ಮೈಕ್ರೋಸ್ಕೋಪು | ಹೆಣ್ಣು-ಗಂಡಿನ ಕುರಿತು ಸಿಜೆಐ ಹೇಳಿದ ಮಾತು ಮತ್ತು ಬಯಾಲಜಿ

Date:

ವಿವಾಹ ಎನ್ನುವುದು ಗಂಡು-ಹೆಣ್ಣಿನ ನಡುವೆಯಷ್ಟೇ ಆಗಬೇಕು ಎಂಬ ವಾದದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನಾಯಮೂರ್ತಿ ಹೇಳಿದ ಮಾತು ಚರ್ಚೆಗೊಳಗಾಗಿದೆ. ಆದರೆ, ಅವರ ಮಾತು ಜೀವಶಾಸ್ತ್ರದ ಪ್ರಕಾರ ಸಹಜ ಸತ್ಯ! ಅದು ಹೇಗೆ ಎಂಬ ಸ್ವಾರಸ್ಯಕರ ವಿವರ ಇಲ್ಲುಂಟು

“ಲಿಂಗವೆನ್ನುವುದು absolute ಅಲ್ಲ,” ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹೇಳಿದ ಮಾತು ಇತ್ತೀಚೆಗೆ ಸುದ್ದಿಯಾಗಿತ್ತು. ಸಲಿಂಗಿಗಳ ವಿವಾಹದ ಕುರಿತು ನಡೆಯುತ್ತಿರುವ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ವಾದ, ವಿವಾದಗಳನ್ನು ಸುಪ್ರೀಂ ಕೋರ್ಟು ಆಲಿಸುತ್ತಿತ್ತು. ವಿವಾಹ ಎನ್ನುವುದು ಗಂಡು ಮತ್ತು ಹೆಣ್ಣು ಎನ್ನುವ ಲಿಂಗಗಳ ನಡುವೆಯಷ್ಟೇ ಆಗಬೇಕು ಎಂಬ ವಾದದ ಸಂದರ್ಭದಲ್ಲಿ ಸಿಜೆಐ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು. “ಗಂಡು ಎಂಬುದಾಗಲೀ, ಹೆಣ್ಣು ಎಂಬುದಾಗಲೀ ಅಬ್ಸೊಲ್ಯೂಟ್‌ ಅಲ್ಲ,” ಎಂಬುದು ಅವರ ಹೇಳಿಕೆಯಾಗಿತ್ತು.

‘ಅಬ್ಸೊಲ್ಯೂಟ್‌ (absolute)’ ಎಂದರೇನು? ಮೈಸೂರು ವಿಶ್ವವಿದ್ಯಾನಿಲಯದ ನಿಘಂಟು ಹಲವು ಅರ್ಥಗಳನ್ನು ಪಟ್ಟಿ ಮಾಡುತ್ತದೆ. ಸಮಗ್ರ, ಸಂಪೂರ್ಣ, ಪರಿಪೂರ್ಣ ಹಾಗೂ ದೋಷರಹಿತ ಎನ್ನುವುದು ಒಂದರ್ಥ. ಇನ್ನೊಂದರ್ಥವೂ ಇದೆ. ತಾಜಾ, ಅಪ್ಪಟ, ಶುದ್ಧ ಬೆರಕೆಯಿಲ್ಲದ ಅಂತ. ಮೂರನೆಯ ಅರ್ಥ ಅಬಾಧಿತ, ನಿರ್ಬಂಧಿತ, ಅಂಕೆ ಇಲ್ಲದ, ನಿರಂಕುಶ, ಸ್ವೇಚ್ಛಾಚಾರಿ ಅಂತಲೂ ಆಗುತ್ತದೆ. ನಿರಪೇಕ್ಷ, ಸಾಪೇಕ್ಷವಲ್ಲದ ಅಂದರೆ, ಇತರದ್ದರ ಜೊತೆಗೆ ಹೋಲಿಸಲಾಗದ ಅಂತಲೂ ಇದೆ. ಇವೆಲ್ಲವನ್ನೂ ತೆಗೆದುಕೊಂಡರೆ, ಸಿಜೆಐ ಮನಸ್ಸಿನಲ್ಲಿ ಏನಿತ್ತು ಎನ್ನುವುದು ಗೊಂದಲವಾಗುವ ವಿಷಯ.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು

ಆದರೆ, ಸಿಜೆಐ ಮಾತನ್ನು ಬೇರೆ-ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಹಲವರು ಕೊಂಕು ನುಡಿದಿದ್ದೂ ಉಂಟು. “ಹಾಗಿದ್ದರೆ, ನಾವು ಮನಸ್ಸಿನಲ್ಲಿ ಗಂಡು ಎಂದುಕೊಂಡರೆ ಗಂಡು, ಹೆಣ್ಣು ಎಂದುಕೊಂಡರೆ ಹೆಣ್ಣಾಗಿಬಿಡುತ್ತೇವೆಯೇ?” ಎಂದು ಕೇಳಿದವರೂ ಇದ್ದಾರೆ. “ಸಿಜೆಐ ಕಾನೂನು ಮಾತನಾಡುತ್ತಿದ್ದರೋ, ಬಯಾಲಜಿ ಮಾತನಾಡುತ್ತಿದ್ದರೋ?” ಎಂದು ಕೆಲವರು ಆಡಿಕೊಂಡದ್ದೂ ಉಂಟು. ಆದರೆ, ಬಯಾಲಜಿಯ ವಿಷಯಕ್ಕೆ ಬಂದಾಗ, ಸಿಜೆಐ ಮಾತು ಸಂಪೂರ್ಣ ಸತ್ಯ. ಈ ಜಗತ್ತಿನಲ್ಲಿ ಗಂಡು ಎಂದರೆ ಇಂಥದ್ದೇ ಎಂದೋ, ಹೆಣ್ಣು ಎಂದರೆ ಹೀಗೇ ಎಂದೋ ಹೇಳುವುದು ಸಾಧ್ಯವೇ ಇಲ್ಲ. ಗಂಡು, ಹೆಣ್ಣು ಎನ್ನುವುದು ಒಂದರ್ಥದಲ್ಲಿ ಸಾಪೇಕ್ಷವೂ ಹೌದು, ನಿರಪೇಕ್ಷವೂ ಹೌದು, ಪರಿಪೂರ್ಣವೂ ಹೌದು ಎನ್ನುತ್ತವೆ ಜೀವಿವಿಜ್ಞಾನದ ಸಂಶೋಧನೆಗಳು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗಂಡು ಎಂದರೆ ಏನು? ಗಂಡು-ಹೆಣ್ಣು ಎನ್ನುವ ಭೇದ ಜೀವಿಗಳಲ್ಲಿ ಏಕೆ ಇದೆ? ಈ ಭೇದ ಹುಟ್ಟಿದ್ದಾದರೂ ಹೇಗೆ, ಏಕೆ? ಇದರಿಂದ ಜೀವಿಗಳಿಗೆ ಲಾಭವೇನು? ಹುಟ್ಟುವ ಜೀವಿ ಗಂಡೇ ಆಗಬೇಕು ಅಥವಾ ಹೆಣ್ಣೇ ಆಗಬೇಕು ಎಂದು ತೀರ್ಮಾನಿಸುವವರು ಯಾರು ಮತ್ತು ಹೇಗೆ… ಇತ್ಯಾದಿ ಪ್ರಶ್ನೆಗಳಿವೆ. ಗಂಡು-ಹೆಣ್ಣು ಹೇಗೆ ಜನಿಸುತ್ತವೆ ಎನ್ನುವ ಬಗ್ಗೆ ನಮಗೆ ಸ್ವಲ್ಪ ಸ್ಪಷ್ಟವಾಗಿ ತಿಳಿದದ್ದು ಕೇವಲ ಇಪ್ಪತ್ತನೆಯ ಶತಮಾನದಲ್ಲಿ. ಅದಕ್ಕೂ ಮುನ್ನ, ತಾಯಿ ಬಲಕ್ಕೆ ಮಲಗಿದರೆ ಗಂಡು, ಎಡಕ್ಕೆ ಮಲಗಿದರೆ ಹೆಣ್ಣು ಅಂತಲೋ, ಗರ್ಭ ಧರಿಸಿದ ಗಳಿಗೆ ಅಂತಲೋ, ಬಸುರಿಯ ಊಟದ ಫಲ ಅಂತಲೋ ತೀರ್ಮಾನಿಸಿಬಿಡುತ್ತಿದ್ದರು. ಆದರೆ, ಇಪ್ಪತ್ತನೆಯ ಶತಮಾನದಲ್ಲಿ ಕ್ರೊಮೊಸೋಮುಗಳು ಅಥವಾ ವರ್ಣತಂತುಗಳೆನ್ನುವ ವಸ್ತುಗಳ ಪತ್ತೆ ಆದ ಮೇಲೆ ಈ ಎಲ್ಲ ನಂಬಿಕೆಗಳಿಗೂ ಕೊಡಲಿಯೇಟು ಬಿತ್ತು.

ಸಿಜೆಐ
ಕ್ರೊಮೋಸೋಮುಗಳ ವರ್ಣಚಿತ್ರ | ಚಿತ್ರ ಕೃಪೆ: ಎಬಿಸಿ ಜಾಲತಾಣ

ವರ್ಣತಂತುಗಳು ಎಂದರೆ ಇನ್ನೇನಲ್ಲ; ನಮ್ಮ ಅಮ್ಮ-ಅಪ್ಪಂದಿರು ನಮಗೆ ಇತ್ತ ವಂಶಪಾರಂಪರ್ಯ ಕೊಡುಗೆ. ನಮ್ಮೆಲ್ಲ ಗುಣಾವಗುಣಗಳನ್ನೂ ಇವುಗಳಲ್ಲಿ ಇರುವ ಜೀನುಗಳೇ ನಿರ್ಧರಿಸುತ್ತವೆ ಎನ್ನುವುದು ಈಗ ಸ್ಪಷ್ಟ. ನಾವು ಗಂಡಾಗಿ ಹುಟ್ಟುತ್ತೇವೆಯೋ, ಹೆಣ್ಣಾಗಿಯೋ ಎನ್ನುವುದಕ್ಕೂ ಈ ವರ್ಣತಂತುಗಳೇ ಕಾರಣ. ನಾವು ಪ್ರತಿಯೊಬ್ಬರಲ್ಲಿಯೂ ಕೋಟ್ಯಂತರ ಜೀವಕೋಶಗಳಿವೆ ಎನ್ನುವುದು ಗೊತ್ತಷ್ಟೆ. ಈ ಪ್ರತಿಯೊಂದು ಜೀವಕೋಶದಲ್ಲಿಯೂ ನಲವತ್ತಾರು ವರ್ಣತಂತುಗಳಿರುತ್ತವೆ. ಅಂದರೆ, ಇಪ್ಪತ್ತಮೂರು ಜೋಡಿ. ಇವುಗಳಲ್ಲಿ ಒಂದೇ ಒಂದು ಜೋಡಿ ಮಾತ್ರ ಗಂಡಸರಲ್ಲಿ ಬೇರೆ, ಹೆಂಗಸರಲ್ಲಿ ಬೇರೆಯಾಗಿ ಕಾಣುತ್ತದೆ. ಈ ಭಿನ್ನವಾಗಿರುವ ಜೋಡಿಗಳನ್ನೇ ಲಿಂಗ ವರ್ಣತಂತು ಅಥವಾ ಸೆಕ್ಸ್‌ ಕ್ರೊಮೋಸೋಮುಗಳು ಎನ್ನುತ್ತಾರೆ. ವಿಶೇಷ ಎಂದರೆ, ಗಂಡಸರಲ್ಲಿ ಈ ಜೋಡಿಯ ಕ್ರೊಮೋಸೋಮುಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಜೋಡಿಯ ಎರಡೂ ಕ್ರೊಮೋಸೋಮುಗಳೂ ಉದ್ದ, ಆಕಾರದಲ್ಲಿ ಬೇರೆ-ಬೇರೆಯಾಗಿ ತೋರುತ್ತವೆ. ಹೆಂಗಸರ ಸೆಕ್ಸ್‌ ಕ್ರೊಮೋಸೋಮುಗಳ ಜೋಡಿಯ ಎರಡೂ ಒಂದೇ ತೆರನಾಗಿ ಕಾಣುತ್ತವೆ. ಇದು ವರ್ಣತಂತುಗಳ ಮಟ್ಟದಲ್ಲಿ, ಜೀವಕೋಶದಲ್ಲಿ, ಗಂಡು-ಹೆಣ್ಣುಗಳ ನಡುವೆ ತೋರುವ ವ್ಯತ್ಯಾಸ.

ಈ ವ್ಯತ್ಯಾಸದ ಅರಿವು ನಮಗೆ ಆಗಿದ್ದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ; ಸರಿಯಾಗಿ ಸುಮಾರು ನೂರು ವರ್ಷಗಳ ಹಿಂದೆ, 1930ರ ದಶಕದಲ್ಲಿ ನೊಣಗಳಲ್ಲಿ ನಡೆದ ಸಂಶೋಧನೆಗಳ ಫಲವಾಗಿ. ಸೆಕ್ಸ್‌ ಕ್ರೊಮೊಸೋಮುಗಳೇ ನೊಣಗಳಲ್ಲಿ ಗಂಡಾಗಿ ಬೆಳೆಯುವುದು ಯಾವುದು, ಹೆಣ್ಣಾಗಿ ಬೆಳೆಯುವುದು ಯಾವುದೆಂದು ತೀರ್ಮಾನಿಸುತ್ತಿರಬಹುದು ಎನ್ನುವ ಅಂದಾಜು ಈ ಪ್ರಯೋಗಗಳಿಂದ ಸಿಕ್ಕಿತ್ತು. ಅನಂತರದ ಸಂಶೋಧನೆಗಳು, ನೊಣಗಳಲ್ಲಿಯಷ್ಟೇ ಅಲ್ಲ, ಮನುಷ್ಯರಲ್ಲಿಯೂ, ಇನ್ನೂ ಹಲವು ಇತರೆ ಜೀವಿಗಳಲ್ಲಿಯೂ ಒಂದು ಜೋಡಿ ಕ್ರೊಮೋಸೋಮು ಗಂಡುಗಳಲ್ಲಿಯೇ ಬೇರೆ, ಹೆಣ್ಣುಗಳಲ್ಲಿಯೇ ಬೇರೆಯಾಗಿರುತ್ತವೆ ಎಂದು ತಿಳಿಸಿತ್ತು. ಅಂದರೆ, ನಮ್ಮ ದೇಹದಲ್ಲಿರುವ ಎಲ್ಲ ಜೀವಕೋಶಗಳೂ, ಗಂಡಸರಲ್ಲಿ ಗಂಡುಕೋಶಗಳಾಗಿ, ಹೆಂಗಸರಲ್ಲಿ ಹೆಣ್ಣುಕೋಶಗಳಾಗಿರುತ್ತವೆ.

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ನೀವು ಯಾವತ್ತಾದರೂ ಬಸ್ಸಿನಲ್ಲಿ ಪಯಣಿಸುವ ಮಹಿಳೆಯ ಸ್ಥಾನದಲ್ಲಿ ನಿಂತು ಯೋಚಿಸಿದ್ದೀರಾ?

ಗಂಡಸರು ಮತ್ತು ಹೆಂಗಸರ ದೇಹದಲ್ಲಿರುವ ಎಲ್ಲ ಜೀವಕೋಶಗಳೂ ಈ ರೀತಿಯಲ್ಲಿ ಬೇರೆ-ಬೇರೆ ಲಿಂಗದವು. ಅಪರೂಪಕ್ಕೆ, ಹೆಣ್ಣಿನಲ್ಲಿ ಜೋಡಿಯ ಬದಲು ಮೂರು ಅಥವಾ ಒಂದೇ ಕ್ರೊಮೋಸೋಮು ಇದ್ದು, ಅತ್ತ ಗಂಡೂ ಅಲ್ಲ-ಇತ್ತ ಹೆಣ್ಣೂ ಅಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗಬಹುದು. ಅಂತಹ ಸಂದರ್ಭದಲ್ಲಿಯೂ ದೇಹದ ಎಲ್ಲ ಜೀವಕೋಶಗಳೂ ಒಂದೇ ತೆರನಾಗಿರುತ್ತವೆ – ಅರೆಲಿಂಗಿಗಳಾಗಿರುತ್ತವೆ.  ಲಿಂಗ ಎಂಬುದು ಅಬ್ಸೊಲ್ಯೂಟ್‌ ಅಲ್ಲ ಎಂಬುದು ಜೀವಿವಿಜ್ಞಾನಿಗಳಿಗೆ ಹೀಗೆ ಸಹಜವಾಗಿಯೇ ತಿಳಿದ ವಿಷಯ.

ಇತ್ತೀಚೆಗೆ ಇರುವೆಗಳಲ್ಲಿ ನಡೆದ ಶೋಧವೊಂದಂತೂ, ಗಂಡು ಅಥವಾ ಹೆಣ್ಣು ಎನ್ನುವುದರ ವಿವರಣೆಯನ್ನೇ ತಲೆಕೆಳಗು ಮಾಡಿಬಿಟ್ಟಿದೆ. ಇರುವೆಗಳ ಸಾ‍ಮ್ಯಾಜ್ಯದಲ್ಲಿ ಗಂಡೇ ಇಲ್ಲ. ಗಂಡು ಹುಟ್ಟಿದರೂ ಅದು ಅಲ್ಪಾಯುಷಿ ಅಥವಾ ಗೂಡಿನಿಂದ ಹೊರಗೆ ಬದುಕುವ ಅಲೆಮಾರಿ. ಈ ಗಂಡುಗಳೆಲ್ಲವೂ ನಮ್ಮ-ನಿಮ್ಮಂತೆ ಸೆಕ್ಸ್‌ ಕ್ರೊಮೋಸೋಮುಗಳಿಂದಾಗಿ ಹೀಗಾಗಿರುತ್ತವೆ. ಗೂಡಿನಲ್ಲಿ ಇರುವ ಉಳಿದೆಲ್ಲವೂ ಹೆಣ್ಣುಗಳು. ಗಂಡುಗಳಲ್ಲಿ ಕೇವಲ ತಂದೆಯ ಪಾಲಿನ ಅರೆಜೋಡಿ ಕ್ರೊಮೋಸೋಮು ಮಾತ್ರ ಇರುತ್ತವೆ. ಈ ಬಗೆಯಲ್ಲಿ ಅರ್ಧಂಬರ್ಧ ಕ್ರೊಮೊಸೋಮುಗಳಷ್ಟೇ ಇರುವ ಇರುವೆಗಳನ್ನು ‘ಹ್ಯಾಪ್ಲಾಯಿಡ್‌’ ಎನ್ನುತ್ತಾರೆ. ಗೂಡಿನಲ್ಲಿ ರಾಣಿಯ ಹೊರತಾಗಿ ಉಳಿದೆಲ್ಲ ಇರುವೆಗಳೂ ಗುಲಾಮ ಹೆಣ್ಣುಗಳು. ಗಂಡುಗಳು ಗೂಡಿನಲ್ಲಿ ಇರುವುದೇ ಇಲ್ಲ. ಯಾವುದಾದರೂ ಹೆಣ್ಣನ್ನು ಜೋಡಿ ಮಾಡಿಕೊಂಡು ಹಾರಿಹೋಗುತ್ತವೆ. ಆ ಹೆಣ್ಣು ಮುಂದೆ ರಾಣಿಯಾಗುತ್ತದೆ. ಗಂಡಿನ ಬಾಳು ಕ್ಷಣಿಕ. ಈಗ ಗೊತ್ತಾಯಿತಲ್ಲ? ಲಿಂಗ ಎನ್ನುವುದು ಅಬ್ಸೊಲ್ಯೂಟ್‌ ಅಲ್ಲವೇ ಅಲ್ಲ.

ಸಿಜೆಐ
ಇರುವೆಗಳು | ಸಾಂದರ್ಭಿಕ ಚಿತ್ರ

ಇರುವೆಗಳಲ್ಲಿನ ಈ ನಿಯಮವೇ ವಿಚಿತ್ರ. ಇದಕ್ಕಿಂತ ವಿಚಿತ್ರ ಲಿಂಗ ನಿರ್ಧಾರಣೆಯ ನಿಯಮ ಇದೆ ಎಂಬ ಶೋಧವನ್ನು ಇತ್ತೀಚೆಗೆ ‘ಸೈನ್ಸ್‌’ ಪತ್ರಿಕೆ ವರದಿ ಮಾಡಿತ್ತು. ಜರ್ಮನಿಯ ಜೋಹಾನ್ಸ್‌ ಗುಟೆನ್‌ಬರ್ಗ್‌ ವಿಶ್ವವಿದ್ಯಾಲಯದ ಜೀವಿವಿಜ್ಞಾನಿಗಳು ‘ಅನಾಪ್ಸೊಲೆಪ್ಸಿಸ್‌ ಗ್ರೇಸಿಲೆಪ್ಸ್‌’ ಎನ್ನುವ, ಇಂಗ್ಲೀಷಿನಲ್ಲಿ ‘ಯೆಲ್ಲೋ ಆಂಟ್ಸ್‌’ ಎಂದು ಜನಪ್ರಿಯವಾದ ಇರುವೆಗಳ ಗಂಡುಗಳು ಅರ್ಧನಾರೀಶ್ವರರಂತೆ ಎಂಬುದು ಹೊಸ ಸಂಶೋಧನೆ. ಈ ಇರುವೆಯ ಗಂಡುಗಳಲ್ಲಿ, ಕೆಲವು ಜೀವಕೋಶಗಳು ಅರ್ಥಾತ್‌ ಅಂಗಗಳು ಗಂಡು.

ಸಾಮಾನ್ಯವಾಗಿ ಯಾವುದೇ ಜೀವಿ ಹುಟ್ಟಬೇಕಿದ್ದರೂ ಗಂಡಿನ ವೀರ್ಯ ಮತ್ತು ಹೆಣ್ಣಿನ ಅಂಡಾಣುಗಳು ಕೂಡಿ ಆಗುವ ಒಂದು ಕೋಶದಿಂದ ಬೆಳೆಯುತ್ತವೆ. ಈ ಎಲ್ಲ ಕೋಶಗಳೂ ಸಂತಾನಾಭಿವೃದ್ಧಿ ಮಾಡಿ ಬೆಳೆದ ಕೋಶಗಳು ವಿವಿಧ ಅಂಗಗಳಾಗಿ ಸಂಘಟನೆಯಾಗಿ ಇಡೀ ಜೀವಿ ರೂಪುಗೊಳ್ಳುತ್ತದೆ; ಮನುಷ್ಯನಲ್ಲಿಯೂ ಅಷ್ಟೆ, ಇರುವೆಯಲ್ಲಿಯೂ ಅಷ್ಟೆ. ಆದರೆ, ಇರುವೆಗಳಲ್ಲಿ ರಾಣಿಯಲ್ಲಿರುವ ಕ್ರೊಮೊಸೋಮುಗಳು ತಂದೆಯ ಒಂದು ಜೋಡಿ, ತಾಯಿಯ ಇನ್ನೊಂದು ಜೋಡಿ ಸೇರಿ ಆದಂಥವು. ಅದರಲ್ಲಿ ಇರುವ ಸೆಕ್ಸ್‌ ಕ್ರೊಮೊಸೋಮುಗಳು ಒಂದೇ ತೆರನಾಗಿರುತ್ತವೆ. ಆದರೆ, ಗುಲಾಮಗಿರಿ ಮಾಡುವ ಇತರೆ ಹೆಣ್ಣುಗಳಲ್ಲಿ ಗಂಡಿನದ್ದೂ ಒಂದು ಸೆಕ್ಸ್‌ ಕ್ರೊಮೋಸೋಮು ಇರುತ್ತದೆಯಂತೆ. ಇದರಲ್ಲಿ ಅಧಿಕವಾಗಿ ಇರುವ ಕೆಲವು ಜೀನ್‌ಗಳು ಹೆಣ್ಣುಗಳು ರಾಣಿಯಾಗದೆ ಗುಲಾಮರಾಗಿಯೇ ಇರುವಂತೆ ಮಾಡಿಬಿಡುತ್ತದೆ ಎಂದು ಈ ಸಂಶೋಧನೆ ನಡೆಸಿರುವ ಲಾರೆಂಟ್‌ ಕೆಲ್ಲರ್‌ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ನೋಡಿ… ಲಿಂಗ ಒಂದೇ; ಆದರೆ ವಿಧಿ ಬೇರೆ-ಬೇರೆ.

ಈ ಆಡಿಯೊ ಕೇಳಿದ್ದೀರಾ?: ನಮ್ ಜನ | ಒಂಟಿ ಕಣ್ಣಿನ ಒಬ್ಬಂಟಿ ಬದುಕಿನ ಆಟೋ ಗೌಸ್ ಸಾಹೇಬ್ರು

ಅದಷ್ಟೇ ಅಲ್ಲ. ಗಂಡು ಇರುವೆಗಳ ಕತೆ ಇನ್ನೂ ವಿಚಿತ್ರ. ಸಾಮಾನ್ಯವಾಗಿ ಇರುವೆಗಳ ಗಂಡುಗಳು ವೀರ್ಯದ ಜೊತೆ ಕೂಡದ ಅಂಡದಿಂದಲೇ ಹುಟ್ಟುತ್ತವೆ. ಇವುಗಳಲ್ಲಿ ಕೇವಲ ತಂದೆಯ ಕ್ರೊಮೋಸೋಮುಗಳಷ್ಟೇ ಇರುತ್ತವೆ. ಹೀಗಾಗಿ, ಇವೆಲ್ಲವೂ ಹ್ಯಾಪ್ಲಾಯಿಡ್‌ ಅಥವಾ ಅರೆತಳಿಯವು. ಆದರೆ, ಈ ಯೆಲ್ಲೋ ಆಂಟ್ಸ್ ಗಂಡುಗಳ ಕೆಲವು ಕೋಶಗಳಲ್ಲಿ ಕೇವಲ ತಾಯಿಯ ಕ್ರೊಮೊಸೋಮುಗಳು ಮತ್ತು ಇನ್ನು ಕೆಲವದರಲ್ಲಿ ತಂದೆಯವು ಇರುತ್ತವಂತೆ. ಅಂದರೆ, ಇವು ಅಂಡ ಮತ್ತು ವೀರ್ಯ ಕೂಡಿ ಹುಟ್ಟಿದವಾಗಿರಬೇಕು. ಆದರೆ, ಅನಂತರ ಬೆಳೆಯುವಾಗ ಇವೆರಡೂ ಕ್ರೊಮೋಸೋಮು ತಂಡಗಳೂ ಬೇರೆ-ಬೇರೆಯಾಗಿ, ಬೇರೆ-ಬೇರೆ ಜೀವಕೋಶಗಳಾಗಿಯೇ ಉಳಿಯುತ್ತವೆ. ಹೀಗೆ, ಇಡೀ ದೇಹ ಗಂಡುಕೋಶಗಳು ಮತ್ತು ಹೆಣ್ಣುಕೋಶಗಳ ಬೆರಕೆಯಾಗಿ ಇರುತ್ತದೆ. ಇದು ಇದುವರೆಗೂ ಯಾವುದೇ ಜೀವಿಯಲ್ಲಿಯೂ ಕಾಣದಿದ್ದ ವಿಚಿತ್ರ. ಲಿಂಗ ನಿರ್ಧಾರ ಅಬ್ಸೊಲ್ಯೂಟ್‌ ಅಲ್ಲವೇ ಅಲ್ಲ ಅಲ್ಲವೇ?

ಇದರಿಂದಾಗಿ ಈಗ ಲಿಂಗ ನಿರ್ದಾರ ಆಗುವುದಕ್ಕೆ ನಿಜವಾದ ಕಾರಣವೇನು? ಅದು ಆರಂಭವಾಗಿದ್ದು ಹೇಗೆ? ಇತ್ಯಾದಿ ಹೊಸ ಪ್ರಶ್ನೆಗಳು ಎದ್ದಿವೆ. ಆದರೆ, ಒಂದು ಮಾತಂತೂ ನಿಜ. ಲಿಂಗ ಯಾವುದೇ ಇರಲಿ, ಜೀವಿಜಗತ್ತಿನಲ್ಲಿ ಯಾವುವೂ ನಗಣ್ಯವಲ್ಲ. ಗಂಡು, ಹೆಣ್ಣು, ಅರೆಗಂಡು, ಅರೆಹೆಣ್ಣು, ಬೆರಕೆ ದೇಹ… ಎಷ್ಟೊಂದು ವಿಧ. ಸಿಜೆಐ ಹೇಳಿದ, “ಲಿಂಗ ಅಬ್ಸೊಲ್ಯೂಟ್‌ ಅಲ್ಲ,” ಎನ್ನುವ ಕಾನೂನಿನ, ಹಕ್ಕುಗಳ ಮಾತಿಗೂ, ಜೀವಿವಿಜ್ಞಾನಕ್ಕೂ ಎಷ್ಟೊಂದು ತಾಳೆ ಇದೆ ಅಲ್ಲವಾ?

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

2 COMMENTS

  1. ಲಿಂಗದ ಕುರಿತು ಒಳ್ಳೆಯ ಲೇಖನ. ಧನ್ಯವಾದಗಳು ಸರ್ 🙏

    • ಧನ್ಯವಾದ ಸರ್. ಈದಿನ.ಕಾಮ್‌ಗೆ ಭೇಟಿ ಕೊಟ್ಟಿದ್ದಕ್ಕಾಗಿ ನನ್ನಿ. ನಿಮ್ಮ ಇನ್ನಷ್ಟು ಪ್ರತಿಕ್ರಿಯೆಗಳಿಗಾಗಿ ಕಾಯ್ತಿರ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...