ಈಗಲಾದರೂ ಎಚ್ಚೆತ್ತು ಕನ್ನಡದ ಶರಧಿಯೊಳಗಿನ ಮುತ್ತುರತ್ನಗಳನ್ನು ನಮ್ಮ ಮಕ್ಕಳು ನೋಡುವಂತೆ, ಮುಟ್ಟಿ ಆನಂದಿಸುವಂತೆ ಮಾಡಬೇಕಾದ ತುರ್ತು ನಮ್ಮ ಮುಂದಿದೆ. ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಮನದಟ್ಟು ಮಾಡಿಕೊಳ್ಳಬೇಕಾದ ನಮ್ಮ ತರುಣ ಪೀಳಿಗೆ ಅದರಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಿದೆ.
ಪ್ರಾಥಮಿಕ ಶಿಕ್ಷಣದಲ್ಲೇ ಪರಭಾಷಾ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನು ದೂಡಿ ಅವರನ್ನು ಗಿಳಿಗಳನ್ನಾಗಿ ಮಾಡುತ್ತಿದ್ದೇವೆ. ಇಂದು ಶಿಕ್ಷಣ ಮಾಧ್ಯಮ ಕೂಡ ವರ್ಗ ತಾರತಮ್ಯದ ಸ್ಪಷ್ಟ ಗುರುತು ಪಡೆದುಕೊಂಡಿದೆ. ಉಳ್ಳವರಿಗೆ ಇಂಗಿಷ್ ಮತ್ತು ಖಾಸಗಿ ಶಾಲಾ ಶಿಕ್ಷಣ, ಬಡವರು ಮತ್ತು ಹಳ್ಳಿಗರಿಗೆ ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲಾ ಶಿಕ್ಷಣ ಎನ್ನುವಂತಾಗಿದೆ. ಇದಕ್ಕೇನು ಪರಿಹಾರ? ಮುಂದುವರಿದ ರಾಷ್ಟ್ರಗಳಲ್ಲಿರುವಂತೆ ಸಮಾನ ಶಿಕ್ಷಣ, ಉಚಿತ ಶಿಕ್ಷಣ ನೀಡುವುದು ನಮ್ಮಿಂದ ಸಾಧ್ಯವಿಲ್ಲವೆ? ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನಾದರೂ ರಾಷ್ಟ್ರೀಕರಣ ಮಾಡಿ, ಎಲ್ಲರಿಗೂ ಏಕರೂಪ ಸಮಾನ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವ ಕರ್ತವ್ಯವನ್ನು ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಬಾಲ್ಯದಲ್ಲಿಯೇ ವಿವಿಧ ಹಂತದ ಶಿಕ್ಷಣ ವ್ಯವಸ್ಥೆ ಇರುವುದು ಸರಿಯೇ? ಪಠ್ಯದಲ್ಲಾದರೂ ಎಲ್ಲ ಮಕ್ಕಳು ಕಲಿಯುವಂತೆ ರೂಪಿಸಬಾರದೆ? ಎಲ್ಲರೂ ತಮ್ಮ ಮಾತೃಭಾಷೆಯಲ್ಲಿ ಕಲಿಯುವಂತೆ ಮಾಡಿ, ಅಗತ್ಯವೆನಿಸಿದರೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸುವುದು ಏಕೆ ಸಾಧ್ಯವಿಲ್ಲ ಎಂಬ ಹಲವಾರು ಪ್ರಶ್ನೆಗಳು ನಮ್ಮೆದುರು ಸುಳಿಯುತ್ತದೆ.
ಕನ್ನಡದ ಮೇಲೆ ಸವಾರಿಯ ಮೂರು ನೆಲೆಗಳನ್ನು ಬಹಳ ಹಿಂದೆಯೇ ಕುವೆಂಪು ಸರಿಯಾಗಿಯೇ ಗುರ್ತಿಸಿದ್ದಾರೆ. ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಕನ್ನಡ ವೃಕ್ಷ ಬೆಳೆಯದಂತೆ ಅಡ್ಡವಾಗಿ ನಿಂತಿರುವುದನ್ನು ತಿಳಿಸಿದ್ದಾರೆ. ಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಬದಲಾಗಿ ಸಂಸ್ಕೃತ ಓದುವ ಮಕ್ಕಳ ಸಂಖ್ಯೆ ದೊಡ್ಡದೇ ಇದೆ. ಅಂಕಗಳಿಸುವ ಓಟಕ್ಕೆ ಬಿದ್ದ ಮಕ್ಕಳು ತಾಯಿ ಭಾಷೆಯೆಂದೇ ಗುರುತಿಸಿಕೊಂಡ ಕನ್ನಡವನ್ನು ಪಕ್ಕಕ್ಕೆ ಸರಿಸಿ, ಜೀವನವಿಡೀ ಕನ್ನಡ ಸವಿಯನ್ನು ಚಪ್ಪರಿಸದೆ ಉಳಿಯುತ್ತಾರಲ್ಲ! ಜನಭಾಷೆಯಾದ ಹಾಗೂ ಸಾಹಿತ್ಯ ಸೃಷ್ಟಿಯ ಸಮುದ್ರದಂತಿರುವ ಕನ್ನಡ ಭಾಷೆಯ ಸೊಗಸು ಮಕ್ಕಳಿಗೆ ತಿಳಿಯಬಾರದೆ?
ಪ್ರಜಾತಂತ್ರದಲ್ಲಿ ಶ್ರೀಸಾಮಾನ್ಯನ ಭಾಷೆಯಲ್ಲಿ ಬರೆಯಬೇಕು, ವ್ಯವಹರಿಸಬೇಕು ಎಂಬ ಶರಣರ ಅನುಭವಾಮೃತವನ್ನು ಮರೆತು ಸಂಸ್ಕೃತದ ಬರಡು ಬೆನ್ನು ಹತ್ತಿ ಸವಾರಿ ಮಾಡುತ್ತಿರುವ ನಮ್ಮ ಮಕ್ಕಳ ಪರಿಸ್ಥಿತಿಗೆ ಏನೆನ್ನಬೇಕು? ಅವರಿಗೆ ಅಂತಹ ಅವಕಾಶವನ್ನು ಕಲ್ಪಿಸಿರುವ ನಮ್ಮ ಅಸಹಾಯಕ ಪರಿಸ್ಥಿತಿಗೆ ಸಿರಿಗನ್ನಡ ಬಲಿಯಾಗಿದೆ. ಈಗಲಾದರೂ ಎಚ್ಚೆತ್ತು ಕನ್ನಡದ ಶರಧಿಯೊಳಗಿನ ಮುತ್ತುರತ್ನಗಳನ್ನು ನಮ್ಮ ಮಕ್ಕಳು ನೋಡುವಂತೆ, ಮುಟ್ಟಿ ಆನಂದಿಸುವಂತೆ ಮಾಡಬೇಕಾದ ತುರ್ತು ನಮ್ಮ ಮುಂದಿದೆ. ಕನ್ನಡ ಸಂಸ್ಕೃತಿಯ ಹಿರಿಮೆಯನ್ನು ಮನದಟ್ಟು ಮಾಡಿಕೊಳ್ಳಬೇಕಾದ ನಮ್ಮ ತರುಣ ಪೀಳಿಗೆ ಅದರಿಂದ ವಿಮುಖವಾಗುವಂತೆ, ಮರೆಮಾಚುತ್ತಿರುವ ಈ ಅವಕಾಶ ಎಷ್ಟು ಸರಿ? ಈ ಎಲ್ಲ ಪ್ರಶ್ನೆಗಳನ್ನು ಸಾವಧಾನವಾಗಿ ಪರ್ಯಾಲೋಚಿಸಿ ಸರಿಪಡಿಸಿಕೊಳ್ಳಬೇಕಾದ ಸಂಕ್ರಮಣ ತುರ್ತಿನಲ್ಲಿ ನಾವಿದ್ದೇವೆ! ಕ್ಷಣಕ್ಷಣಕು ಹಿಂದಿ ಹೇರಿಕೆಯ ಭಯದ ನೆರಳು ಹಿಂದಿಯೇತರ ಭಾಷಿಕರ ಮೇಲೆ ಹರಿದಾಡುತ್ತಿದೆ. ಈ ನೆರಳು ಹರಿದಾಡಿದಾಗಲೆಲ್ಲ ಪ್ರತಿಭಟನೆಯ ಬಿರುಗಾಳಿ ಬಿಸಿಗಾಳಿಯಾಗಿ ಬೀಸುತ್ತದೆ. ಇದರಿಂದ ತಂಪನೆಯ ಅನುಭವವಾಗಬೇಕಿದ್ದ ನಾವು ಬೆಚ್ಚಿ ಬೀಳುವಂತಾಗಿದೆ. ಲಕ್ಷ ಲಕ್ಷ ಮಕ್ಕಳಿಗೆ ಇಂತಹ ದುಃಸ್ವಪ್ನ ಬೀಳಿಸುವುದು ಸರಿಯೆ ಎಂದು ನಮ್ಮಂತರಾತ್ಮಕ್ಕೆ ಕೇಳಿಕೊಳ್ಳಬೇಕಾಗಿದೆ.
ಇಂದು ಜಗತ್ಪ್ರಸಿದ್ದ ಭಾಷೆಯೆನಿಸಿರುವ ಇಂಗ್ಲಿಷ್, ಭಾರತದ ಜನಭಾಷೆಗಳ ಮೇಲೆ ನಡೆಸುತ್ತಿರುವ ದಾಳಿಯನ್ನು ಕೈಕಟ್ಟಿ ಸುಮ್ಮನೆ ಕುಳಿತು ನೋಡಬೇಕಾದ ಸ್ಥಿತಿಯಿದೆ. ನಮ್ಮಲ್ಲೇ ಕೆಲವರು ಇಂಗ್ಲಿಷ್‌ನ ಮೇಲಾಟಕ್ಕೆ ಇಂಬು ನೀಡಿ ಇದು ಸರಿಯೆಂದು ವಕಾಲತ್ತು ವಹಿಸಿ ನಿಂತಿದ್ದಾರೆ. ಹಗಲುಗನಸನ್ನು ಪ್ರಾಮಾಣಿಕವಾಗಿಯೇ ನಂಬಿ ಮೋಕ್ಷವೆಂಬುದಿದ್ದರೆ ಇಂಗ್ಲಿಷ್‌ನಿಂದ ಮಾತ್ರವೆಂದೇ ತಿಳಿದಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವ ಅಸಲೀ ಸವಿಯನ್ನು ನೋಡದವರು ರಾಸಾಯನಿಕಯುಕ್ತ ತಿಂಡಿಯನ್ನೇ ಹೊಸರುಚಿಯೆಂದು ಭಾವಿಸಿ ಮುಕ್ಕಲಾರಂಭಿಸಿದ್ದಾರೆ. ನಮ್ಮ ಹಸಿವನ್ನು ನೀಗುವ ಪರಮಶ್ರೇಷ್ಠ ಆಹಾರವೆಂದೇ ಭಾವಿಸಿದ್ದಾರೆ. ರೋಗಮುಕ್ತ ಸಾವಯವ ಬೆಳೆಯಾದ ಕನ್ನಡಧಾನ್ಯಗಳನ್ನು ಬಳಸಿದ ದೇಸೀ ತಿನಿಸುಗಳ ಸವಿ ಅವರಿಗೆ ಗೊತ್ತೇ ಇಲ್ಲ. ಅದರ ಸೊಗಸನ್ನು ನಾಲಿಗೆಗೆ ಸೋಕಿಸಿಲ್ಲ. ಆದ್ದರಿಂದ ಇಂಗ್ಲಿಷ್‌ನ ನಕಲಿ ರುಚಿ ನಮ್ಮ ನಾಲಿಗೆಗೆ ಆಪ್ಯಾಯಮಾನವಾಗಿ ಕಾಣುತ್ತಿದೆ. ಕನ್ನಡದ ತಾಜಾತನ ನಮ್ಮ ಮಕ್ಕಳಿಗೆ ಸಿಗದಿರಲು ಇಂಗ್ಲಿಷ್ ಬಹುದೊಡ್ಡ ಕಂಟಕವಾಗಿದೆ. “ಅಂತಾರಾಷ್ಟ್ರೀಯ ರಾಜಕೀಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಆಂಗ್ಲಭಾಷೆ ಅತ್ಯಾವಶ್ಯಕ ಎಂದು ನನಗೆ ಗೊತ್ತು. ಆದ್ದರಿಂದ ಅದನ್ನು ಕೆಲವರು ಕಲಿತರೆ ಸಾಕು” ಎಂಬ ಗಾಂಧೀಜಿಯವರ ಮತ್ತು ಇದೇ ಅಭಿಪ್ರಾಯ ಹೊಂದಿರುವ ಕುವೆಂಪು ಅವರ ಮಾತುಗಳನ್ನು ಈ ಕಾಲಮಾನಕ್ಕೆ ಹೊಂದಿಕೊಳ್ಳುವಂತೆ ಬದಲಾಯಿಸಿಕೊಂಡು, ಒಂದು ಭಾಷೆಯಾಗಿ ಇಂಗ್ಲಿಷನ್ನು ಸಮರ್ಪಕವಾಗಿ ಕಲಿಸುವ ಕೆಲಸವಾಗಬೇಕೇ ಹೊರತು ಎಲ್ಲರಿಗೂ ಒಂದೇ ಮಂತ್ರವೆಂಬಂತೆ ಲಕ್ಷಾಂತರ ಮಕ್ಕಳ ಸೃಜನಶೀಲ ಬುದ್ಧಿಮತ್ತೆಯ ಮೇಲೆ ಬರೆ ಎಳೆಯುವ ಕೆಲಸವನ್ನು ನಾವು ಮಾಡಬಾರದು ಎಂಬ ತಿಳಿವಳಿಕೆ ಮೂಡಬೇಕಾಗಿದೆ. ಈ ವಿವೇಕದಿಂದ ಕನ್ನಡವನ್ನು ಸರ್ವಾಂತರಯಾಮಿ ಆಗಿಸಬೇಕು. ವಿಜ್ಞಾನ ತಂತ್ರಜ್ಞಾನಗಳನ್ನು ಕನ್ನಡದಲ್ಲಿ ಕಲಿಸುವುದಾದರೆ, ಅಸಲೀ ಸಂಶೋಧನೆಗೆ ಒತ್ತು ನೀಡಿದಂತಾಗುತ್ತದೆ.
ಈ ವರದಿ ಓದಿದ್ದೀರಾ?: ಸೈದ್ಧಾಂತಿಕ ರಾಜಿಕೋರತನ: ಕಾಂಗ್ರೆಸ್ ತೆತ್ತ ದುಬಾರಿ ಬೆಲೆಯ ಇತಿಹಾಸ
ಇಂದು ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗದಿದ್ದರೆ ಬೇರೆ ಯಾವ ರಾಜ್ಯದಲ್ಲೂ ಸಿಗಲಾರದು. ಇಲ್ಲಿ ಬಳಸದಿದ್ದರೆ, ಬೆಳೆಸದಿದ್ದರೆ ಬೇರೆಲ್ಲೂ ಬೆಳೆಯದು. ಆದ್ದರಿಂದ ಆಡಳಿತದಲ್ಲಿ ಕನ್ನಡವನ್ನು ಬಳಸದೇ ಇರುವ ಅಧಿಕಾರಿಶಾಹಿಯನ್ನು ಕಪ್ಪುಪಟ್ಟಿಯಲ್ಲಿರಿಸಿ ಬಹಿಷ್ಕರಿಸಬೇಕು. ನಮ್ಮ ಮುಖ್ಯಮಂತ್ರಿಗಳಾದಿಯಾಗಿ ಮಂತ್ರಿಮಾನ್ಯರೆಲ್ಲರೂ ಕನ್ನಡ ಬಳಸದವರ ಮೇಲೆ ಕತ್ತಿ ಝಳಪಿಸಬೇಕು. ಆಗ ಆಡಳಿತ ಕನ್ನಡವಾಗುತ್ತದೆ. ಪ್ರಜಾಸೇವಕರು ಪ್ರಜೆಗಳ ಭಾಷೆ ಬಳಸುವುದರಿಂದ ಜನತಾ ಪ್ರಜಾಪ್ರಭುತ್ವ ಸ್ಥಾಪಿತವಾಗುತ್ತದೆ.
ನಮ್ಮ ವ್ಯವಹಾರಿಕ ಭಾಷೆಯೂ ಕನ್ನಡವಾಗಬೇಕು. ಯಾವುದೇ ಕ್ಷೇತ್ರದಲ್ಲಿರಲಿ, ಐಟಿ-ಬಿಟಿಯಲ್ಲೇ ಇರಲಿ. ನಿಮ್ಮ ಕೆಲಸದ ಭಾಷೆ ಯಾವುದೇ ಇರಲಿ ಹಗಲಿರುಳು ನೀವು ಬಳಸುವ ಭಾಷೆ ಕನ್ನಡವಾಗಿರಲಿ. ಈ ಮೂಲಕ ಕನ್ನಡವನ್ನು ಅನ್ನದ ಭಾಷೆಯನ್ನಾಗಿಸಬೇಕು. ಕನ್ನಡ ಬಲ್ಲವರಿಗೆ ಕೆಲಸ ಕೊಡುತ್ತೇವೆಂಬ ನಿರ್ಧಾರಕ್ಕೆ ಕರ್ನಾಟಕ ಬಂದರೆ ಕನ್ನಡ ಅಗ್ರಮಾನ್ಯವಾಗುತ್ತದೆ. ಕನ್ನಡದ ಈ ತಿರುಳಿಗೆ, ಕೊರಳಿಗೆ ಯಾರಾದರೂ ತಲೆಬಾಗಲೇ ಬೇಕಾಗುತ್ತದೆ.
ಕುವೆಂಪು ಅವರು ಪರಿಭಾವಿಸಿರುವಂತೆ, ಕನ್ನಡ ಮಾತೆ ಜಯಭಾರತ ಜನನಿಯ ತನುಜಾತೆ, ಈ ಪರಿಕಲ್ಪನೆಯಿಂದಲೇ ಬಲಿಷ್ಠ ಭಾರತವನ್ನು ಕಟ್ಟಬಹುದು. ಬಲಿಷ್ಠ ಭಾರತದಲ್ಲೇ ಗಟ್ಟಿ ನೆಲೆಯ ಕನ್ನಡತಿ ಮುಂತಾದ ಎಲ್ಲ ಭಾಷಿಕರೂ ಬೆಳೆಯಬೇಕು. ಉಳಿಯಬೇಕು. ಆಗ ಕನ್ನಡಕ್ಕೂ ವಿಶ್ವಮನ್ನಣೆ ದೊರೆಯುತ್ತದೆ ಹಾಗೂ ದೊರೆಯಬೇಕು. ಕನ್ನಡ ಮಾತನಾಡುವ ಜನಸಂಖ್ಯೆಗಿಂತ ಕಡಿಮೆ ಜನರು ಮಾತನಾಡುವ ಭಾಷೆಗಳಲ್ಲಿ ವಿಜ್ಞಾನ ತಂತ್ರಜ್ಞಾನಗಳಾದಿಯಾಗಿ ಎಲ್ಲವನ್ನು ಬೋಧಿಸುವುದು ಸಾಧ್ಯವಾದರೆ ಅದು ಕನ್ನಡಕ್ಕೆ ಏಕೆ ಸಾಧ್ಯವಿಲ್ಲ. ಆದ್ದರಿಂದ ಕನ್ನಡ-ಕರ್ನಾಟಕ ಬೇರೆ ಬೇರೆಯಲ್ಲ. ಕನ್ನಡ ಕಲಿತವನು ವಿಶ್ವಮಾನ್ಯನಾಗುತ್ತಾನೆ. ಅಂತಹ ವಾತಾವರಣ ವಿಶ್ವದಲ್ಲೇ ಸೃಷ್ಟಿಯಾಗುತ್ತದೆ. ಕನ್ನಡಕ್ಕಿರುವ ಬಹುಸಾಧ್ಯತೆಗಳನ್ನು ಸಾಕಾರಗೊಳಿಸುವುದೇ ಕುವೆಂಪು ಅವರ ಚಿಂತನ ಸಾರವಾಗಿದೆ.
ಬರಹ: ಡಾ. ಎಲ್ ಹನುಮಂತಯ್ಯ
(‘ಕುವೆಂಪು ವಿರಚಿತ ಕನ್ನಡ ಭಾಷಾ ಸಂವಿಧಾನ’ ಪುಸ್ತಕದಿಂದ)