ಸಾರ್ವಜನಿಕರ ಭೇಟಿಗೆ ಸರಕಾರದಿಂದ ನಿರ್ದೇಶನವಿದ್ದರೂ ಸಾರ್ವಜನಿಕರಿಗೆ ಕಾಲಾವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಅವರು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಸರಕಾರದ ಅಪರ ಮುಖ್ಯಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಅಧಿಕಾರಿಗಳು ಪ್ರತಿದಿನ ಮಧ್ಯಾಹ್ನ 3:30 ರಿಂದ ಸಂಜೆ 5:30ರವರೆಗೆ ಯಾವುದೇ ಸಭೆಗಳನ್ನು ನಿಗದಿಪಡಿಸದೆ, ಸಾರ್ವಜನಿಕರು ಭೇಟಿಗೆ ಸಮಯ ಕೊಟ್ಟು ಅವರ ಕುಂದು ಕೊರತೆ ಆಲಿಸಿ, ಜನಸ್ಪಂದನಾ ತಂತ್ರಾಂಶದಲ್ಲಿ ದಾಖಲಿಸಿ, ನಿವಾರಿಸಲು ಕ್ರಮಕೈಗೊಳ್ಳುವಂತೆ ಸರಕಾರದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಆದರೆ, ಬೀದರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು ಗಂಟೆಗಟ್ಟಲೆ ಕಾದು ಕುಳಿತರೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲʼ ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಮಗ ಮೃತಪಟ್ಟಿರುವುದು ತಿಳಿಯದೆ 4 ದಿನ ಶವದೊಂದಿಗೆ ಕಳೆದ ಅಂಧ ದಂಪತಿ!
ʼಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಈ ರೀತಿ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಡ್ಡೆ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸರಕಾರ ನಿಗದಿಪಡಿಸಿದ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಭೇಟಿಯಾಗಲು ಅವಕಾಶ ನೀಡಬೇಕುʼ ಎಂದಿದ್ದಾರೆ.