ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಕರ್ನಾಟಕ ಸಂಭ್ರಮ-50ರ ಅಭಿಯಾನದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಮಹಿಳಾ ಮತ್ತು 50 ಪುರುಷ ಸಾಧಕರಿಗೆ ರಾಜ್ಯ ಸರ್ಕಾರ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡುತ್ತಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಒಟ್ಟು 100 ಮಂದಿ ಸಾಧಕರನ್ನು 2024ನೇ ಸಾಲಿನಲ್ಲಿ ಗುರುತಿಸಿ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಇಷ್ಟೂ ಮಂದಿ ಸಾಧಕರಿಗೆ ಸುವರ್ಣ ಮಹೋತ್ಸವ ಆಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಹರ್ಷಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಎಸ್.ಗೀತಾಬಾಯಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರಲ್ಲಿ ಜಾನಪದ, ವೈದ್ಯಕೀಯ ಮಾಧ್ಯಮ ಪರಿಸರ, ಯಕ್ಷಗಾನ, ಶಿಲ್ಪಕಲೆ, ರಂಗಭೂಮಿ, ಛಾಯಾಚಿತ್ರ, ಸಂಗೀತ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಜ್ಯಾದ್ಯಂತ ಸಾಧನೆ ಮಾಡಿದವರಿಗೆ ಮನ್ನಣೆ ನೀಡಲಾಗಿದೆ.
ಸುವರ್ಣ ಕನ್ನಡ ಪ್ರಶಸ್ತಿ ಗೆ ಐವರು ಪತ್ರಕರ್ತರ ಆಯ್ಕೆ
ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು, (ಬೆಂಗಳೂರು), ಮಂಜುನಾಥ್ ಅದ್ದೆ (ಬೆಂಗಳೂರು), ವಿಶ್ವನಾಥ್ ಸುವರ್ಣ (ದಕ್ಷಿಣ ಕನ್ನಡ), ಲಕ್ಷ್ಮಿ ನರಸಪ್ಪ (ತುಮಕೂರು), ರುದ್ರಪ್ಪ ಅಸಂಗಿ (ವಿಜಯಪುರ), ಮದನ ಗೌಡ (ಹಾಸನ), ಮಲ್ಲಿಕಾರ್ಜುನ ಹೆಗ್ಗಳಗಿ (ಬಾಗಲಕೋಟೆ)



