ವರ್ತಮಾನ | ಹಾಸನದ ಪ್ರೀತಂ ಗೌಡ ಅವರು ಚುನಾವಣೆಗೆ ಮೊದಲು ಮತ್ತು ನಂತರ ಆಡಿದ ಎರಡು ಮಾತು

Date:

Advertisements
ಹಾಸನ ಶಾಸಕರಾಗಿದ್ದ ಪ್ರೀತಂ ಗೌಡ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಅವರು ಮತಭಿಕ್ಷೆಗಾಗಿ ಬಂದಾಗ ಆಡಿದ ಮಾತುಗಳು ಮತ್ತು ಸೋತ ನಂತರ ಮುಸ್ಲಿಂ ಮತದಾರರ ಕುರಿತು ಆಡಿದ ಮಾತು ಗಮನಾರ್ಹ. ಇದು ಎಲ್ಲ ಜನಪ್ರತಿನಿಧಿಗಳಿಗೂ ಪಾಠವಾಗಬೇಕಾದ ಪ್ರಸಂಗ

ವಿಧಾನಸಭಾ ಚುನಾವಣೆಗೆ ಇನ್ನು ಕೆಲ ದಿನಗಳಿದ್ದಾಗ ನಾನು ಮತದಾರನಾಗಿರುವ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಗೌಡ ಅವರು, ಆಯ್ದ ಮತದಾರರೊಂದಿಗೆ ಸಂವಾದ ನಡೆಸಿದರು. ಆಗಿನ್ನೂ ಅವರಿಗೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ದೊರೆತಿರಲಿಲ್ಲ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಕಳೆದ ಐದು ವರ್ಷಗಳಲ್ಲಿ ಶಾಸಕರಾಗಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿದರು. ಮತ್ತೊಮ್ಮೆ ತಮ್ಮನ್ನು ಚುನಾಯಿಸಿದರೆ ಮಾಡಲಿರುವ ಕೆಲಸಗಳ ಬಗ್ಗೆಯೂ ವಿವರಿಸಿದರು.

“ಈ ಬಾರಿ ರಸ್ತೆ, ಚರಂಡಿ, ಫುಡ್ ಕೋರ್ಟ್‍ನಂತಹ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದ್ದೆ. ಮುಂದಿನ ಸಲ ಪತ್ನಿಯ ಮುಂದಾಳತ್ವದಲ್ಲಿ ಎನ್‍ಜಿಒ ಸ್ಥಾಪಿಸಿ, ಅದರ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಮಾಡಲು ಶ್ರಮಿಸುವೆ,” ಎಂಬ ಆಶ್ವಾಸನೆ ನೀಡಿದರು. “ತೀರಾ ಕಡಿಮೆ ಆದಾಯದಲ್ಲಿ ಜೀವನ ನಡೆಸುತ್ತಿರುವ ಕೆಲವರು; ಮಕ್ಕಳ ಬದುಕು ಕೂಡ ನಮ್ಮಂತೆ ಆಗಬಾರದು, ಅವರಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಕಾಳಜಿಯಿಂದ ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿರುವುದು ಗಮನಕ್ಕೆ ಬಂದಿದೆ. ಬಡವರು ಮಕ್ಕಳ ಶಿಕ್ಷಣಕ್ಕಾಗಿ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗಲಿದೆ,” ಎಂದರು.

ಈ ಆಡಿಯೊ ಕೇಳಿದ್ದೀರಾ?: ಮೈಕ್ರೋಸ್ಕೋಪು | ಹೆಣ್ಣು-ಗಂಡಿನ ಕುರಿತು ಸಿಜೆಐ ಹೇಳಿದ ಮಾತು ಮತ್ತು ಬಯಾಲಜಿ

ಯುವ ಸಮುದಾಯ ಪದವಿ ಶಿಕ್ಷಣ ಪಡೆದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು ತಾವು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲೇ ಉದ್ಯೋಗ ದೊರೆಯುವಂತೆ ಮಾಡುವುದಾಗಿ ತಿಳಿಸಿದರು. ಇದಕ್ಕಾಗಿ ಈಗಾಗಲೇ ಕೆಲ ಉದ್ದಿಮೆ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಸಾಕಷ್ಟು ಉದ್ಯಮ ಸಂಸ್ಥೆಗಳು ಇಲ್ಲೂ ಸ್ಥಾಪನೆ ಆಗಲಿವೆ; ಒಂದು ವೇಳೆ ಅಂದುಕೊಂಡಂತೆ ಉದ್ಯಮ ಸಂಸ್ಥೆಗಳನ್ನು ಕ್ಷೇತ್ರಕ್ಕೆ ಕರೆತರಲು ಸಾಧ್ಯವಾಗದಿದ್ದಲ್ಲಿ, ತಮ್ಮದೇ ಸ್ವಂತ ಉದ್ಯಮ ಸಂಸ್ಥೆ ಸ್ಥಾಪಿಸಿಯಾದರೂ ನಾಲ್ಕೈದು ಸಾವಿರ ಉದ್ಯೋಗಾವಕಾಶ ಸೃಷ್ಟಿಸಲಾಗುವುದು ಎಂದು ಭರವಸೆ ನೀಡಿದರು.

Advertisements

ಪ್ರೀತಂ ಗೌಡ ಅವರ ಮಾತು ಮುಗಿದ ಮೇಲೆ ಮತದಾರರಿಗೆ ಪ್ರಶ್ನೆ ಕೇಳುವ ಅವಕಾಶ ಕಲ್ಪಿಸಲಾಯಿತು. ಒಬ್ಬರು, ತಮ್ಮ ಬಡಾವಣೆಗೆ ಸಮರ್ಪಕವಾಗಿ ವಿದ್ಯುತ್ ಮತ್ತು ನೀರು ಪೂರೈಕೆಯಾಗುತ್ತಿಲ್ಲ, ಈ ಕುರಿತು ಗಮನಹರಿಸಬೇಕಾಗಿ ಕೋರಿದರು. ಮತ್ತೊಬ್ಬರು, ಸಿಮೆಂಟ್ ರಸ್ತೆಗಳ ಬದಲು ಡಾಂಬರು ರಸ್ತೆಗಳನ್ನು ನಿರ್ಮಿಸಲು ಆದ್ಯತೆ ನೀಡಿ ಎಂಬ ಸಲಹೆ ನೀಡಿದರು. ಇನ್ನು ಕೆಲವರು, ಶಾಸಕರು ಮಾಡಿರುವ ಕೆಲಸಗಳ ಕುರಿತು ತಮಗಿರುವ ಮೆಚ್ಚುಗೆ ವ್ಯಕ್ತಪಡಿಸಿದರು. ಮತದಾರರೊಬ್ಬರು, ಶಾಸಕರ ಕುರಿತು ಇರುವ ಆರೋಪಗಳನ್ನು ಅವರ ಗಮನಕ್ಕೆ ತಂದು ಸ್ಪಷ್ಟನೆ ಪಡೆಯುವ ಪ್ರಯತ್ನ ಮಾಡಿದರು; “ಕ್ಷೇತ್ರ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರಿಗೆ ಶಾಸಕರು ಸಾಕಷ್ಟು ಕಿರುಕುಳ ನೀಡುತ್ತಾರೆ ಮತ್ತು ಸರ್ಕಾರಿ ನೌಕರರ ವರ್ಗಾವಣೆ ದಂಧೆ ನಡೆಸುತ್ತಾರೆ ಎಂಬ ಆರೋಪ ನಿಮ್ಮ ಮೇಲಿದೆಯಲ್ಲಾ…?” ಎಂದು ಕೇಳಿದರು.

ಪ್ರೀತಂ
ಚುನಾವಣಾ ಪ್ರಚಾರದಲ್ಲಿ ಪ್ರೀತಂ ಗೌಡ | ಚಿತ್ರ ಕೃಪೆ: ಫೇಸ್‌ಬುಕ್

ಇಡೀ ಸಂವಾದವು ರಸ್ತೆ, ಚರಂಡಿ, ನೀರು, ವಿದ್ಯುತ್, ಕಸ ನಿರ್ವಹಣೆಯಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರತ್ತಲೇ ಕೇಂದ್ರೀಕೃತವಾಗಿತ್ತೇ ವಿನಾ, ಶಾಸಕರು ಅಸಲಿಗೆ ಮಾಡಬೇಕಿದ್ದ ಕೆಲಸದತ್ತ ಯಾರೂ ಬೆಟ್ಟು ಮಾಡಿ ತೋರಿಸಲಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದ ವಿಧಾನಸಭಾ ಅಧಿವೇಶನಗಳಲ್ಲಿ ಶಾಸಕರು ಸಕ್ರಿಯವಾಗಿ ಪಾಲ್ಗೊಂಡಿದ್ದರೇ? ತಮ್ಮದೇ ಪಕ್ಷದ ಸರ್ಕಾರ ಜಾರಿಗೆ ತಂದ ಯೋಜನೆಗಳು, ಮಂಡಿಸಿದ ಮಸೂದೆಗಳಿಗೂ ತಮಗೂ ಯಾವುದೇ ಸಂಬಂಧವಿರಲಿಲ್ಲವೇ? ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರಲು ತಾವು ನೀಡಿದ ಸಲಹೆಗಳೇನು? ಕ್ಷೇತ್ರದ ಯಾವೆಲ್ಲ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚೆಯಾಗುವಂತೆ ಮಾಡಿದೆ, ಯಾವೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಮೇಲೆ ಪ್ರಭಾವ ಬೀರಿದೆ ಎಂಬ ಕುರಿತು ಕೂಡ ಶಾಸಕರಾದವರು ಮತದಾರರಿಗೆ ತಿಳಿಸಬೇಕಲ್ಲವೇ? ಶಾಸನಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು, ಸರ್ಕಾರ ಮಂಡಿಸುವ ಮಸೂದೆಗಳ ಇತಿಮಿತಿಗಳ ಕುರಿತು ಮಾತನಾಡುವವರು, ರಾಜ್ಯದ ಹಿತದ ದೃಷ್ಟಿಯಿಂದ ಸರ್ಕಾರ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸುವವರು ನಮ್ಮನ್ನು ಪ್ರತಿನಿಧಿಸಬಾರದೇ?

ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವುದಾಗಿ ಹೇಳಿಕೊಂಡಿದ್ದ ಮತ್ತು ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾದರೆ ಮಾಡಲಿರುವ ಕೆಲಸಗಳ ಕುರಿತು ವಿವರಿಸಿದ್ದ ಪ್ರೀತಂ ಗೌಡ ಅವರು ಈ ಬಾರಿಯ ಚುನಾವಣೆಯಲ್ಲಿ ಸೋತಿದ್ದಾರೆ. ಗೆಲ್ಲುವ ವಿಶ್ವಾಸ ಹೊಂದಿದ್ದ ಅವರು, ಸೋತ ನಂತರ ಆಡಿದ ಮಾತುಗಳು ಗಮನಾರ್ಹ. “ಒಂದು ವರ್ಗದ ಜನ ಏನು ನಮಗೆ ತೋರಿಸಿದ್ದಾರೆ… ಆ ವರ್ಗದ ಜನರಿಗೆ ನಾವೇನು ಅಂತ ಮುಂದೆ ತೋರಿಸುತ್ತೇನೆ,” ಎಂದು ಪ್ರೀತಂ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ. ಮುಸ್ಲಿಮರು ತಮಗೆ ಮತ ಚಲಾಯಿಸದೆ, ಜೆಡಿಎಸ್ ಅಭ್ಯರ್ಥಿಗೆ ಸಾಮೂಹಿಕವಾಗಿ ಬೆಂಬಲ ನೀಡಿರುವುದು ಅವರ ಆಕ್ರೋಶಕ್ಕೆ ಕಾರಣ. ಬಿಜೆಪಿ ಸರ್ಕಾರ ಮುಸ್ಲಿಮರನ್ನು ಗುರಿಯಾಗಿಸಿ ರೂಪಿಸಿದ ನೀತಿಗಳ ಕುರಿತು ಎಂದಿಗೂ ಅಪಸ್ವರ ಎತ್ತದ ಮತ್ತು ಈ ಬಾರಿ ಅಧಿಕಾರಕ್ಕೆ ಬಂದರೆ ಪೌರತ್ವ ಕಾಯ್ದೆ ಜಾರಿಗೆ ತರುವುದಾಗಿ ಘೋಷಿಸಿದ ಪಕ್ಷದ ಅಭ್ಯರ್ಥಿಗೆ ಮುಸ್ಲಿಮರು ಮತ ಚಲಾಯಿಸಬೇಕೆಂದು ನಿರೀಕ್ಷಿಸುವುದು ಹೊಣೆಗೇಡಿತನವಲ್ಲವೇ? ಮುಸ್ಲಿಮರ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಚದುರಿ ಹೋದರೆ ತಮ್ಮ ಗೆಲುವು ಖಚಿತವೆಂಬ ಲೆಕ್ಕಾಚಾರದಲ್ಲಿದ್ದ ಪ್ರೀತಂ ಗೌಡ ಅವರಿಗೆ, ಹಾಗಾಗದಿರುವುದು ಸಿಟ್ಟು ತರಿಸಿದೆ. ಬಿಜೆಪಿ ಶಾಸಕನಾಗಿದ್ದರೂ ಕೋಮುದ್ವೇಷ ಹರಡುವ ಕೆಲಸದಲ್ಲಿ ಬಹಿರಂಗವಾಗಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದನ್ನೇ ಮಾನದಂಡವಾಗಿ ಪರಿಗಣಿಸಿ, ಚುನಾವಣೆಯಲ್ಲಿ ಒಂದಿಷ್ಟು ಪ್ರಮಾಣದ ಮುಸ್ಲಿಮರಾದರೂ ತಮ್ಮ ಬೆಂಬಲಕ್ಕೆ ನಿಲ್ಲಬೇಕಿತ್ತು ಎಂಬುದು ಪ್ರೀತಂ ಗೌಡರ ನಿರೀಕ್ಷೆಯೇನೊ?

ಈ ಆಡಿಯೊ ಕೇಳಿದ್ದೀರಾ?: ಅರ್ಥ ಪಥ | ಭ್ರಮೆಯನ್ನು ಮಾರುವವರ ನಡುವೆ ಪ್ರಜಾಸತ್ತೆ ಉಳಿಸಿಕೊಳ್ಳುವ ದಾರಿ ಯಾವುದು?

ಇಲ್ಲಿ ಗಮನಿಸಬೇಕಿರುವ ಮತ್ತೊಂದು ಅಂಶವೆಂದರೆ, ಜನಪ್ರತಿನಿಧಿಗಳು ಸಮಸ್ಯೆಗಳಿಗೆ ವ್ಯವಸ್ಥೆಯ ಹಂತದಲ್ಲಿ ಪರಿಹಾರ ಕಂಡುಹಿಡಿಯುವ ಬದಲಿಗೆ ವ್ಯಕ್ತಿಗತ ನೆಲೆಯಲ್ಲಿ ಅವುಗಳನ್ನು ಪರಿಹರಿಸಲು ತೋರುವ ಉತ್ಸಾಹ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ, ಸಮಸ್ಯೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ಕಲ್ಪಿಸುವುದು ಶಾಸಕರಿಗೆ ಆದ್ಯತೆಯಾಗಲಿಲ್ಲ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸರ್ಕಾರದ ವತಿಯಿಂದ ಹೀಗೆಲ್ಲ ಮಾಡಲಾಗುವುದು ಎಂದು ವಿವರಿಸುವ ಬದಲಿಗೆ, ಶಾಸಕರೊಬ್ಬರು ಎನ್‍ಜಿಒ ತೆರೆದು ಅದರ ಮೂಲಕ ಗುಣಮಟ್ಟ ಸುಧಾರಿಸುವ ಕೆಲಸ ಮಾಡಲಾಗುವುದು ಎನ್ನಬಹುದೇ?

ಆಡಳಿತಾತ್ಮಕ ಸಮಸ್ಯೆಗಳನ್ನು ವ್ಯವಸ್ಥೆಯ ಹಂತದಲ್ಲಿ ಪರಿಹರಿಸಲು ಏನು ಮಾಡಬೇಕು ಎಂದು ಚಿಂತಿಸುವುದು ಶಾಸಕರ ಆದ್ಯತೆಯಾಗಬೇಕಲ್ಲವೇ? ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಂತಹ ಸ್ಥಳೀಯ ಆಡಳಿತ ವ್ಯವಸ್ಥೆ ನಿರ್ವಹಿಸಬೇಕಿರುವ ಕೆಲಸಗಳನ್ನು ಶಾಸಕರು ಮತ್ತು ಸಂಸದರು ವ್ಯಕ್ತಿಗತ ನೆಲೆಯಲ್ಲಿ ಮಾಡುವುದೇ ದೊಡ್ಡ ಸಾಧನೆಯಾಗಿ ಬಿಂಬಿತವಾಗುವುದು ಸಮಸ್ಯಾತ್ಮಕವಾಗಿ ತೋರುವುದಿಲ್ಲವೇ? ಶಾಸಕರು ಮತ್ತು ಸಂಸದರನ್ನು ಆರಿಸುವಾಗ ರಾಜ್ಯ ಮತ್ತು ದೇಶ ಆಳಲು ಬೇಕಿರುವ ನೀತಿ ನಿಯಮಗಳನ್ನು ರೂಪಿಸುವ, ವಿಶ್ಲೇಷಿಸುವ ಸಾಮರ್ಥ್ಯ ಇವರಲ್ಲಿದೆಯೇ ಎಂದು ಕೂಡ ಮತದಾರರು ಯೋಚಿಸಬೇಕಲ್ಲವೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಚ್ ಕೆ ಶರತ್
ಎಚ್ ಕೆ ಶರತ್
ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಷ್ಟ್ರು. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಣಿಯದ ಆಸಕ್ತಿ. ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೊಂದು ಇಷ್ಟದ ಕಸುಬು.

2 COMMENTS

    • ಧನ್ಯವಾದ ಸರ್. ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X