ರಾಜ್ಯೋತ್ಸವ ಪ್ರಶಸ್ತಿಗೆ ‘ಮಲಹೊರುವವರ ಯೋಗ್ಯತೆ’ ಬಗ್ಗೆ ಪ್ರಶ್ನೆ: ವಿವಾದದ ಕಿಡಿ ಹೊತ್ತಿಸಿದ ನಾಗೇಶ್ ಹೆಗಡೆ ಪೋಸ್ಟ್‌

Date:

Advertisements

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ‘ರಾಜ್ಯೋತ್ಸವ ಪ್ರಶಸ್ತಿ’ ಪಟ್ಟಿ ಪ್ರಕಟವಾಗಿದೆ. ಈ ಬಾರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಪಟ್ಟಿ ಪ್ರಕಟವಾದ ಬೆನ್ನಲ್ಲೇ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಹಿರಿಯ ಲೇಖಕ, ಪರಿಸರವಾದಿ ನಾಗೇಶ್ ಹೆಗಡೆಯವರು ಫೇಸ್‌ಬುಕ್‌ನಲ್ಲಿ ಹಾಕಿರುವ ಪೋಸ್ಟ್ ವಿವಾದಕ್ಕೆ ನಾಂದಿ ಹಾಡಿದೆ.

ನಾಗೇಶ ಹೆಗಡೆಯವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪ್ರಶಸ್ತಿ ಆಯ್ಕೆ ಮಾಡುವಾಗ ಎದುರಾಗಿದ್ದ ಸವಾಲುಗಳ ಕುರಿತು ಸುದೀರ್ಘವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಜೊತೆಗೆ ಈ ಪೋಸ್ಟ್‌ನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ‘ಮಲಹೊರುವವರ ಯೋಗ್ಯತೆ’ ಬಗ್ಗೆ ಬಂದಿದ್ದ ಚರ್ಚೆಯನ್ನೂ ಕೂಡ ಬರೆದುಕೊಂಡಿದ್ದಾರೆ. ಈ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವಿವಾದದ ಕಿಡಿಹೊತ್ತಿಸಿದೆ.

ತಮ್ಮ ಪೋಸ್ಟ್‌ನಲ್ಲಿ, “ಮಲ ಹೊರುವ ಶ್ರಮಿಕರಿಗೆ ವಯಸ್ಸಿನ ನಿರ್ಬಂಧ ಇರಲೇಬಾರದು, ಅವರಲ್ಲಿ 50 ವರ್ಷದಾಚೆ ಬದುಕುವುದೇ ಅಪರೂಪ; ಅಂಥವರಲ್ಲಿ ಯೋಗ್ಯರಾದ ಒಬ್ಬರಿಗೆ ಪ್ರಶಸ್ತಿ ಕೊಡಬೇಕು ಎಂಬ ಒತ್ತಾಯವೂ ಈ ವರ್ಷ ಬಂತು. ಅವರ ಕುರಿತು ನಮಗೆಲ್ಲ ಅನುಕಂಪ ಇರಬೇಕು. ಚರಂಡಿಯಲ್ಲಿ ಇಳಿಯುವ ಮುನ್ನ ಅಲ್ಲಿನ ವಿಷಾನಿಲವನ್ನು ಪತ್ತೆ ಮಾಡಬಲ್ಲ ಸರಳ ಸಾಧನಗಳನ್ನು ಅವರಿಗೆ ಕೊಡಬೇಕೆಂದು ನಾನು ಅನೇಕ ವಿಜ್ಞಾನ ವೇದಿಕೆಗಳಲ್ಲಿ ನಗರಪಾಲಿಕೆಗಳ, ಗುತ್ತಿಗೆದಾರರ ನಿಷ್ಕಾಳಜಿಯನ್ನು ಎತ್ತಿ ತೋರಿಸಿದ್ದೇನೆ. ನಗರದ ನರನಾಡಿಗಳನ್ನು ಶುದ್ಧ ಇಡಲೆಂದು ತಮ್ಮನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ ಅಂಥ ಶ್ರಮಜೀವಿಗಳಿಗೆ ಪ್ರಶಸ್ತಿಯನ್ನೂ ಕೊಡಬೇಕು ಸರಿ. ಆದರೆ ಅವರಲ್ಲಿ ಯೋಗ್ಯತೆಯ ಮಾನದಂಡ ಏನು? ಮಲಹೊರುವವರ ಕುಟುಂಬದಿಂದ ಬಂದ ಕೆಜಿಎಫ್‌ನ ಬೆಝ್‌ವಾಡಾ ವಿಲ್ಸನ್‌ ‘ಮ್ಯಾಗ್ಸೆಸೆ ಪ್ರಶಸ್ತಿ’ಯನ್ನು ಪಡೆದಿದ್ದು ನಮಗೆ ಗೊತ್ತಿದೆ. ಅವರಷ್ಟೆತ್ತರ ಏರದಿದ್ದರೂ ವಿಪರೀತ ಕುಡಿತದ ಚಟಕ್ಕೆ ಬೀಳದೆ, ತಮ್ಮ ಆರೋಗ್ಯವನ್ನೂ ಕೌಟುಂಬಿಕ ಜವಾಬ್ದಾರಿಯನ್ನೂ ಅರಿತು, ಮುಖವಾಡದಂಥ ಸುರಕ್ಷಾ ಸಾಧನಗಳನ್ನು ಧರಿಸಿಯೇ ಕೆಲಸಕ್ಕೆ ಇಳಿಯಬೇಕೆಂದು ಸಹೋದ್ಯೋಗಿಗಳ ಮನವೊಲಿಸಿ ಕೆಲಮಟ್ಟಿನ ಲೀಡರ್‌ಶಿಪ್‌ ತೋರಿದವರನ್ನು ಹುಡುಕಬೇಕು. ಅಂಥ ಜಾಗ್ರತಿ ಇರುವ, 60-70 ವರ್ಷ ಬದುಕಿರುವವರನ್ನು ಗುರುತಿಸಲು ದು. ಸರಸ್ವತಿಯಂಥ ಸಾಮಾಜಿಕ ಕಾರ್ಯಕರ್ತೆಯರ ನೆರವು ಪಡೆದರೆ 60-70 ವರ್ಷದ ಯೋಗ್ಯವ್ಯಕ್ತಿ ಸಿಕ್ಕೇ ಸಿಗುತ್ತಾರೆ. ಅವರಿಗೆಂದೇ ವಯೋಮಿತಿ ಸಡಿಲಿಸುವ ಅಗತ್ಯವಿರುವುದಿಲ್ಲ” ಎಂದು ಬರೆದುಕೊಂಡಿದ್ದರು.

Advertisements

ಇದಕ್ಕೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಇನ್ನೊಬ್ಬ ಸದಸ್ಯ, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್ ದ್ವಾರಕಾನಾಥ್ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ ಬರಹ ಓದಿ ನನಗೆ ಬಹಳ ಬೇಸರವಾಯಿತು’ ಎಂದು ಬರೆದುಕೊಂಡಿದ್ದಾರೆ.

“ನಿಮ್ಮ ಬರಹದಲ್ಲಿ ಉಲ್ಲೇಖಿಸಿರುವ ಮಲ ಹೊರುವವರ ಬಗ್ಗೆ ಈ ವಿಷಯ ಪ್ರಸ್ತಾಪಿಸಿದ್ದು ಆಯ್ಕೆ ಸಮಿತಿಯಲ್ಲಿದ್ದ ನಾನೇ. ಬೀದಿ ಗುಡಿಸುವ ಶಂಕ್ರಮ್ಮ ಮತ್ತು ಕಕ್ಕಸು ಗುಂಡಿಗೆ ಇಳಿಯುವ ರಂಗಸ್ವಾಮಿ ಇಬ್ಬರಿಗೂ ಅರವತ್ತು ವರ್ಷ ತುಂಬಿದ್ದು, ಈ ಇಬ್ಬರಿಗೂ ಕುಡಿಯುವ ಚಟ ಇದೆಯೋ ಇಲ್ಲವೋ ಅನ್ನುವುದು ನನಗೆ ಮುಖ್ಯವಲ್ಲ. ಕಕ್ಕಸ್ಸು ಗುಂಡಿಗೆ ಇಳಿದು ಮಲ ಬಾಚುವವರು ಕುಡಿಯದೇ ವೃತ್ತಿ ಮಾಡಲು ಹೇಗೆ ಸಾಧ್ಯ ಎನ್ನುವುದು ಇವರ ಬದುಕಿನ ಬಗ್ಗೆ ಕನಿಷ್ಠ ಅರಿವಿಲ್ಲದವರಿಗೆ ಅರ್ಥವಾಗಲ್ಲ. ಕಡೆಗೂ ಈ ನತದೃಷ್ಟರಿಬ್ಬರಿಗೂ ಪ್ರಶಸ್ತಿ ಸಿಗಲಿಲ್ಲ ಬಿಡಿ” ಎಂದಿದ್ದಾರೆ.

mala

ಅಲ್ಲದೇ, “ಅವರ ಯೋಗ್ಯತೆಯ ಮಾನದಂಡವೇನು? ಅಂತ ಕೇಳಿದ್ದೀರಿ. ಈ ನೆಲದ ಮೇಲಿನ ಹೊಲಸನ್ನು ತೆಗೆದು ಇಡೀ ಪರಿಸರವನ್ನು ಶುದ್ದವಾಗಿಡುವ ಕಾಯಕ ನಿಮಗೆ ಮಾನದಂಡವಾಗಿ ಕಾಣುವುದಿಲ್ಲವೆ? ನೀವು ಬರೆದಿರುವ ನಾನು ಕೋಟ್ ಮಾಡಿರುವ ಪ್ಯಾರಾಗ್ರಾಫ್ ಅನ್ನು ಮತ್ತೊಮ್ಮೆ ಓದಿಕೊಳ್ಳಿ. ನಿಮ್ಮಲ್ಲಿ ಇಂತಹ ಕಾಯಕ ಮಾಡುವ ಸಮುದಾಯಗಳ ಮೇಲಿರುವ ಅಸಹನೆಯ ದರ್ಶನವಾಗುತ್ತದೆ. ಇಲ್ಲಿ ಪ್ರಶಸ್ತಿ ವಿಜೇತರಲ್ಲಿ ಕುಡಿಯುವ ಚಟವಿರುವವರು ಇಲ್ಲವೇ? ನೀವು ಹೇಳಿದಂತೆ ಕುಡಿತವನ್ನೇ ಮಾನದಂಡವಾಗಿ ಇಟ್ಟುಕೊಂಡರೆ ಈ ಪಟ್ಟಿಯಲ್ಲಿ ಕನಿಷ್ಠ ಅರ್ಧ ಜನ ಅನರ್ಹರಾಗುತ್ತಾರೆ. ಕುಡಿತ ಕೇವಲ ಜಾಡಮಾಲಿಗಳನ್ನು ಪರಿಗಣಿಸುವಾಗ ಮಾತ್ರ ಮಾನದಂಡವಾಗುತ್ತದೆಯೇ? ನಿಮ್ಮ ಬರಹ ಓದಿ ನನಗೆ ಬಹಳ ಬೇಸರವಾಯಿತು” ಎಂದು ದ್ವಾರಕಾನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

ನಾಗೇಶ ಹೆಗಡೆಯವರ ಬರಹಕ್ಕೆ ಪ್ರತಿಕ್ರಿಯಿಸಿರುವ ಹಲವರು, “ನೀವು ತೀರ್ಪುಗಾರರಲ್ಲೊಬ್ಬರು ಅಂದಾದ ಮೇಲೆ, ಈ ರೀತಿಯ ಒಳ ಆಂತರಿಕ ಚರ್ಚೆಗಳು ಸಾರ್ವಜನಿಕವಾಗಬಾರದಿತ್ತು. ನಿಮ್ಮ ಉದ್ದೇಶ ಏನೇ ಇರಲಿ, ಲೇಖನದ ಧ್ವನಿ ನೀವಿರುವ ಎತ್ತರದಲ್ಲಿಲ್ಲ” ಎಂದು ತಿಳಿಸಿದ್ದಾರೆ.

ಅಲ್ಲದೇ, ನಾಗೇಂದ್ರ ಹೆಗಡೆಯವರ ಪೋಸ್ಟ್‌ ಬಗ್ಗೆ ತಮ್ಮ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ ಹಾಕಿರುವ ಸಿನಿಮಾ ಕಥೆಗಾರ ದಯಾನಂದ ಟಿ.ಕೆ, “ನಾಗೇಶ್ ಹೆಗಡೆಯವರ ಪೋಸ್ಟ್ ನೋಡಿದಾಗ, ಇವರು ತುಂಬ ಮಾನವೀಯ ವ್ಯಕ್ತಿತ್ವ ಉಳ್ಳ ಜನ ಅಂತ ಭ್ರಮಿಸಿಕೊಂಡಿದ್ದು ನಮ್ಮದೇ ತಪ್ಪು ಕಲ್ಪನೆಯಾ? ಅಂತ ಅನಿಸಿತು” ಎಂದು ಬೇಸರಿಸಿದ್ದಾರೆ.

chokka
ಡಾ ಸಿ ಎಸ್ ದ್ವಾರಕನಾಥ್ ಹಾಗೂ ದಯಾನಂದ ಟಿ ಕೆ

“ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಜ್ಯೂರಿ ಕಮಿಟಿಯಲ್ಲಿದ್ದ ಹೆಗಡೆಯವರಿಗೆ ಅದೇ ಕಮಿಟಿಯ ಮತ್ತೊಬ್ಬ ಸದಸ್ಯ ದ್ವಾರಕಾನಾಥ್ ಸರ್ ಮಲ ಹೊರುವ, ಕಸ ಬಳಿಯುವ ಒಬ್ಬ ದಲಿತರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾಕೆ ಕೊಡಬಾರದು ಎಂಬ ಮಾತು ಮುಂದಿಡುತ್ತಾರೆ. ಸದರಿ ಹೆಗಡೆಯವರು ಮಲ ಹೊರುವ, ಕಸ ಬಳಿಯುವ ಜಾಡಮಾಲಿಗಳ ಯೋಗ್ಯತೆ ಮಾನದಂಡದ ಬಗ್ಗೆ, ಅವರ ಆಯಸ್ಸಿನ ಬಗ್ಗೆ, ಕುಡಿತದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಸಮಾಜದ ಎಲ್ಲ ಹೊಲಸನ್ನು ಬರಿಗೈಲಿ ಸ್ವಚ್ಛ ಮಾಡಿ, ನಿಮ್ಮಂಥ ಸೋಫೆಸ್ಟಿಕೇಟೆಡ್ ಸುಸಂಸ್ಕೃತರಿಗೆ ಖಾಯಿಲೆ, ಕಸಾಲೆ ಬಾರದಂತೆ, ನೆಗೆದು ಬಿದ್ದು ಹೋಗದಂತೆ ನೋಡಿಕೊಳ್ಳುತಾರಲ್ಲ. ಇದಕ್ಕಿಂತ ಯೋಗ್ಯತೆಯ ಮಾನದಂಡ ಬೇಕೇ” ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಇದನ್ನು ಓದಿದ್ದೀರಾ? ದಾವಣಗೆರೆ | ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ರೂಪಿಸಬೇಕಿದೆ: ಬಸವರಾಜಪ್ಪ

“ನೀವು ಆಯ್ಕೆ ಮಾಡಿರುವವರಲ್ಲಿ ಇರುವ ಕೆಲ ಅನರ್ಹ ಐಟಂಗಳಿಗೆ ಹೋಲಿಸಿದರೆ ಮಲ ಹೊರುವ ರಂಗಸ್ವಾಮಿ, ಕಸ ಗುಡಿಸೋ ಶಂಕ್ರಮ್ಮನಂಥ ಜೀವಗಳು ಸಾವಿರ ಪಾಲು ಮೇಲು. ಒಂಥರದಲ್ಲಿ ಇದು ಒಳ್ಳೇದೇ ಆಯ್ತು. ಇಂಥ ಅನರ್ಹ ಆಯ್ಕೆಗಳ ಮಧ್ಯೆ, prejudised ಜೂರಿಗಳ ಪ್ರಶಸ್ತಿ ಪಡೆಯುವ ಅವಮಾನ ದಲಿತರಿಗೂ ಬೇಡವಾಗಿತ್ತು” ಎಂದು ಸಿನಿಮಾ ಕಥೆಗಾರ ದಯಾನಂದ ಟಿ.ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

5 COMMENTS

  1. ಹಿಂದುಳಿದ ಪಂಗಡದ ದುಡಿಯುವ ಹೆಚ್ಚು ಮಂದಿಗೆ “ಮೆಚ್ಚುಗೆ” ಸಿಗುವಂತಾಗಬೇಕು. ೫ ಲಕ್ಸದ ಬದಲು ೨ ಲಕ್ಸ ಕೊಟ್ಟರೆ ಸಾಕು

  2. ಅವರು ಒಳಗೆ ನಡೆದ‌ ಚರ್ಚೆಯನ್ನು ಬಹಿರಂಗಪಡಿಸಬಾರದಿತ್ತು. ಹಾಗೇ ಬಹಿರಂಗಪಡಿಸುವಾಗ ಸುಳ್ಳೇ ಹೇಳಬಹುದಿತ್ತು ಆದರೆ ಹೇಳಿಲ್ಲ. ಇಲ್ಲಿ ಯೋಗ್ಯತೆ‌ ಎಂದರೆ ಅವರು ಅದೇ ವೃತ್ತಿಯಲ್ಲಿರುವ ಇತರರಿಗಿಂತ ಹೇಗೆ ಭಿನ್ನ ಹಾಗೂ ಉನ್ನತ ಸಾಧನೆ ಮಾಡಿರುವವರು ಎಂದು. ಅದನ್ನು ಹೇಗೆ ನಿರ್ಧರಿಸುವುದು ಎಂದು. ಏಕೆಂದರೆ ಪ್ರಶಸ್ತಿ ಕೊಡಬೇಕಾಗಿರುವುದು ಅವರ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಎನ್ನುವುದನ್ನು ಮರೆಯಬಾರದು. ಹಾಗೆಯೇ ಅದು ಸಿಕ್ಕವರೆಲ್ಲಾ ಅಂತಹವರೇ ಎನ್ನುವುದೂ ಸತ್ಯವಲ್ಲ.

  3. The system of manual evacuation of sewage is itself a shame for the civilized society . In this era of 21st century with IT hubs Techno parks. Starts up. Why no one has initiated some alternative safe method? U civilized people can’t come up with modern solutions to clean up your own wastes? Ist it humiliating and disgusting to let someone else to clean manually our waste

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X