ನಿರಂತರ ಮಳೆ ಸುರಿದ ಪರಿಣಾಮವಾಗಿ ಕೊಯ್ಲಿಗೆ ಬಂದಿದ್ದ ಈರುಳ್ಳಿ ಜಮೀನಿನಲ್ಲೇ ಕೊಳೆತು ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದ್ದು, ಗದಗ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತ ಬಸರವಡ್ಡಿ ದೇವಪ್ಪ ಬಂಡಿಹಾಳ ಅವರ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಉತ್ತಮ ಫಸಲು ಬಂದಿತ್ತು. ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲೇ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಮೀನಿನಲ್ಲೇ ಕೊಳೆತಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
“ರಂಟೆ–ಕುಂಟೆ, ಬೀಜ, ಗೊಬ್ಬರ, ಕಳೆ, ನೀರು ಹಾಯಿಸುವುದು ಹಾಗೂ ಇತರ ಕೃಷಿ ಚಟುವಟಿಕೆ ಸೇರಿ ಪ್ರತಿ ಎಕರೆಗೆ ₹40 ಸಾವಿರ ಖರ್ಚು ಬರುತ್ತದೆ. ನಾಲ್ಕು ಎಕರೆಗೆ ₹400 ಪ್ಯಾಕೆಟ್ ಈರುಳ್ಳಿ ಆಗುತ್ತಿತ್ತು. ಬೆಳೆಯು ಉತ್ತಮವಾಗಿತ್ತು. ಇಳುವರಿ ಚೆನ್ನಾಗಿ ಬರುತ್ತಿತ್ತು. ಈಗಿನ ಮಾರುಕಟ್ಟೆ ದರ ಕನಿಷ್ಠ ಕ್ವಿಂಟಲ್‌ಗೆ ₹ 3 ಸಾವಿರದಂತೆ ಮಾರಾಟವಾಗಿದ್ದರೂ ₹5ರಿಂದ ₹6 ಲಕ್ಷ ಆದಾಯ ಬರುತ್ತಿತ್ತು” ಎಂದು ರೈತ ಬಸವರಡ್ಡಿ ಬಂಡಿಹಾಳ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಳೆಯ ಪರಿಣಾಮವಾಗಿ ಗ್ರಾಮದ ಬಹುತೇಕ ರೈತರ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಅಧಿಕಾರಿಗಳು ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಅರಕಲಗೂಡು | ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಬಂಧಿಸಲು ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
ಈ ಬಗ್ಗೆ ಮಾಹಿತಿ ನೀಡಿರುವ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ಮಹ್ಮದ ರಫಿ ಎಂ. ತಾಂಬೋಟಿ, “ನಿರಂತರ ಮಳೆಯ ಪರಿಣಾಮವಾಗಿ ಅತಿಯಾದ ತಂಪಿನಿಂದ ಬೆಳೆಹಾನಿಯಾಗಿದೆ. ತೋಟಗಾರಿಕೆ ಇಲಾಖೆಯಿಂದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದೆ. ಸರ್ಕಾರದ ನಿಯಮದಂತೆ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು” ಎಂದು ತಿಳಿಸಿದ್ದಾರೆ.
