ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸುವ ಮೂಲಕ ಅತಿಹೆಚ್ಚು ಏಕದಿನ ಶತಕ ಸಾಧಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಿಥಾಲಿ ರಾಜ್ ಹೆಸರಿನಲ್ಲಿದ್ದ ಏಳು ಶತಕಗಳ ದಾಖಲೆಯನ್ನು ಮುರಿದ ಸ್ಮೃತಿ, ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತ್ತೀಚಿಗಷ್ಟೆ ಟಿ20 ವಿಶ್ವಕಪ್ ಜಯಿಸಿದ್ದ ಕಿವೀಸ್ ಮಹಿಳೆಯರ ತಂಡ ಟೀಂ ಇಂಡಿಯಾ ವಿರುದ್ಧ ಸರಣಿ ಸೋತಿದೆ.
ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಭಾರತ, ಪ್ರವಾಸಿ ತಂಡದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. 122 ಎಸೆತಗಳಲ್ಲಿ 100 ರನ್ ಗಳಿಸಿದ ಮಂಧಾನ ತಮ್ಮ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಈ ಸುದ್ದಿ ಓದಿದ್ದೀರಾ? ಟಿ20 ಪಂದ್ಯದಲ್ಲಿ 344 ರನ್ ಬಾರಿಸಿದ ಜಿಂಬಾಬ್ವೆ: ಒಂದೇ ಪಂದ್ಯದಲ್ಲಿ 7 ವಿಶ್ವದಾಖಲೆ ನಿರ್ಮಾಣ
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 49.5 ಓವರ್‌ಗಳಲ್ಲಿ 232 ರನ್ ಗಳಿಸಿದರೆ, ಮಂಧಾನ ಶತಕದ ನೆರವಿನಿಂದ ಭಾರತ 44.2 ಓವರ್ ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ವಿಕೆಟ್ ಕೀಪರ್ ಯಷ್ಟಿಕಾ ಬಬಿತಾ 35 ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 59 ರನ್ ಗಳೊಂದಿಗೆ ಜೊತೆ ನೀಡಿದರು. ಸ್ಮೃತಿ ಮತ್ತು ಮಿಥಾಲಿ ರಾಜ್ ಬಳಿಕ ಭಾರತ ಏಕದಿನ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಆರು ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಕೂಡಾ ಪಂದ್ಯದ ಗತಿಯನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಒತ್ತಡದ ನಡುವೆಯೂ ಅದ್ಭುತ ಪ್ರದರ್ಶನ ನೀಡುವ ಕೌಶಲ ಅವರದ್ದಾಗಿದೆ.
