ಬೀದರ್‌ | ರಾಜೋತ್ಸವ ನಿತೋತ್ಸವ ಆಗಲಿ : ಸಚಿವ ಈಶ್ವರ ಖಂಡ್ರೆ

Date:

Advertisements

ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಎಲ್ಲರೂ ಕನ್ನಡ ಮಾತನಾಡಲಿ, ಕನ್ನಡಿಗರೆಲ್ಲರೂ ಒಗ್ಗಟ್ಟಾಗಲಿ, ಕನ್ನಡವೇ ನಮ್ಮ ಆಸ್ಮಿತೆ, ಕನ್ನಡದ ಬಗ್ಗೆ ಸ್ವಾಭಿಮಾನವಿರಲಿ, ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಿ ಬೆಳೆಸಲು ನಾವೆಲ್ಲರೂ ಬದ್ಧರಾಗೋಣ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನ.1ರಂದು 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ʼಕನ್ನಡ ನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿರಿಮೆಯು ತುಂಬಾ ವೈಶಿಷ್ಟತೆಗಳಿಂದ ಕೂಡಿದೆ. ರಾಜ, ಮಹಾರಾಜರು ಸಹ ತಮ್ಮ ಆಡಳಿತದ ಕಾಲಾವಧಿಯಲ್ಲಿ ಕನ್ನಡ ನಾಡು-ನುಡಿ ಉಳಿಸಿ ಬೆಳೆಸಿದ್ದರುʼ ಎಂದು ಸ್ಮರಿಸಿದರು.

ʼಕುವೆಂಪು ಅವರು ಹೇಳುವಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದು ಬೀದರ್ ಜಿಲ್ಲೆಗೆ ಅತ್ಯಂತ ಹೆಚ್ಚು ಒಪ್ಪುತ್ತದೆ. ಬೀದರ್ ಜಿಲ್ಲೆಯಲ್ಲಿ ಬಸವಾದಿ ಶರಣರ ಪಾದಸ್ಪರ್ಶದಿಂದ ಪುನೀತವಾದ ಪುಣ್ಯಭೂಮಿ ಬಸವಕಲ್ಯಾಣ, ನಾನಕ್‌ ಝೀರಾ ಗುರುದ್ವಾರ, ಮಹಮದ್ ಗವಾನ್ ಮದರಸಾ ಇದೆ, ಸಂತ ಪಾಲ್, ಝರಣಿ ನರಸಿಂಹ ಸ್ವಾಮಿ, ಪಾಪನಾಶಿ ದೇವಾಲಯ ಇದೆ, ಇಲ್ಲಿ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಎಲ್ಲರೂ ಸಹೋದರರಂತೆ ಬಾಳುತ್ತಿದ್ದಾರೆ. ನಿತ್ಯ ವ್ಯವಹಾರದಲ್ಲಿ, ಹಿಂದಿ ಭಾಷೆಯ ಬಳಕೆ ಇದ್ದರೂ ನಮ್ಮೆಲ್ಲರ ಮನಸ್ಸು ಕನ್ನಡವೇ ಆಗಿದೆ. ಹೀಗಾಗಿಯೇ ಅನ್ಯ ಭಾಷೆಯ ಪ್ರಭಾವದ ನಡುವೆಯೂ ಬೀದರ್‌ನಲ್ಲಿ ಕನ್ನಡ ಉಳಿದಿದೆ, ಬೆಳೆದಿದೆ ಎಂದು ಹೇಳಲು ಸಂತೋಷವಾಗುತ್ತದೆʼ ಎಂದರು.

Advertisements

ʼಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನ ಪದ್ಧತಿ ಇದೆ. ಭಾವೈಕ್ಯತೆಯ ನಾಡಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆ ಮಾಡಿದೆ. ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಲು ಏಕೀಕರಣ ಚಳವಳಿಯಲ್ಲಿ ರಾಜ್ಯದ ಹಲವಾರು ಜನರು ಶ್ರಮಿಸಿದ್ದಾರೆʼ ಎಂದರು.

ʼಕನ್ನಡ ನಾಡಿನ ಏಳ್ಗೆಯಲ್ಲಿ ಸಾಹಿತಿಗಳು, ವಚನಕಾರರು ಹಾಗೂ ದಾಸರ ಪಾತ್ರವೂ ಅತೀ ಮಹತ್ವದ್ದಾಗಿದೆ. ಈ ನಾಡಿನ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ಸಮಾಜ ಸುಧಾರಣೆಗೆ ಅನೇಕರು ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವಗುರು ಬಸವಣ್ಣನವರು ಜಗತ್ತಿನ ಜ್ಯೋತಿಯಾಗಿ 12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ್ದರುʼ ಎಂದರು.

ʼಬೀದರ್ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಇದೆ. ನಾವು ಈ ಕಳಂಕವನ್ನು ತೊಡೆದು ಹಾಕಿ ಕರುನಾಡ ಕಿರೀಟ ಬೀದರ್ ಮುಂದುವರಿದ ಜಿಲ್ಲೆ. ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸಬೇಕು. ಅದಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಬೇಕುʼ ಎಂದರು.

WhatsApp Image 2024 11 01 at 6.42.22 PM
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 22 ಗಣ್ಯರಿಗೆ ಸನ್ಮಾನಿಸಲಾಯಿತು.

ʼಕನ್ನಡಿಗರು ಆಕ್ರಮಣಕಾರಿಗಳಲ್ಲ, ಹೀಗಾಗಿ ಅನೇಕ ವಿಷಯಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಕಾವೇರಿ ನದಿ ನೀರು ಹಂಚಿಕೆ, ಕಳಸಾ ಬಂಡೂರಿ, ಗೋಧಾವರಿ ಅಲ್ಲದೇ ಗಡಿ ವಿವಾದವನ್ನು ಕೆಲವರು ಸ್ವಾರ್ಥಕ್ಕಾಗಿ ಜೀವಂತ ಇಟ್ಟಿದ್ದಾರೆ. ನಾಡು, ನುಡಿ, ನೆಲ, ಜಲ ಭಾಷೆ ಬೆಳೆಸಲು ನಾವೆಲ್ಲರೂ ಬದ್ಧರಾಗಬೇಕುʼ ಎಂದು ಕರೆ ನೀಡಿದರು.

ʼಬೀದರದಿಂದ ವಿಮಾನಯಾನ ಶೀಘ್ರವೇ ಆರಂಭಗೊಳ್ಳಲಿದೆ. 18ಕೋಟಿ ವೆಚ್ಚದಲ್ಲಿ ಡಿಸೆಂಬರ್ 15ರ ಒಳಗಾಗಿ ಸೇವೆ ಆರಂಭವಾಗುವುದು ಎಂದರು. ಔರಾದ್ ತಾಲ್ಲೂಕಿಗೆ ಶಾಶ್ವತ ನೀರಿನ ಸಮಸ್ಯೆ ಬಗೆಹರಿಸಲು ಕಾರಂಜಾ ಡ್ಯಾಂನಿಂದ 500 ಹಳ್ಳಿಗಳಿಗೆ 1,600 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಕಾರ್ಯಗತಗೊಳಿಸಲಾಗುವುದುʼ ಎಂದು ಹೇಳಿದರು.

ʼಬೀದರ ಜಿಲ್ಲಾಡಳಿತ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ 59 ಕೋಟಿ ರೂ.ಗಳಿಗೆ ಅನುಮೋದನೆ ದೊರೆತಿದ್ದು 15 ದಿನದೊಳಗೆ ಟೆಂಡರ್ ಕರೆಯಲಾಗುವುದು. ಕಲ್ಯಾಣ ಕರ್ನಾಟಕಕ್ಕೆ ಪ್ರಸಕ್ತ ವರ್ಷ 5 ಸಾವಿರ ಕೋಟಿ ರೂ. ಘೋಷಣೆಯಾಗಿದ್ದು, ಈ ಪೈಕಿ ಬೀದರ ಜಿಲ್ಲೆಗೆ 550 ಕೋಟಿ ರೂ. ಬರಲಿದೆ. ಬೀದರನ ನಗರದಲ್ಲಿ ಒಳಚರಂಡಿ ನಿರ್ಮಾಣ, ರಾಜ ಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಉದ್ಯಾನವನ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ಡಿ.31 ರೊಳಗಾಗಿ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ರಿಪೇರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆʼ ಎಂದು ತಿಳಿಸಿದರು.

WhatsApp Image 2024 11 01 at 6.50.04 PM 2
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಯಿತು.

ʼನಮ್ಮ ಜಿಲ್ಲೆಯ ಹಸಿರು ಹೊದಿಕೆಯ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 15 ಲಕ್ಷ ಸಸಿ ನೆಡಲಾಗಿದೆ. ಹಾಗೂ 1 ಕೋಟಿ ಸಸಿ ನೆಡುವ ಗುರಿ ಹೊಂದಾಗಿದೆ. ಟ್ರೀ ಪಾರ್ಕ್ ಹಾಗೂ ಪಕ್ಷಿಧಾಮ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಮನೆಯ ಮುಂದೆ ಒಂದು ಸಸಿ ನೆಟ್ಟು ಅದರ ಪಾಲನೆ ಪೋಷಣೆಯ ಹೊಣೆ ಹೊರಬೇಕು. ಬೀದರ್ ಜಿಲ್ಲೆ ಅಷ್ಟೇ ಅಲ್ಲ ಕಲ್ಯಾಣ ಕರ್ನಾಟಕದಲ್ಲಿಯೇ ಒಂದು ಹಸಿರು ಕ್ರಾಂತಿಗೈಯಲು ಮುಂದಾಗಿದ್ದೇನೆʼ ಎಂದರು.

ʼಪ್ರಸಕ್ತ ಸಾಲಿಗೆ 585 ಮಿ.ಮಿ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 41.55 ಲಕ್ಷ ಹೆಕ್ಟರ್ ಬಿತ್ತನೆ ಗುರಿ ಇದ್ದು, ಶೇ 100.06 ರಷ್ಟು ಬಿತ್ತನೆಯಾಗಿದೆ. ಪ್ರಮುಖ ಬೆಳೆಯಾದ ಸೋಯಾ ಹಾಗೂ ಅವರೆ 2,25020 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹವಾಮಾನ ವೈಪರಿತ್ಯದಿಂದ ಹೆಚ್ಚಿನ ಮಳೆಯಾಗಿ ಬೆಳೆ ನಷ್ಟ ಆಗಿದ್ದು, ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಬೀಜ ಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಬೆಳೆ ಸಮೀಕ್ಷೆ ಕಾರ್ಯವು ಜಿಲ್ಲೆಯಲ್ಲಿ ಚಾಲನೆಯಲಿದ್ದು, ಸಮೀಕ್ಷೆ ಮಾಡಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದುʼ ಎಂದರು.

ʼರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಒಟ್ಟು ರೂ.287.00 ಲಕ್ಷ ಅನುದಾನ ನಿಗದಿಪಡಿಸಿದ್ದು, ಅದರಡಿಯಲ್ಲಿ ಪ್ರಮುಖವಾಗಿ ಹೂ, ಹಣ್ಣು ಮತ್ತು ತರಕಾರಿ ತೋಟಗಾರಿಕೆ ಪ್ರದೇಶ ವಿಸ್ತರಣೆ 84 ಹೆಕ್ಟೇರ್, ನೀರು ಸಂಗ್ರಹಣ ಘಟಕಗಳಡಿ 11 ಜನ ರೈತರಿಗೆ ಸಹಾಯಧನ ನೀಡಲಾಗಿದೆʼ ಎಂದರು.

ʼಶಾಲಾ ಶಿಕ್ಷಣದಡಿಯಲ್ಲಿ ವಿವೇಕ ಶಾಲಾ ಯೋಜನೆಯಡಿಯಲ್ಲಿ 165 ಹೊಸ ಕೊಠಡಿಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 2023-24ನೇ ಸಾಲಿನ ಮೆಗಾಮ್ಯಾಕ್ರೋ ಯೋಜನೆ ಅಡಿಯಲ್ಲಿ 10 ಕೋಟಿ ರೂ. ಮೊತ್ತದಲ್ಲಿ ಬೀದರ ನಗರದಲ್ಲಿ ಮಹಿಳಾ ಪದವಿ ಕಾಲೇಜಿನ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. 2024-25ನೇ ಸಾಲಿನಲ್ಲಿ ಮೈಕ್ರೊ ಯೋಜನೆ ಅಡಿಯಲ್ಲಿ 311.18 ಕೋಟಿ ರೂ. ಹಾಗೂ ಮ್ಯಾಕ್ರೊ ಯೋಜನೆ ಅಡಿಯಲ್ಲಿ 167.55 ಕೋಟಿ ರೂ. ಅನುದಾನಬೀದರ ಜಿಲ್ಲೆಯ ಅಭಿವೃದ್ಧಿಗಾಗಿ ನಿಗದಿಪಡಿಸಲಾಗಿದೆʼ ಎಂದರು.

WhatsApp Image 2024 11 01 at 7.20.07 PM

ʼಜಿಲ್ಲೆಯ ಜನರು ಆರೋಗ್ಯವಂತರಾಗಿ ಬದುಕಬೇಕೆಂಬ ಆಶಯವಾಗಿದೆ. ಜಿಲ್ಲೆಯಲ್ಲಿ ಶಿಶು ಮರಣ, ತಾಯಿ ಮರಣ ಕಡಿಮೆಯಾಗಿದೆ. ಸಾಂಕ್ರಾಮಿಕ ರೋಗ ತಡೆ ಕ್ರಮ ವಹಿಸಲಾಗಿದೆ. ಮತ್ತು ವಿವಿಧ ಲಸಿಕೆಗಳನ್ನು ಹಾಕಲಾಗಿದೆ. ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ. ರೋಗಿಗಳಿಗೆ ತೀವ್ರ ನಿಗಾ ಘಟಕಗಳನ್ನು ಹೆಚ್ಚಿಸಲಾಗುವುದು. ಹೃದಯ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಅಗತ್ಯ ವಹಿಸಲಾಗುವುದು. ಕ್ಯಾಥ್ ಲ್ಯಾಬ್ 2 ತಿಂಗಳಲ್ಲಿ ಆರಂಭಗೊಳಿಸಲಾಗುವುದು. ಬ್ರಿಮ್ಸ್ ವಿದ್ಯಾರ್ಥಿಗಳ ಪ್ರವೇಶಾತಿಗೆ ತಕ್ಕಂತೆ ಬೋಧಕರ ನೇಮಕಾತಿ, ಹೊರಗುತ್ತಿಗೆ ವೈದ್ಯರ ಹಾಗೂ ಸಿಬ್ಬಂದಿಗಳ ವೇತನ ಪಾವತಿ, ಕಟ್ಟಡ ದುರಸ್ತಿ, ಸುರಕ್ಷತೆ ಹಾಗೂ ಭದ್ರತೆ ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ಪರಿಹರಿಸಲಾಗುವುದುʼ ಎಂದರು.

ʼಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೀದರ ಅಧೀನದಲ್ಲಿ ಪರಿಶಿಷ್ಟ ಜಾತಿಯ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸೇರಿ ಒಟ್ಟು 29 ವಸತಿ ಶಾಲೆ, ಕಾಲೇಜುಗಳನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಮಂಜೂರಾತಿ ಸಂಖ್ಯೆ 7,720 ಹಾಗೂ ದಾಖಲಾತಿ ಸಂಖ್ಯೆ 7,453 ಆಗಿರುತ್ತದೆ. 60 ವಸತಿ ನಿಲಯ ಹಾಗೂ ವಸತಿ ಶಾಲೆಗಳು ಸ್ವಂತ ಕಟ್ಟಡಗಳನ್ನು ಹೊಂದಿರುತ್ತವೆ. ಹಾಗೂ 3 ವಸತಿ ನಿಲಯ ಹಾಗೂ 2 ಶಾಲೆಗಳು ಒಟ್ಟು 4 ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. 2 ವಸತಿ ನಿಲಯಗಳು ಬಾಡಿಗೆ ರಹಿತ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. 2 ವಸತಿ ನಿಲಯಗಳ ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆʼ ಎಂದರು.

ʼಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆಯಡಿ ಜಿಲ್ಲೆಯಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಮನಿಯಾರ ತಾಲಿಂ ಶಾಲೆಯಲ್ಲಿ 60 ಸಂಖ್ಯಾ ಬಲದೊಂದಿಗೆ ಪಿಯುಸಿ ಪ್ರಥಮ ವರ್ಷ (ಪಿಸಿಎಂಬಿ) ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ. ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಬಾಲಕಿಯರ ವಸತಿ ಕಾಲೇಜು ಮೀರಾಗಂಜ್‌ನಲ್ಲಿ 2024-25ನೇ ಸಾಲಿನಿಂದ ಪ್ರಥಮ ಪಿಯುಸಿ (ವಾಣಿಜ್ಯ ವಿಭಾಗ)ವನ್ನು 60 ವಿದ್ಯಾರ್ಥಿಗಳ ಸಂಖ್ಯಾ ಬಲದೊಂದಿಗೆ ಪ್ರಾರಂಭಿಸುವಂತೆ ಮಂಜೂರಾತಿ ನೀಡಲಾಗಿದೆʼ ಎಂದರು.

ʼ2024-25ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 3 ವಸತಿ (2-ಬಾಲಕ, 1-ಬಾಲಕಿ) ನಿಲಯಗಳನ್ನು ಬೀದರ್ ಎರಡು ಮತ್ತು ಹುಮನಾಬಾದ ಒಂದು ಮಂಜೂರು ಮಾಡಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 10 ಮೌಲಾನಾ ಆಜಾದ ಮಾದರಿ ಶಾಲೆಗಳು 3,000 ಸಂಖ್ಯಾಬಲದ ಮಂಜೂರಾತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆʼ ಎಂದರು.

WhatsApp Image 2024 11 01 at 6.42.33 PM
69ನೇನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಹಾಗೂ ಸುವರ್ಣ ಸಂಭ್ರಮಾಚರಣೆಯ ನೆನಪಿನಲ್ಲಿ, ಕ್ರಿ.ಶ. 450ರಲ್ಲಿ ಕೆತ್ತಲ್ಪಟ್ಟ ಕನ್ನಡದ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಡಾ. ಚನ್ನಬಸವ ಪಟ್ಟದೇವರ ರಂಗಮಂದಿರ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ʼಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯು ರಾಜ್ಯದಲ್ಲಿ ಮನೆ-ಮನೆಗೆ ಗಂಗೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗಿದೆ. ಬೀದರ ಜಿಲ್ಲೆಯಲ್ಲಿ ಒಟ್ಟು 883 ಜನ ವಸತಿಗಳಿಗೆ ಅಂದಾಜು 892.22 ರೂ. ಕೋಟಿಗಳ ಯೋಜನೆಯಲ್ಲಿ ಓಟ್ಟು 3.14 ಲಕ್ಷ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆʼ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 22 ಗಣ್ಯರಿಗೆ ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರ ಪ್ರದರ್ಶಿಸಲಾಯಿತು. ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸುದ್ದಿ ಓದಿದ್ದೀರಾ? ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಕಾರ್ಯಕ್ರಮದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಲೋಕಸಭಾ ಸದಸ್ಯ ಸಾಗರ ಈಶ್ವರ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X