ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ನಿಯಂತ್ರಣ) ಕಾಯ್ದೆ 1989 ತಿದ್ದುಪಡಿ ನಿಯಮಗಳು 2013ರಂತೆ ನಿಯಮ 17 (ಎ) ಚಿಕ್ಕಮಗಳೂರು ಕಂದಾಯ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನು ಚಿಕ್ಕಮಗಳೂರು ನಗರದ ತಾಲೂಕು ಪಂಚಾಯಿತಿ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ದಲ್ಚಿತ್ ಕುಮಾರ್, ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆ ಆಯಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಹಾಗೂ ಯೋಜನೆಗಳ ಕುರಿತ ಮಾಹಿತಿಯನ್ನು ಸಮುದಾಯದ ಜನರಿಗೆ ತಲುಪಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ರುದ್ರಭೂಮಿಗೆ ಸಂಬಂಧಿಸಿದಂತೆ ಸ್ಥಳ ಗುರುತಿಸಿ, ಜಮೀನು ಒದಗಿಸಲು ಹಾಗೂ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಥಳ ಗುರುತಿಸಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಟಿತ್ ಕುಮಾರ್ ಸಭೆಯಲ್ಲಿ ತಿಳಿಸಿದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕುರುವಂಗಿ ಗ್ರಾಮದ ಸರ್ವೆ ನಂಬರ್ 42/01 ರಲ್ಲಿ ಸ್ಮಶಾನಕ್ಕೆ ಮೂರು ಎಕರೆ ಜಮೀನು ಮಂಜೂರು ಆಗಿದ್ದು, ಸ್ಥಳ ಪರಿಶೀಲಿಸಲಾಗಿದೆ. ಸದರಿ ಸ್ಥಳದಲ್ಲಿ ಯಾವುದೇ ಒತ್ತುವರಿಯಾಗಿರುವುದು ಕಂಡು ಬಂದಿರುವುದಿಲ್ಲ ಎಂದು ಕೊಪ್ಪ ತಾಲೂಕು ತಹಶೀಲ್ದಾರ್ ತಿಳಿಸಿದರು.
2024-25ನೇ ಸಾಲಿನಲ್ಲಿ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಶೇ. 90ರಷ್ಟು ಹಾನಿಯಾದ ಮನೆಗಳ ಸಂತ್ರಸ್ತರಿಗೆ ಎಸ್ ಡಿ ಆರ್ ಎಫ್ ಹಾಗೂ ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರ ಧನ ಪಾವತಿಸಲು ಕ್ರಮವಹಿಸಲಾಗುತ್ತಿದೆ. ಸಾಗುವಳಿ ಚೀಟಿ ಇಲ್ಲದಿರುವ ಸಂತ್ರಸ್ತರಿಗೂ ಸಹ ಪರಿಹಾರ ಪಾವತಿಗಾಗಿ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ನೀಡುವ ಕುರಿತು ನಿಯಮ ಅನುಸಾರ ಕ್ರಮವಹಿಸಲಾಗುವುದು ಎಂದು ದಲ್ಟಿತ್ ಕುಮಾರ್ ಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿದ್ದೀರಾ:http://ರಸ್ತೆ ಇಲ್ಲ, ನೆಟ್‌ವರ್ಕ್ ಇಲ್ಲ; ಮಳೆ ಬಂದ್ರೆ ಹೊರಜಗತ್ತಿನ ಸಂಪರ್ಕವೇ ಇಲ್ಲ! Chikkamagalur | Malenadu | Rainy
ಸಭೆಯಲ್ಲಿ ಕೊಪ್ಪ ತಾಲೂಕು ತಹಶೀಲ್ದಾರ್ ಲಿಖಿತ, ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವಿಜಯ್ ಕುಮಾರ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರೇವಣ್ಣ ಹಾಗೂ ಅನುಸೂಚಿ ಜಾತಿ ಮತ್ತು ಅನುಸೂಚಿ ಬುಡಕಟ್ಟುಗಳ ದೌರ್ಜನ್ಯ ಸಮಿತಿಯ ಸದಸ್ಯರುಗಳಾದ ಹುಣಸೆಮಕ್ಕಿ ಲಕ್ಷ್ಮಣ, ರಾಜ ಶಂಕರ್, ಕೆ.ಎಂ. ರಾಮಣ್ಣ ಇನ್ನಿತರರು ಉಪಸ್ಥಿತಿಯಲ್ಲಿದ್ದರು.
