ಕಳೆದ 25 ವರ್ಷದಿಂದ ಕುಲಾಂತರಿ ತಳಿ ಬಳಕೆಗೆ ವಿರೋಧಿಸಿ ಹೋರಾಟ ನಡೆಸಿದ ರೈತ ಸಂಘ ಮರಳಿ ಕಾರ್ಪೊರೇಟ್ ಕಂಪೆನಿ ಕುಲಾಂತರಿ ತಳಿ ಬಗ್ಗೆ ಆಸಕ್ತಿ ತೋರಿವೆ. ಈ ಬಗ್ಗೆ ಕುಮ್ಮಕ್ಕು ನೀಡುವ ಸರ್ಕಾರದ ವಿರೋಧ ಹಾಗೂ ಕುಲಾಂತರಿ ತಳಿ ನಿಷೇಧಿಸಿ ನೀತಿ ಜಾರಿಗೆ ಆಗ್ರಹಿಸಿ ಹಾಗೂ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನವಂಬರ್ 4 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಕಲ ಜೀವರಾಶಿಗಳಿಗೆ ಮಾರಕ ಎನಿಸಿದ ಕುಲಾಂತರಿ ತಳಿಗಳ ಬಳಸಿದ 113 ದೇಶದಲ್ಲಿ ಈಗಾಗಲೇ ಮಾರಕ ಅನುಭವ ಪಡೆದು ನಂತರ ತಳಿ ನಿಷೇಧಿಸಿದ್ದಾರೆ. ಈಗ ನಮ್ಮ ದೇಶದಲ್ಲಿ ಸಣ್ಣಗೆ ಹೆಜ್ಜೆ ಇಟ್ಟ ಕುಲಾಂತರಿ ತಳಿ ಬಳಕೆಗೆ ಮುಂದಾದ ಕಂಪೆನಿಗಳಿಗೆ ಕೆಲ ಸರ್ಕಾರ ಸಹಕಾರ ನೀಡುತ್ತಿರುವುದು ಸರಿಯಲ್ಲ. ಈ ಬಗ್ಗೆ ವಿರೋಧಿಸಿ ನವಂಬರ್ 4 ರಂದು ತಾಲ್ಲೂಕು ಮಟ್ಟದ ಪ್ರತಿಭಟನೆಯನ್ನು ಇಡೀ ಜಿಲ್ಲೆಯಲ್ಲಿ ನಡೆಸುತ್ತೇವೆ ಎಂದರು.
ಮನುಷ್ಯನಿಗೆ ಅಪಾಯ ತರುವ ತಳಿಗಳು ಕೃಷಿಕ ವರ್ಗವನ್ನೇ ಹಾಳು ಮಾಡಲಿದೆ. ಕುಲಾಂತರಿ ತಳಿಗಳ ತಯಾರಿಕೆಗೆ ಮುಂದಾದ ಕೆಲ ಕಾರ್ಪೋರೇಟ್ ಕಂಪೆನಿಯ ದಾಸರಾಗಿ ರೈತ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕುಲಾಂತರಿ ತಳಿ ನಿಷೇಧಿಸಿ ನೀತಿ ಜಾರಿಗೆ ತರಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಜಿಲ್ಲೆಯ ಆರು ತಾಲ್ಲೂಕಿನ ರೈತರ ಮರಣ ಶಾಸನ ಬರೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಕೂಡಲೇ ಸರ್ಕಾರ ಕೈ ಬಿಡಬೇಕು. ಇಲ್ಲವಾದಲ್ಲಿ ಸಾವಿರಾರು ರೈತರು ಬೀದಿಗಿಳಿದು ಹೋರಾಟ ಸಮಿತಿ ಜೊತೆ ಪ್ರತಿಭಟನೆಯನ್ನು ನಿರಂತರ ನಡೆಸಲಿದ್ದಾರೆ. ಈ ಬಗ್ಗೆ ನವಂಬರ್ 4 ರಂದು ಸರ್ಕಾರಕ್ಕೆ ಎಚ್ಚರಿಕೆ ನೀಡುವುದಾಗಿ ತಿಳಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಕುಲಾಂತರಿ ತಳಿಗಳ ವಿರೋಧಿಸಿ ತಾಲ್ಲೂಕಿನಲ್ಲಿ ರೈತರು ನವಂಬರ್ 4 ರಂದು ಬೆಳಿಗ್ಗೆ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ತಾಲ್ಲೂಕು ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಮನವಿ ನೀಡುತ್ತೇವೆ ಎಂದ ಅವರು ರೈತಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಅವರು ರಾಜ್ಯ ಘಟಕದ ಕಾರ್ಯಾಧ್ಯಕ್ಷರಾಗಿ ಪುನರ್ ಆಯ್ಕೆಯಾಗಿದ್ದಾರೆ. ಈ ನಿಟ್ಟಿನಲ್ಲಿ ಅವರ ಹೋರಾಟದ ಮಾರ್ಗದರ್ಶನ ಜಿಲ್ಲೆಯಲ್ಲಿ ಮುಂದುವರೆಯಲಿ ಎಂದು ಸನ್ಮಾನಿಸಿ ಗೌರವಿಸಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಘಟಕಕ್ಕೆ ಪುನರ್ ಆಯ್ಕೆಯಾದ ಗೋವಿಂದರಾಜು ಅವರನ್ನು ರೈತ ಸಂಘದ ತಾಲ್ಲೂಕು ಘಟಕ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಯುವ ಘಟಕದ ಶಿವಕುಮಾರ್, ಕುಮಾರಸ್ವಾಮಿ, ಸತ್ತಿಗಪ್ಪ ಇತರರು ಇದ್ದರು.
