‘ಕೀರ್ತಿಶನಿ’ಯನ್ನು ಮ್ಯಾನೇಜ್ ಮಾಡಲಾಗದೆ ಎದ್ದು ಹೋದರೆ ಗುರುಪ್ರಸಾದ್?

Date:

Advertisements
ಯಶಸ್ಸನ್ನು ಎಲ್ಲರಿಗೂ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ! ಅನೇಕರು ಯಶಸ್ಸಿಗೆ ಹೆದರುತ್ತಾರೆ. ಇನ್ನು ಕೆಲವರು ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ನರಳುತ್ತಾರೆ. ಹೀಗೆ ಏನೇನೋ ಗೋಜಲು ಗೋಜಲುಗಳು ಮನುಷ್ಯ ಜನ್ಮದಲ್ಲಿ. ಈ ಗುರುಪ್ರಸಾದ್ ಪ್ರಾಯಶಃ ತನಗೆ ಬಂದ ಯಶಸ್ಸನ್ನು ಅರಗಿಸಿಕೊಳ್ಳಲಾಗದೆ, ಹಾಸಿಗೆ ಇದ್ದಷ್ಟು ಕಾಲು ಚಾಚದೆ ಎದ್ದು ಹೋಗಿರಬಹುದು ಎಂಬ ಗುಮಾನಿ ಇದೆ...

ಎರಡೂವರೆ ದಶಕಗಳ ಹಿಂದೆ ಹಿಂದೂಸ್ತಾನ್ ಲಿವರ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಕನಕಪುರದ ಪುರೋಹಿತರ ಕುಟುಂಬದ ಕುಡಿ ಗುರುಪ್ರಸಾದ್ ಸ್ಟಿಲ್ ಫೋಟೋಗ್ರಫಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆಗತಾನೆ ಪ್ರಸಿದ್ಧಿ ಪಡೆದಿದ್ದ ಚಿತ್ರಲೋಕ ಡಾಟ್ ಕಾಂ ವೀರೇಶ್ ಅವರನ್ನು ಲ್ಯಾಂಡ್ ಲೈನ್ ಮುಖೇನ ಸಂಪರ್ಕಿಸಿ ತನ್ನ ಫೋಟೋಗ್ರಫಿ ಬಗೆಗಿನ ಆಸಕ್ತಿ ಮತ್ತು ಸಿನೆಮಾ ಕುರಿತಾದ ಆಶೆಯನ್ನು ಮೊದಲಿಗೆ ಹೇಳಿಕೊಳ್ಳುತ್ತಾರೆ. ಅದಕ್ಕೆ ಪ್ರತಿಯಾಗಿ ವೀರೇಶ್ ಮೊದಲು ಒಂದೊಳ್ಳೆ ಕ್ಯಾಮೆರಾ ಸಂಪಾದಿಸಿಕೊಳ್ಳಿ ಎಂದವರು ಲೇಟೆಸ್ಟ್ ಮಾಡೆಲ್ ಕೂಡ ಸೂಚಿಸುತ್ತಾರೆ. ಅಂತೆಯೇ ಗುರು ಕ್ಯಾಮೆರಾ ಕೊಂಡು ಸ್ಟಿಲ್ ಫೋಟೋಗ್ರಫಿಯಲ್ಲಿ ತಮ್ಮ ಕೈಚಳಕ ಪ್ರದರ್ಶಿಸಲು ತೊಡಗುತ್ತಾರೆ. (ಈ ಬಗ್ಗೆ ಖುದ್ದು ಗುರುಪ್ರಸಾದ್ ಮಾತನಾಡಿರುವ ವಿಡಿಯೋ ಚಿತ್ರಲೋಕ ಡಾಟ್ ಕಾಂನಲ್ಲಿ ನೋಡಬಹುದು).

**

ಬೆರಗುಗಣ್ಣಿನ ಈ ವ್ಯಕ್ತಿ ಗುರುಪ್ರಸಾದ್‌ರನ್ನು ನಾನು ಮೊದಲು ನೋಡಿದ್ದು ‘ಎದ್ದೇಳು ಮಂಜುನಾಥ’ ಸಿನೆಮಾ (ಆಗಿನ್ನೂ ಸಿನೆಮಾ ಟೈಟಲ್ ಆಗಲಿ, ಆರ್ಟಿಸ್ಟ್‌ಗಳಾಗಲಿ ಫಿಕ್ಸ್ ಆಗಿರಲಿಲ್ಲ) ಬಗ್ಗೆ ಪ್ರತಿನಿತ್ಯ ತಡರಾತ್ರಿಯವರೆಗೆ ಚರ್ಚೆಗಳು ನಡೆಯುತ್ತಿದ್ದಾಗ. ವಾರಪತ್ರಿಕೆ ಖ್ಯಾತಿಯ ದಿವಂಗತ ವೈಕುಂಠರಾಜು ಅವರ ಮಗ ನನ್ನ ಹಿರಿಯ ಗೆಳೆಯ ದಿವಂಗತ ಸನತ್ ಕುಮಾರ್ ಅವರ ಕಾರಣಕ್ಕಾಗಿ ಅನೇಕ ಬಾರಿ ಈ ಸಿನೆಮಾ ಕುರಿತಾದ ಚರ್ಚೆಗಳಲ್ಲಿ ಭಾಗವಹಿಸಿದ್ದೆ. ಅದಾವುದೂ ಅಕಾಡೆಮಿಕ್ ಶಿಸ್ತಿನ ಚರ್ಚೆಗಳಲ್ಲವಾದರೂ ಡೈರೆಕ್ಟರ್‍‌ಗೆ ಬಹಳ ಮುಖ್ಯವಾದ ಚರ್ಚೆಗಳೇ ಆಗಿರುತ್ತಿದ್ದವು. ಅದಾಗ ಗುರುಪ್ರಸಾದ್ ಒಂದು ನೋಟ್ ಪ್ಯಾಡ್ ಜೊತೆಯಲ್ಲಿ ಒಯ್ಯುತ್ತಿದ್ದರು. ಗುಂಡಿನ ಟೇಬಲ್ ಮಾತಿನ ನಡುವೆ ಅವರಿಗಿಷ್ಟವಾದ ಅಥವಾ ಬಹಳ ಮುಖ್ಯ ಎನಿಸಿದ ಯಾವುದೋ ಸನ್ನಿವೇಶ ಅಥವಾ ಪ್ರಕರಣದ ಕುರಿತು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಆತುರಕ್ಕೆ ಬಿದ್ದಂತೆ ಮಾತು ಮುಂದೆ ಮಾಡುತ್ತಿದ್ದರು. ಆಗ ಸನತ್ ‘ಹೋಲ್ಡ್ ಆನ್… ನೀನು ಹೇಳೋ ವಿಷ್ಯ ನಿಧಾನಕ್ಕೆ ಹೇಳು, ಇವರ್‍ಯಾರೂ ನಮ್ಮ ಪ್ರಾಜೆಕ್ಟ್‌ನಲ್ಲಿ ಸಂಭಾವನೆ ಪಡೆಯುವ ಪೈಕಿ ಅಲ್ಲ. ಅವರ ಟೈಂ ನಮಗೆ ವಿಶ್ವಾಸದ ಬಳುವಳಿ’ ಎಂಬುದಾಗಿ ಮನವರಿಕೆ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ಗುರುಪ್ರಸಾದ್ ಯಾವ ಅಹಂ ಕೂಡ ಪ್ರದರ್ಶಿಸದೆ ಸನತ್ ಮಾತಿಗೆ ಗೋಣಾಡಿಸುತ್ತಿದ್ದರು. (ನಂತರದ ದಿನಗಳ ಕಥೆ ಬೇರೆಯೇ ಇದೆ. ಆ ಬಗ್ಗೆ ನನಗೆ ಫಸ್ಟ್ ಹ್ಯಾಂಡ್ ಇನ್ಫರ್ಮೇಷನ್ ಇಲ್ಲ).

Advertisements

**

ಇನ್ನು ಗುರುಪ್ರಸಾದ್ ಅವರಿಗೆ ಕೀರ್ತಿ ಶನಿಯ ಕಾಟ ಒಕ್ಕರಿಸಿದ ಬಗ್ಗೆ ಫೇಸ್ ಬುಕ್‌ನಲ್ಲಿ ಪತ್ರಕರ್ತರೊಬ್ಬರ ಟಿಪ್ಪಣಿ ಓದಿದೆ. ಅಂತೆಯೇ ನಗಲು ಕಾರಣ ಹುಡುಕುತ್ತಲೇ ಗಹಗಹಿಸಿ ನಗುತ್ತಿದ್ದ ಬಗ್ಗೆ ಟಿ.ಎನ್. ಸೀತಾರಾಂ ಅವರು ಬರೆದಿದ್ದಾರೆ. ಇರಲಿ. ಆಳದ ನೋವುಗಳನ್ನು ಮರೆಯಲು ನಗುವಿನ ಮೊರೆ ಹೋಗಿದ್ದಿರಬೇಕು ಗುರು!

**

‘ಎದ್ದೇಳು ಮಂಜುನಾಥ’ ಸಿನೆಮಾ ಮುಗಿದು ಮ್ಯೂಸಿಕ್ ರಿಲೀಸ್ ಕೂಡಾ ಪ್ರೆಸ್ ಕ್ಲಬ್ಬಿನಲ್ಲಿಯೇ ಆಯಿತು. ಇದೀಗ ಸ್ಪೋರ್ಟ್ಸ್ ಹಾಲ್ ಇರುವ ಜಾಗದಲ್ಲಿ ಆಗ ಖಾಲಿ ಪ್ಲಾಟ್ ಫಾರಂ ಇತ್ತು. ಹಿಂದೆ ಮರವೊಂದರ ಬ್ಯಾಕ್ ಡ್ರಾಪ್ (ಲೈವ್ ಮರ-ಸೆಟ್ಟಲ್ಲ ಮತ್ತೆ). ಈ ವಿಷಯ ನಿಮಗೆ ಹೇಳಲು ಕಾರಣವಿಷ್ಟೇ- ಗುರುಪ್ರಸಾದ್ ತನ್ನ ಸಾಮರ್ಥ್ಯಕ್ಕೆ ದಕ್ಕದ ಅವಕಾಶ, ಹಣ ಇತ್ಯಾದಿ ಕಾರಣಗಳಿಗೆ ಮೈತುಂಬಾ ಸಾಲ ಮಾಡಿಕೊಂಡು ಕುಡಿತದ ವ್ಯಸನಿಯಾಗಿದ್ದ ಎಂದು ಎಲ್ಲರೂ ಬರೆಯುತ್ತಿದ್ದಾರೆ. ಕುಡಿತ ಆತನಿಗೆ ಮೊದಲಿನಿಂದಲೂ ಇತ್ತು. ನಿತ್ಯವೂ ಹಲವು ಮಂದಿ ಕೂತು ಚರ್ಚೆ ನಡೆಸುತ್ತಾ ಪಾರ್ಟಿ ಮಾಡುತ್ತಿದ್ದುದನ್ನು ಕಂಡು ನಾನೇ ಒಮ್ಮೆ ಸನತ್ ಕುಮಾರ್ ಅವರಿಗೆ (ಸನತ್ ಎದ್ದೇಳು ಮಂಜುನಾಥ ಪ್ರೊಡ್ಯೂಸರ್) ‘ಸಾರ್.. ಸಿನೆಮಾದ್ದೂ… ಗುಂಡಿಂದೂ ಒಂದೇ ತೂಕ ಆಗೋತರ ಐತೆ’ ಎಂದು ಛೇಡಿಸಿದ್ದೆ. ಅದಕ್ಕವರು ಎಂದಿನ ಸಿಗ್ನೇಚರ್ ಶೈಲಿಯ ಜೋರು ನಕ್ಕು ಮರು ಮಾತನಾಡದೆ ಹೋದರು. ನಾನು ಬಿಡಬೇಕಲ್ಲಾ ಮತ್ತೊಂದು ದಿನ ಕೆಣಕಿದೆ (ಸಿನೆಮಾ ಆದ ಮೇಲೆ) 35-40 ಲಕ್ಷದ ಲೆಕ್ಕ ಹೇಳಿದ್ದರು. ಈ ವಿಷಯ ಹೇಳಲು ಕಾರಣವಿಷ್ಟೇ- ಗುರು ಅವರಿಗೆ ಕುಡಿತ ಹಳೆಯದು. ಸಾಲಗಳ ಬಾಧೆಯಲ್ಲಿ ಬಂದದ್ದಲ್ಲ.

**

ಯಶಸ್ಸನ್ನು ಎಲ್ಲರಿಗೂ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ! ಮನಃಶಾಸ್ತ್ರಜ್ಞರು ಹೇಳುವಂತೆ ಅನೇಕರು ಯಶಸ್ಸಿಗೆ ಹೆದರುತ್ತಾರೆ. ಇನ್ನು ಕೆಲವರು ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ನರಳುತ್ತಾರೆ. ಹೀಗೆ ಏನೇನೋ ಗೋಜಲು ಗೋಜಲುಗಳು ಮನುಷ್ಯ ಜನ್ಮದಲ್ಲಿ. ಈ ಗುರುಪ್ರಸಾದ್ ಪ್ರಾಯಶಃ ತನಗೆ ಬಂದ ಯಶಸ್ಸನ್ನು ಅರಗಿಸಿಕೊಳ್ಳಲಾಗದೆ, ಹಾಸಿಗೆ ಇದ್ದಷ್ಟು ಕಾಲು ಚಾಚದೆ ಎದ್ದು ಹೋಗಿರಬಹುದು ಎಂಬ ಗುಮಾನಿ ನನ್ನದು.

ಇದನ್ನು ಓದಿದ್ದೀರಾ?: ಪ್ರತಿಯೊಂದು ಆತ್ಮಹತ್ಯೆಯೂ ನಮ್ಮ ಆರೋಗ್ಯ ವ್ಯವಸ್ಥೆಯ ಮಿತಿಯ ದ್ಯೋತಕ

ಅಂದಹಾಗೆ ಗುರುಪ್ರಸಾದ್‌ನನ್ನು ಸನತ್ ಕುಮಾರ್ ಮತ್ತು ಕೋ ಪ್ರೊಡ್ಯೂಸರ್ ಶಂಕರ್ (ಶಂಕರಣ್ಣ) ಅವರಿಗೆ ಪರಿಚಯಿಸಿದ್ದು ನಾವೆಲ್ಲರೂ ಕಾರ್ಡ್ಸ್ ಟೇಬಲ್‌ನಲ್ಲಿ ಪೀಡೆ ಎಂದು ಅಭಿಮಾನದಿಂದಲೇ ಕರೆಯುತ್ತಿದ್ದ ಹಿರಿಯ ಜೀವ ಶ್ರೀಧರ್. ಇವರು ಕೆ.ಎಸ್.ಎಸ್.ಐ.ಡಿ.ಸಿ ನಿವೃತ್ತ ನೌಕರ. ಸಿನೆಮಾ, ಸಾಹಿತ್ಯ ಇತ್ಯಾದಿ ಮಂದಿಯ ಒಡನಾಟವಿದ್ದ ಕಾರಣ ತನ್ನ ಸ್ನೇಹಿತ ಕನಕಪುರರ ಪುರೋಹಿತರ ಮಗ ಗುರುಪ್ರಸಾದ್ ಅವರನ್ನು ತಂದು ಸನತ್ ಮಡಿಲಿಗೆ ಹಾಕಿದ್ದರು.

ಈಗ ಸನತ್ ಕುಮಾರ್ ತೀರಿಹೋಗಿದ್ದಾರೆ. ಶ್ರೀಧರ್ ಕೋವಿಡ್‌ನಲ್ಲಿ ನಿರ್ಗಮಿಸಿದರು. ಎದ್ದೇಳು ಮಂಜುನಾಥ ಕೋ ಪ್ರೊಡ್ಯೂಸರ್ ಶಂಕರಣ್ಣ (ಕಂಟ್ರಾಕ್ಟರ್) ಅವರಿಗೆ ಮೊನ್ನೆ ಗುರು ಸಾವಿನ ಸುದ್ದಿ ಕೇಳಿ ಫೋನ್ ಮಾಡಿದ್ದೆ. ‘ನಾಗೇಶು, ಇನ್ಮೇಲೆ ಅವನಿಗೆ ನೆಮ್ಮದಿ ಕಣೋ… ಹತ್ತು ವರ್ಷದಿಂದ ಒಂದು ದಿನಾನೂ ನೆಮ್ಮದಿಯಾಗಿ ಬದುಕಲಿಲ್ಲ’ ಎಂದು ನೋವಂಚಿಕೊಂಡರು. ಇದೇ ಶಂಕರಣ್ಣ ಗುರುಪ್ರಸಾದ್ ಅವರ ಡೈರೆಕ್ಟರ್ ಸ್ಪೆಷಲ್ ಸಿನೆಮಾ ಬೆನ್ನಿಗಿದ್ದವರು.

ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುವವರು ಮತ್ತು ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ನನಗೆ ಅನುಕಂಪವಿಲ್ಲ. ಆದರೂ ಗುರುಪ್ರಸಾದ್ ಆತ್ಮಕ್ಕೆ ಶಾಂತಿ ಕೋರಿ ಮಾತು ಮುಗಿಸುತ್ತೇನೆ. ಅಂದಹಾಗೆ ‘I don’t even subscribe to the idea of talking only good things about dead one’s’…

ಕೆ ಎನ್ ನಾಗೇಶ್
ಕೆ. ಎನ್ ನಾಗೇಶ್
+ posts

ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕೆ. ಎನ್ ನಾಗೇಶ್
ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ

2 COMMENTS

  1. ಶ್ರೀರಾಮಪುರದ 3 ನೆ ಅಡ್ಡ ರಸ್ತೆಯ ರಾಜುಪತ್ರಿಕೆಯ ಹತ್ತಿರವೇ ನಾವು ಇದ್ದದ್ದು..ಪ್ರೆಸ್ ಕ್ಲಬ್ ಆಡಿಯೋ ರಿಲೀಸ್ ಕಾರ್ಯಕ್ರಮ ದಲ್ಲಿ ನಾನು ಕೂಡ ಭಾಗವಹಿಸಿದ್ದೆ ಎಲ್ಲವನ್ನು ತನ್ನೊಳಗೆ ಸೇರಿಸಿಕೊಂಡು ಅರಗಿಸಿ ಕೊಳ್ಳಲಾಗದೆ ಹೋದ ಜೀವ ಗುರುಪ್ರಸಾದ್ ರವರ ಸಾವು. ಅವರ ಆತ್ಮವಾದರೂ ನೆಮ್ಮದಿಯಾಗಿರಲಿ 💐🙏

  2. ಅವರ ಒಡನಾಡಿಗಳಲ್ಲಿ ಒಬ್ಬರೆನಿಸಿ ಕೊಂಡ ನೀವುಗಳು , ಅವರು ಹೊರಟಮೇಲೆ ಒಂದೊಂದೆ ಹಳೇ ನೆನಪಿನ ಹನಿಗಳನ್ನ ಕೈ ಚೆಲ್ಲೋ ಮೊದಲು ಅವರಿದ್ದಾಗ ಹುಟ್ಟುತ್ತಿದ್ದ ಅಖಂಡ ಧೈತ್ಯ ಪ್ರತಿಭೆಯ ಸಸ್ಯ ಕಾಶಿಗೆ ಒಂದು ಲೋಟ ನೀರು ಹಾಯಿಸೋ ಕೆಲಸವನ್ನ ಆರ್ಥಿಕವಾಗಿ , ವೈಯಕ್ತಿಕವಾಗಿ ಆದ್ರೂ ಮಾಡಿದ್ರೆ ಇವತ್ತು ಆ ಸಸ್ಯ ಕಾಶಿ ಒಂದು ಹೂದೋಟ ನೇ ಆಗ್ತಿತ್ತು ….

    ಕಳ್ಕೊಂಡ್ರಿ ಒಬ್ಬ ಅಸಾಮಾನ್ಯ ಬರವಣಿಗೆಗಾರನನ್ನ ….

    ಕನ್ನಡದ ಕೋಟ್ಯಾಧಿಪತಿ ಅವರ ಕನ್ನಡ ರತ್ನಕೋಶ ನನ್ನಲ್ಲಿದೆ ಎಂತಾ ಪದಗಳು … ಅವರ ಸವಿಸ್ತಾರ ಅರ್ಥಗಳು ….ಮತ್ತೊಮ್ಮೆ ಹುಟ್ಟೋಲ್ಲ ಬಿಡಿ .. ಸರಸ್ವತಿ ಪುತ್ರ … 🙏🙏😥

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

Download Eedina App Android / iOS

X