ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಸಿಗಲಿವೆ ಎಂದು, ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಪ್ರವಾಸೋದ್ಯಮ ಕ್ಷೇತ್ರದಲ್ಲಿ 1,500 ಕೋಟಿ ರೂಪಾಯಿಗಳ ಹೂಡಿಕೆ ಆಕರ್ಷಿಸಲು ಸರ್ಕಾರ ಉದ್ದೇಶಿಸಿದೆ. ಕರ್ನಾಟಕವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಉದ್ದೇಶಿಸಿದ್ದು. ಆ ಮೂಲಕ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಐದು ರಾಜ್ಯಗಳಲ್ಲಿ ಒಂದಾಗಿ ಕರ್ನಾಟಕದ ಕೊಡಗನ್ನು ಗುರುತಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ ವಿಚಾರದಲ್ಲಿ ದೇಶೀಯ ಪ್ರವಾಸಿಗರನ್ನು ಸೆಳೆಯುವುದು ಕೂಡ ನಮ್ಮ ಗುರಿಯಾಗಿದೆ. 48 ಕೋಟಿ ಸ್ಥಳೀಯ ಪ್ರವಾಸಿಗರನ್ನು ಸೆಳೆಯುವ ಗುರಿಯೊಂದಿಗೆ ಅಗ್ರ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆಯಲು ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು
ಮಾಹಿತಿ ನೀಡಿದ್ದಾರೆ.
ವಿಸ್ತೃತ ಚರ್ಚೆಯ ನಂತರ ಸಚಿವ ಸಂಪುಟವು ‘ಕರ್ನಾಟಕ ಪ್ರವಾಸೋದ್ಯಮ ನೀತಿ 2024-29’ ಅನ್ನು ಅನುಮೋದಿಸಿದೆ. ಈ ನೀತಿಯಡಿಯಲ್ಲಿ ಸಹಾಯಧನ ಮತ್ತು ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ಹೊಸ ಪ್ರವಾಸೋದ್ಯಮ ನೀತಿಯು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಯಸುತ್ತದೆ ಎಂದರು.
ಅಡ್ವೆಂಚರ್ ಟೂರಿಸಂ, ಕೃಷಿ, ಕಾರವಾನ್, ಕರಾವಳಿ, ಕಡಲತೀರ, ಪಾಕಪದ್ಧತಿ, ಸಾಂಸ್ಕೃತಿಕ, ಸಾಂಪ್ರದಾಯಿಕ, ಪರಿಸರ, ಶಿಕ್ಷಣ, ಚಲನಚಿತ್ರ, ಗಾಲ್ಫ್, ಕ್ರೀಡೆ, ಬುಡಕಟ್ಟು, ಮದುವೆಯ ತಾಣಗಳ ಅಭಿವೃದ್ಧಿ, ಆರೋಗ್ಯ ವಿಚಾರಗಳಿಗೆ ಉತ್ತೇಜನ ನೀಡುವ ಬಗ್ಗೆ ಹೊಸ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಕೊಡಗಿನಲ್ಲಿ ಕೂಡ ಎಲ್ಲಾ ಚಟುವಟಿಕೆಗಳಿಗೆ ಸರಕಾರದಿಂದ ಉತ್ತೇಜನ ದೊರಕುವ ನಿರೀಕ್ಷೆ ಇದೆ ಎಂದರು.
ಅಪಾರ್ಟ್‌ಮೆಂಟ್, ಹೋಟೆಲ್, ಸರ್ವೀಸ್ ಅಪಾರ್ಟ್‌ಮೆಂಟ್‌ಗಳು, ಅಕ್ವೇರಿಯಂ, ಬೀಚ್ ಶಾಕ್‌ಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಸಹಿತ ಪ್ರವಾಸೋದ್ಯಮ ಉತ್ತೇಜನಕ್ಕೆ 46 ಯೋಜನೆಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಸರ್ಕಾರದ ಹೊಸ ನೀತಿಯಿಂದ ಕೊಡಗು ಜಿಲ್ಲೆಯಲ್ಲಿ ವಿದೇಶಿ ಪ್ರವಾಸಿಗಳನ್ನು ಆಕರ್ಷಿಸಲು ಇನ್ನು ಮುಂದೆ ಸರ್ಕಾರದ ಉತ್ತೇಜನ ದೊರಕಲಿದೆ. ಸದ್ಯದಲ್ಲೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ಇವೆಲ್ಲದರ ಬಗ್ಗೆ ಮಾಹಿತಿಗಳು ದೊರಕಲಿದ್ದು ಅಸಕ್ತರು ಈ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.
ಇದನ್ನು ಓದಿದ್ದೀರಾ? ಚಾಮರಾಜ ನಗರ | ಹೊಗೇನಕಲ್ ಫಾಲ್ಸ್: ಪೊಲೀಸರ ಜಂಟಿ ಸಭೆ ಯಶಸ್ವಿ; ತೆಪ್ಪ ಸಂಚಾರ ಪುನರಾರಂಭ
ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುವ ಮೊದಲ ಐದು ರಾಜ್ಯಗಳಲ್ಲಿ ಒಂದಾಗಲು, ನಾವು ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬೇಕು. ಇದನ್ನು ತಲುಪುವುದು ನಮ್ಮ ಗುರಿಯಾಗಿದೆ. ಈಗ ಸುಮಾರು 12 ರಿಂದ 14 ಲಕ್ಷ ವಿದೇಶಿ ಪ್ರವಾಸಿಗರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಪಾಟೀಲ್ ಹೇಳಿದರು.
