ದಲಿತ ಸಮುದಾಯಕ್ಕೆ ಸೇರಿದ ತಾಯಿ-ಮಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯನೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮೀನಾಕ್ಷಿ ಹಾಗೂ ಅವರ ಮಗಳು ರಕ್ಷಿತಾಳಿಗೆ ಅವಾಚ್ಯ ಶಬ್ದದಿಂದ ನಿಂದಿಸಿ,ಕ್ಷುಲ್ಲಕ ಕಾರಣದಿಂದ ಪವನ್ ಕುಮಾರ್ ಎಂಬಾತ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕು ಪಾಳ್ಯ ಹೋಬಳಿಯ ಗುಂಡನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಎರಡು ದಿನ ಹಿಂದೆ ಲಿಂಗಾಯತ ಸಮುದಾಯಕ್ಕೆ ಸೇರಿದ ಪವನ್ ಕುಮಾರ್ ಮರದ ತುಂಡಿನಿಂದ ಹಲ್ಲೆ ಮಾಡಿದ್ದಾನೆ.
ದಿನ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಮೀನಾಕ್ಷಿ, ಪವನ್ ಕುಮಾರ್ ಹತ್ತಿರ 1000 ರೂಪಾಯಿ ಹಣವನ್ನು ಸಾಲ ಪಡೆದಿದ್ದರು. ಸಾಲ ಕೇಳೋದಕ್ಕೆ ಬಂದಿದ್ದ ಪವನ್ ಕುಮಾರ್ ಮನೆಯ ಸಾಮಗ್ರಿಗಳನ್ನು ಹೊರ ಹಾಕಿ ಮನೆಯಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು. ಮೀನಾಕ್ಷಿ ಅವರು 1000 ಹಣ ನಾನು ಈಗಲೇ ನಿಮಗೆ ಕೊಡುತ್ತೇನೆ. ನಮ್ಮ ವಸ್ತುಗಳನ್ನ ವಾಪಸ್ ಮಾಡಿ ಎಂದು ಕೇಳಿದ್ದಕ್ಕೆ, ಮರದ ತುಂಡಿನಿಂದ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಮಾಡಲಾಗಿದೆ.
ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರಿದ್ದರೂ ಇರುವ ಗ್ರಾಮವಾಗಿದ್ದರೂ, ಹಲ್ಲೆಗೊಳಗಾಗುವಾಗ ಯಾರೂ ಕೂಡ ಸಹಾಯಕ್ಕೆ ಬಂದಿಲ್ಲ ಎಂದು ಮೀನಾಕ್ಷಿ ಅವರು ನೋವು ತೋಡಿಕೊಂಡಿದ್ದಾರೆ.
ಈ ಘಟನೆ ಎರಡು ದಿನ ಆದರೂ ಯಾವುದೇ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಶುಕ್ರವಾರ ಮೀನಾಕ್ಷಿ ಅವರು ಆಲೂರು ತಾಲ್ಲೂಕಿನ ಪೋಲಿಸ್ ಠಾಣೆಗೆ ದೂರನ್ನು ಕೊಟ್ಟಿದ್ದಾರೆ. ಆದರೆ ಇಲ್ಲಿಯವರೆಗೂ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಲ್ಲೆಗೊಳಗಾದ ಮೀನಾಕ್ಷಿ ಅವರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿದ್ದೀರಾ? ಸಂಡೂರು | ಸರ್ಕಾರದ ‘ದಿಶಾಂಕ್ ಆ್ಯಪ್’ನಲ್ಲಿ ಇಡೀ ಗ್ರಾಮವೇ ನಾಪತ್ತೆ: ಆತಂಕದಲ್ಲಿ ಗ್ರಾಮಸ್ಥರು!
ಈ ಘಟನೆಯನ್ನು ಜಿಲ್ಲೆಯ ಭೀಮ್ ಆರ್ಮಿ ಸಂಘಟನೆಯವರಿಗೆ ಮೀನಾಕ್ಷಿ ಅವರು ತಿಳಿಸಿದ ಹಿನ್ನೆಲೆಯಲ್ಲಿ ಶನಿವಾರ ಮೀನಾಕ್ಷಿ ಮತ್ತು ಮಗಳು ರಕ್ಷಿತಾ ಭೀಮ್ ಆರ್ಮಿ ಸಂಘಟನೆಯವರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆ ಬಳಿಕ ಪವನ್ ಕುಮಾರ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಪ್ರದೀಪ್ ಈ ದಿನ.ಕಾಮ್ ಗೆ ಮಾಹಿತಿ ನೀಡಿದ್ದಾರೆ.
