಿ ಅಧ್ಯಕ್ಷತೆಯ ಮಾತು ಪಕ್ಕಕ್ಕಿರಲಿ, ವಿಚಾರ ಮಂಡನೆ ಮಾಡುವ ತಂಡದಲ್ಲಿ ಒಬ್ಬ ಮಹಿಳೆಯೂ ಇರುವುದಿಲ್ಲ. ಮಹಿಳಾ ಪಾತಿನಿಧ್ಯ ಎಂಬುದು ಕೇಳಿ ಪಡೆಯುವ ವಿಷಯವಲ್ಲ. ಮಹಿಳೆ ಎಂದು ಗೌರವಿಸಿ ಕೊಡಬೇಕಾದ ಸ್ಥಾವವೂ ಅಲ್ಲ. ಇಲ್ಲಿ ಇರುವ ಸಮಸ್ಯೆಯೆಂದರೆ ಕಸಾಪ, ಗೌರವ ಸಮಿತಿ, ಅತಿಥಿಗಳ ಆಯ್ಕೆ ಸಮಿತಿ ಹೀಗೆ ಎಲ್ಲಾ ಸಮಿತಿಗಳಲ್ಲಿ ಪುರುಷರೇ ಇರುವುದು, ಸಾಹಿತ್ಯೇತರ ವ್ಯಕ್ತಿಗಳಿರೋದು ಸಾಮಾನ್ಯ. ಮಹಿಳೆಯರಿದ್ದರೂ ಅವರ ಇರುವಿಕೆಗೆ ಸ್ಥಳೀಯ ರಾಜಕಾರಣಿ, ಸಮಾಜ ಸೇವಕಿ, ಸಂಘಟಕಿಯಾಗಿ ಎಂಬ ಮಾನದಂಡ ಇರುತ್ತದೆಯೇ ಹೊರತು, ಸಾಹಿತ್ಯ ಕ್ಷೇತ್ರದ ಸಾಧಕರು ಆಗಿರುವುದಿಲ್ಲ. ಇನ್ನು ಸಮಿತಿಯಲ್ಲಿರುವವರಿಗೆ ತಮ್ಮದೇ ಆದ ಆಯ್ಕೆಗಳಿರುತ್ತದೆ. ಮತ್ಯಾರದೋ ಪ್ರಭಾವ ಇರುತ್ತದೆ. ನಮ್ಮವರು, ನಮ್ಮೂರಿನವರು, ನಮ್ ಜಾತಿಯವರು, ನಮ್ ಸಂಬಂಧಿ ಹೀಗೆ ಹತ್ತಾರು ಸ್ವಾರ್ಥಗಳಿರುತ್ತದೆ. ಹೀಗಾಗಿ ಅಲ್ಲಿ ಮಹಿಳಾ ಪ್ರಾತಿನಿಧ್ಯ ಗೌಣವಾಗಿಯೇ ಉಳಿಯುತ್ತದೆ.

ಮಹಿಳೆಯರ ಕಡೆಗಣನೆ ಸಾಹಿತ್ಯ ಸಮ್ಮೇಳನಕ್ಕೆ ಮಾತ್ರ ಅನ್ವಯಿಸಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಇರುವ ನ್ಯೂನತೆ. ಸರ್ಕಾರದ ಅಂಗ ಸಂಸ್ಥೆಗಳ ನೇಮಕಾತಿಗಳಲ್ಲೂ ಇದು ಢಾಳಾಗಿ ಕಾಣಿಸುತ್ತದೆ. ಉದಾಹರಣೆಗಾಗಿ ನೋಡುವುದಾದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಬರುವ 19 ಅಕಾಡೆಮಿ ಮತ್ತು ಪ್ರಾಧಿಕಾರಗಳಲ್ಲಿ ಸಂಗೀತ-ನೃತ್ಯ ಅಕಾಡೆಮಿ ಮತ್ತು ಮಾಧ್ಯಮ ಅಕಾಡೆಮಿ ಎರಡರ ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯರಿದ್ದಾರೆ. ಇನ್ನು ಅಕಾಡೆಮಿಗಳ ಸದಸ್ಯರ ಪಟ್ಟಿ ನೋಡಿದರೆ ಭ್ರಮನಿರಸನವಾಗುತ್ತದೆ. ಕೆಲ ಅಕಾಡೆಮಿಗಳಲ್ಲಿ ಮಹಿಳಾ ಸದಸ್ಯರೇ ಇಲ್ಲ.
ರಾಜಕಾರಣಿಗಳನ್ನು ಸಾಹಿತ್ಯದ ವೇದಿಕೆಯಿಂದ ದೂರವಿಡಿ
2023ರಲ್ಲಿ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮತ್ತು ಸಮಾರೋಪ ಎರಡೂ ಸಮಾರಂಭದ ವೇದಿಕೆಗೆ ಒಬ್ಬ ಮಹಿಳೆಯೂ ಇರಲಿಲ್ಲ. ಹತ್ತಾರು ರಾಜಕಾರಣಿಗಳು, ಸ್ಥಳೀಯ ಪುಢಾರಿಗಳು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ತುಂಬಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಿರುವಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರ ಹಾವೇರಿಯಲ್ಲಿ ಸಮ್ಮೇಳನ ಆಯೋಜನೆಗೊಂಡಿತ್ತು. ಇದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಕಸಾಪ ಅಧ್ಯಕ್ಷ ಜೋಶಿಯವರ ಅವಧಿಯ ಮೊದಲ ಸಮ್ಮೇಳನವದು.
ಸಾಹಿತ್ಯ ಸಮ್ಮೇಳನ ಸರ್ಕಾರದ ದುಡ್ಡಿನಲ್ಲಿ ನಡೆಯುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಯಿಂದ ಹಿಡಿದು, ಕನ್ನಡ ಸಂಸ್ಕೃತಿ ಇಲಾಖೆ ಸಚಿವ, ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿರೋಧ ಪಕ್ಷದ ನಾಯಕರು ಅಷ್ಟೇ ಅಲ್ಲ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹೀಗೆ ಪಂಚಾಯತಿ ಮಟ್ಟದ ಪ್ರತಿನಿಧಿಗಳವರೆಗೆ ಎಲ್ಲರಿಗೂ ವೇದಿಕೆಯಲ್ಲಿ ಕುರ್ಚಿ ಹಾಕಿ ಕೂರಿಸಲಾಗುತ್ತಿದೆ. ಸಾಹಿತಿಗಳು, ಸಾಧಕರೆಲ್ಲ ಪ್ರೇಕ್ಷಕರ ಸಾಲಿನಲ್ಲಿ ಕೂತಿರುತ್ತಾರೆ. ಇದು ನಿಜವಾಗಿಯೂ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮಾಡುವ ಅಪಮಾನ. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಜನ ಆಲಿಸಬೇಕಾಗಿದೆ. ಇದು ಎಂದಿಗೆ ನಿಲ್ಲುತ್ತದೋ ಅಂದು ಸಾಹಿತ್ಯ ಸಮ್ಮೇಳನಕ್ಕೊಂದು ಅರ್ಥ ಬರುತ್ತದೆ. ಇಂತಹ ವೇದಿಕೆಗಳಿಂದ ರಾಜಕಾರಣಿಗಳೇ ದೂರ ಸರಿಯಬೇಕು ಎಂಬುದು ದುಬಾರಿ ಆಲೋಚನೆಯಾದೀತು. ಕಸಾಪ, ಸ್ವಾಗತ ಸಮಿತಿಯವರೆಲ್ಲ ಸೇರಿ ಇಂತಹದೊಂದು ಆದರ್ಶದ ನಿರ್ಧಾರ ಕೈಗೊಳ್ಳಬೇಕಿದೆ. ಇನ್ನೂ ಕಾಲ ಮಿಂಚಿಲ್ಲ. ಒಂದೂವರೆ ತಿಂಗಳು ಬಾಕಿ ಇದೆ.
ಮಂಡ್ಯ ಸಮ್ಮೇಳನ ಕುರಿತ ಎಲ್ಲ ಬರಹಗಳನ್ನು ಈ ಲಿಂಕ್ನಲ್ಲಿ ಓದಬಹುದು
https://eedina.com/tag/mandya-sahitya-sammelana/

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ಕನ್ನಡ ಸಾಹಿತ್ಯ ಸಮ್ಮೇಳನ,, ಬಿಜೆಪಿಯ ಕಾರ್ಯಕಾರಿಣಿ ಸಭೆಯಾಗಿ ಮಾರ್ಪಟ್ಟಿದೆ,,ಗುರುಗೋವಿಂದ ಭಟ್ಟರ ಹೇಸರೇಳಿಕೊಂಡು ಕನ್ನಡದ ಅಸ್ಥಿತ್ವಕ್ಕೆ ಕಳಂಕ ತರುವ,, ಭಯಂಕರ ನಾಡೋಜ,, ವೇದಿಕೆ ಮೇಲೆ ಕನ್ನಡದ ಶಾಲು ಹಾಕಿಕೊಂಡವರು,,ಹಿಂದಿ ಹೇರಿಕೆ ವಿರುದ್ಧ ದ್ವನಿ ಎತ್ತುವ ಧೈರ್ಯ ಇಲ್ಲದ ಜುಮ್ಲಾ ನಾರ್ಥಿಗಳ ಚೌಕಿದಾರರು,, ಇಂಥ ಪೂರ್ವಾಗ್ರಹಪೀಡಿತರಿಂದ ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತವಾಗಲು ಸಾಧ್ಯವೇ,,, ಬಹುತೇಕರಿಗೆ ಭಾಷೆಯ ಗಂಧಗಾಳಿ ಗೊತ್ತಿಲ್ಲ
Appreciated good evaluation