ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿಗೆ ಸಿಲುಕಿದ ಕಿವೀಸ್ ತಂಡ 65.4 ಓವರ್‌ಗಳಲ್ಲಿ 235 ರನ್‌ಗಳಿಗೆ ಆಲೌಟ್ ಆಗಿದೆ.
ರವಿಂದ್ರ ಜಡೇಜಾ 65/5 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ 81/4 ವಿಕೆಟ್ ಕಿತ್ತರು. ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ (82) ಹಾಗೂ ವಿಲ್ ಯಂಗ್ (71) ರನ್ ಗಳಿಸಿ ತಂಡ 200ರ ಗಡಿ ದಾಟಲು ನೆರವಾದರು.
ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಡೆವೊನ್ ಕಾನ್ವೆ ಅವರನ್ನು ಆಕಾಶ್ ದೀಪ್ ಪೆವಿಲಿಯನ್‌ಗೆ ಕಳಿಸಿದರೆ, ಉಳಿದ 9 ಆಟಗಾರರು ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿಗೆ ಔಟಾದರು.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಮಹಿಳಾ ಸ್ಟಾರ್ ಕ್ರಿಕೆಟರ್ ಸ್ಮೃತಿ ಮಂಧಾನ ಬಗ್ಗೆ ನಿಮಗೆಷ್ಟು ಗೊತ್ತು?
ದಾಖಲೆ ಬರೆದ ರವೀಂದ್ರ ಜಡೇಜಾ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮೊದಲ ಐದರ ಪಟ್ಟಿಗೆ ಲಗ್ಗೆ ಇಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ 312 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಆ ಮೂಲಕ ಮಾಜಿ ವೇಗಿಗಳಾದ ಜಹೀರ್ ಖಾನ್ (311) ಮತ್ತು ಇಶಾಂತ್ ಶರ್ಮಾ (311) ದಾಖಲೆಯನ್ನು ಮುರಿದಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ (619) ಮುಂಚೂಣಿಯಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ (533), ಕಪಿಲ್ ದೇವ್ (434) ಮತ್ತು ಹರಭಜನ್ ಸಿಂಗ್ (417) ಅನುಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
