ನಮ್ಮ ದೇಶದ ಪ್ರತಿಯೊಬ್ಬರೂ ಸಮಾನತೆಯಿಂದ ಜೀವಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಪ್ರತಿಯೊಂದು ಧರ್ಮಕ್ಕೂ ಒಂದೊಂದು ಗ್ರಂಥ ಇದೆ. ಆದರೆ ಎಲ್ಲಾ ಧರ್ಮಗಳಿಗಿಂತಲೂ ಸಂವಿಧಾನವೇ ಪವಿತ್ರ ಗ್ರಂಥ ಎಂದು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಹೇಳಿದರು.
ಕೋಲಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಡಾ.ಬಿ.ಆರ್ ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಹೆಜ್ಜೆ ಗುರುತುಗಳನ್ನು ಅರಿತು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ವಿಶ್ವದ ಅತೀ ದೊಡ್ಡ ಪ್ರಜ್ಞಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ರೂಪಿಸಿದ್ದಾರೆ. ದೇಶ ಪ್ರಸ್ತುತ ಶಾಂತಿ ಸೌಹಾರ್ಧತೆಯಿಂದ ಮುನ್ನೆಡೆಯಲು ಭದ್ರ ತಳಪಾಯ ಹಾಕಿಕೊಟ್ಟಿರುವ ಸಂವಿಧಾನವೇ ಕಾರಣ ಎಂದರು.

ಮೀಸಲಾತಿಯೇ ಇಲ್ಲದ ಸಂದರ್ಭದಲ್ಲಿ ಯಾರೂ ಓದದಷ್ಟು ಪದವಿಗಳನ್ನು ಅಂಬೇಡ್ಕರ್ ಓದಿದ್ದಾರೆ. ಆದರೆ ಪ್ರಸ್ತುತ ಮೀಸಲಾತಿಯಿದ್ದು, ಸಾಕಷ್ಟು ಅವಕಾಶಗಳಿವೆ. ಆದರೂ ಶಿಕ್ಷಣಕ್ಕೆ ಅಧ್ಯತೆ ನೀಡುತ್ತಿಲ್ಲ. ಸಾರ್ವಜನಿಕರು ಶಿಕ್ಷಣದ ಮಹತ್ವವನ್ನರಿತು ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಡಾ.ಕುಪ್ಪಹಳ್ಳಿ ಬೈರಪ್ಪ ಮಾತನಾಡಿ, ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲೂ ಸಹ ವರ್ಷದ 365 ದಿನವು ನೆನಪು ಮಾಡಿಕೊಳ್ಳುವ ಮಹಾನ್ ಚೇತನ ಅಂಬೇಡ್ಕರ್. ಎಲ್ಲಿ ಭ್ರಷ್ಟಾಚಾರ, ಅಸಮಾನತೆ, ಅನ್ಯಾಯ ಇದೆಯೋ, ಅಲ್ಲಿ ಸಂವಿಧಾನ ಪ್ರಸ್ತುತವೆನಿಸುತ್ತದೆ. ಅಂಬೇಡ್ಕರ್ ಆಶಯಗಳನ್ನು ಬಲಪಡಿಸಲು ಇಂತಹ ಪುತ್ಥಳಿಗಳ ಅನಾವರಣ ಹೆಚ್ಚಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಹರೀಶ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಜಿಪಂ ಸಿಎ ಗಂಗಾಧರಯ್ಯ, ಮಾಜಿ ಗ್ರಾಪಂ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ನಾಗೇಂದ್ರ, ವೆಂಕಟೇಶಪ್ಪ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಹೊನ್ನೇನಹಳ್ಳಿ ಗ್ರಾಪಂ ಸದಸ್ಯರಾದ ಶ್ರೀನಾಥ್, ಗಣೇಶ್, ಜಯರಾಮ್, ಯಲ್ಲಮ್ಮ, ರೇಣುಕಮ್ಮ, ಶಿಲ್ಪಾ, ಸೌಂದರ್ಯ, ಅರುಣಾ, ಗೋವಿಂದರಾಜು, ಮುಂತಾದವರು ಇದ್ದರು.